Advertisement

ಶ್ರೀಕೃಷ್ಣ ಜನ್ಮಭೂಮಿ ಟ್ರಸ್ಟ್ ಹೆಸರಿನಲ್ಲಿ ವಂಚನೆ, 13 ಮಂದಿ ಬಂಧನ: ಏನಿದು ಜನ್ಮಸ್ಥಳ ವಿವಾದ

08:41 AM Aug 22, 2020 | Nagendra Trasi |

ಮಥುರಾ:ಅಯೋಧ್ಯೆಯಲ್ಲಿ ಶ್ರೀರಾಮಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣ ಕಾರ್ಯ ಚುರುಕುಗೊಂಡಿದ್ದರೆ, ಮತ್ತೊಂದೆಡೆ ಜನರಿಂದ ಹಣ ವಸೂಲಿ ಮಾಡಿ ವಂಚಿಸಿರುವ ಆರೋಪದಲ್ಲಿ ಭಾಗವತ್ತಾಚಾರ್ಯ ಸೇರಿದಂತೆ 13 ಮಂದಿಯನ್ನು ಮಥುರಾ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

Advertisement

ಗೋವಿಂದ್ ನಗರ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಎಫ್ ಐಆರ್ ಪ್ರಕಾರ, ಭಾಗವತ್ತಾಚಾರ್ಯ ಸೇರಿದಂತೆ 13 ಮಂದಿ ಶ್ರೀಕೃಷ್ಣ ಜನ್ಮಭೂಮಿ ಟ್ರಸ್ಟ್ ಹೆಸರಿನ್ನು ನಕಲಿಯಾಗಿ ರಚಿಸಿಕೊಂಡು ಜನರ ದಿಕ್ಕು ತಪ್ಪಿಸಿ ಹಣ ಸಂಗ್ರಹಿಸುತ್ತಿದ್ದಾರೆ ಎಂದು ಶ್ರೀಕೃಷ್ಣ ಜನ್ಮಭೂಮಿ ಟ್ರಸ್ಟ್ ಪೊಲೀಸರಿಗೆ ದೂರು ನೀಡಿತ್ತು.

ಟ್ರಸ್ಟ್ ಹೆಸರನ್ನು ದುರ್ಬಳಕೆ ಮಾಡಿಕೊಂಡು ಜನರಿಂದ ಹಣ ಸಂಗ್ರಹಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಜನರು ಈ ಬಗ್ಗೆ ನಮ್ಮನ್ನು ವಿಚಾರಿಸಿದಾಗ ಈ ನಕಲಿ ಟ್ರಸ್ಟ್ ವಿಚಾರ ಬಹಿರಂಗವಾಗಿರುವುದಾಗಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿರುವ ಮಥುರಾದ ಶ್ರೀಕೃಷ್ಣ ಜನ್ಮಭೂಮಿ ಟ್ರಸ್ಟ್ ಕಾರ್ಯದರ್ಶಿ ಕಪಿಲ್ ಶರ್ಮಾ ತಿಳಿಸಿರುವುದಾಗಿ ವರದಿ ಹೇಳಿದೆ.

1944ರಿಂದ ಈ ಪ್ರದೇಶವನ್ನು ಶ್ರೀಕೃಷ್ಣ ಜನ್ಮಭೂಮಿ ಟ್ರಸ್ಟ್ ನವೀಕರಿಸುವ ಕೆಲಸ ಮಾಡುತ್ತಿರುವುದಾಗಿ ಎಫ್ ಐಆರ್ ದಾಖಲಿಸಿದ ಶರ್ಮಾ ತಿಳಿಸಿದ್ದಾರೆ. ವಂಚನೆ ಆರೋಪದಡಿ 13 ಮಂದಿ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 406, 419 ಕಾಯ್ದೆಯನ್ವಯ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಏನಿದು ಮಥುರಾ ಕೃಷ್ಣ ಜನ್ಮಸ್ಥಳ ವಿವಾದ?

ಮಥುರಾದ ಶ್ರೀಕೃಷ್ಣ ಜನ್ಮಸ್ಥಾನದಲ್ಲಿ ಈಗಾಗಲೇ ದೇವಾಲಯವಿದೆ. ಆದರೆ ಇದರ ಸಮೀಪದಲ್ಲೇ ಶಾಹಿ ಈದ್ಗಾ ಮೈದಾನವಿದೆ. ಈ ಮೈದಾನದ ಜಾಗ ಐತಿಹಾಸಿಕವಾಗಿ ಕೃಷ್ಣ ದೇವಸ್ಥಾನಕ್ಕೆ ಸೇರಿದ್ದಾಗಿದೆ ಎಂಬುದು ಶ್ರೀಕೃಷ್ಣ ಜನ್ಮಭೂಮಿ ಟ್ರಸ್ಟ್ ನ ವಾದವಾಗಿದೆ. ದೇವಾಲಯದ ಪಕ್ಕದಲ್ಲಿರುವ ಮಸೀದಿಯ ಸಮೀಪ ಇರುವ ನಾಲ್ಕೂವರೆ ಎಕರೆ ಜಾಗ ಹಬ್ಬಹರಿದಿನಗಳಲ್ಲಿ ರಂಗಮಂಚವಾಗಿ ಬಳಸಲು ಅನುಮತಿ ನೀಡಬೇಕೆಂದು ಶ್ರೀಕೃಷ್ಣ ದೇವಸ್ಥಾನದ ಆಡಳಿತ ಮಂಡಳಿ ಬೇಡಿಕೆ ಇಡುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ ಶ್ರೀಕೃಷ್ಣ ದೇವಾಲಯಕ್ಕೆ ಜಾಗ ದೊರಕಿಸಿಕೊಡಲು ಶ್ರೀಕೃಷ್ಣಜನ್ಮಭೂಮಿ ನಿರ್ಮಾಣ ಟ್ರಸ್ಟ್ ಸ್ಥಾಪನೆಯಗಿದ್ದು, ಇದರಲ್ಲಿ 14 ರಾಜ್ಯಗಳ 80 ಸಂತರು ಇದ್ದು, ವೃಂದಾವನದ 11 ಸಂತರು ಟ್ರಸ್ಟಿಗಳಾಗಿದ್ದಾರೆ.

17ನೇ ಶತಮಾನದಲ್ಲಿ ಮಥುರೆ ಮೇಲೆ ದಾಳಿ ನಡೆದು ಎಲ್ಲವೂ ನುಚ್ಚು ನೂರಾಗಿತ್ತು. ಅಷ್ಟೇ ಅಲ್ಲ ಔರಂಗಜೇಬನ ದಾಳಿಯಿಂದಾಗಿ ಮಥುರೆಯ ಶ್ರಿಕೃಷ್ಣ ದೇಗುಲ ಧ್ವಂಸವಾಗಿತ್ತು ಎನ್ನಲಾಗಿದೆ. ಈ ದೇಗುಲದ ಮೇಲೆಯೇ ಮಸೀದಿ ನಿರ್ಮಾಣವಾಗಿದ್ದು, ಮಥುರೆಯ ಮತ್ತೊಂದು ಪ್ರಮುಖ ದೇವಾಲಯವಾದ ಕೇಶವ ದೇವಾಲಯವನ್ನೂ ಔರಂಗಜೇಬ್ ಧ್ವಂಸ ಮಾಡಿದ್ದ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next