Advertisement

13 ಸರಕಾರಿ ಶಾಲೆಗಳು ಶೀಘ್ರ ಇ-ಸ್ಮಾರ್ಟ್‌ ಸ್ಕೂಲ್‌

12:08 AM Apr 28, 2019 | Sriram |

ಮಹಾನಗರ: ಮಹತ್ವಾ ಕಾಂಕ್ಷೆಯ ಮಂಗಳೂರು ಸ್ಮಾರ್ಟ್‌ ಸಿಟಿ ಯೋಜನೆಯ ಪ್ರದೇಶಧಾರಿತ ಅಭಿವೃದ್ಧಿ ಯೋಜನೆಯಡಿಯಲ್ಲಿ ನಗರ ವ್ಯಾಪ್ತಿಯ ಒಟ್ಟು 13 ಸರಕಾರಿ ಶಾಲೆಗಳು ಸ್ಮಾರ್ಟ್‌ ಆಗಲಿವೆ.

Advertisement

ಪ್ರದೇಶಾಧಾರಿತ ಅಭಿವೃದ್ಧಿ ಯೋಜನೆ ಯಡಿ ನಗರದ 8 ವಾರ್ಡ್‌ಗಳನ್ನು ಆಯ್ಕೆ ಮಾಡಲಾಗಿದ್ದು, ಆ ಎಂಟು ವಾರ್ಡ್‌ಗಳ ಸಂಪೂರ್ಣ ಅಭಿವೃದ್ಧಿಯನ್ನು ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಮಾಡಲಾಗುತ್ತಿದೆ. ಈ ನಡುವೆ 14 ಕೋಟಿ ರೂ. ವೆಚ್ಚದಲ್ಲಿ ಆ ಭಾಗದ 13 ಸರಕಾರಿ ಶಾಲೆಗಳನ್ನು ಸ್ಮಾರ್ಟ್‌ ಸ್ಕೂಲ್‌ ಆಗಿ ಪರಿವರ್ತಿಸಲು ಯೋಜನೆ ರೂಪಿಸಲಾಗಿದೆ. ಮೊದಲ ಹಂತದಲ್ಲಿ 9 ಕೋಟಿ ರೂ. ವೆಚ್ಚದಲ್ಲಿ ಶಾಲೆಗಳ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಎರಡನೇ ಹಂತದಲ್ಲಿ ಶಾಲೆಗಳಿಗೆ ಇ- ಟಚ್‌ ದೊರೆಯಲಿದೆ.

ಬಹಳ ಹಳೆಯ ಶಾಲೆಗಳ ಅಭಿವೃದ್ಧಿ
ಮೂಲಸೌಕರ್ಯ ಅಭಿವೃದ್ಧಿಗಾಗಿ ಆಯ್ಕೆ ಮಾಡಿರುವ ಶಾಲೆಗಳೆಲ್ಲ ಬಹಳ ಹಳೆಯವು. ಅವುಗಳು ದುಸ್ಥಿತಿಯಲ್ಲಿವೆ. ಈ ಶಾಲೆಗಳಿಗೆ ಕಂಪ್ಯೂಟರ್‌ ಒದಗಿ ಸುವ ಮುನ್ನ ಶಾಲೆಗಳ ಕಟ್ಟಡ, ಮೂಲ ಸೌಕರ್ಯ ಅಭಿವೃದ್ಧಿ ಪಡಿಸಲು ಚಿಂತನೆ ನಡೆಸಲಾಗಿದೆ. ಈ ನಿಟ್ಟಿನಲ್ಲಿ ಮೊದಲ ಹಂತವಾಗಿ ನಗರ ವ್ಯಾಪ್ತಿಯ ಆಯ್ದ ಶಾಲೆಗಳ ಕಾಂಪೌಂಡ್‌, ಗೋಡೆ, ಶೌಚಾಲಯ, ಮೈದಾನ, ನೀರಿನ ವ್ಯವಸ್ಥೆ, ಮೇಲ್ಛಾವಣಿಗಳನ್ನು ಅಭಿವೃದ್ಧಿ ಪಡಿಸ ಲಾಗುತ್ತದೆ. ಇದಕ್ಕಾಗಿ ಈಗ ಟೆಂಡರ್‌ ಕರೆಯಲಾಗಿದ್ದು, ಶೀಘ್ರ ಕಾಮಗಾರಿ ಕೂಡ ಆರಂಭಗೊಳ್ಳುವ ನಿರೀಕ್ಷೆಯಿದೆ.

ಇ- ಸ್ಮಾರ್ಟ್‌ ಸ್ಕೂಲ್‌
ಮೊದಲ ಹಂತದಲ್ಲಿ ಅಭಿವೃದ್ಧಿ ಪಡಿಸಿದ ಬಳಿಕ ಶಾಲೆಗಳಿಗೆ 5 ಕೋಟಿ ರೂ. ವೆಚ್ಚದಲ್ಲಿ ಕಂಪ್ಯೂಟರ್‌ , ಪ್ರೊಜೆಕ್ಟರ್‌ಗಳನ್ನು ಅಳವಡಿಸಲಾಗುತ್ತದೆ. ಈ ಶಾಲೆಗಳ ಎಲ್ಲ ಪಾಠಗಳನ್ನು ಚಿತ್ರ, ವೀಡಿಯೋ ಸಹಿತವಾಗಿ ಪ್ರೊಜೆಕ್ಟರ್‌ಗಳ ಮೂಲಕ ತೋರಿಸಲಾಗುತ್ತದೆ. ಅಂದರೆ ಮಕ್ಕಳಿಗೆ ಸುಲಭವಾಗಿ ಪಾಠ ಅರ್ಥವಾಗಬೇಕು ಎನ್ನುವ ಉದ್ದೇಶದಿಂದ ಪಠ್ಯದಲ್ಲಿರುವ ವಿಷಯಗಳಿಗೆ ವೀಡಿಯೋ , ಚಿತ್ರಗಳನ್ನು ಅಳವಡಿಸಿ ಪಾಠ ಮಾಡಲಾಗುತ್ತದೆ. ಇದಕ್ಕಾಗಿ ಶಿಕ್ಷಕರಿಗೆ ಪ್ರತ್ಯೇಕ ತರಬೇತಿಗಳನ್ನು ನೀಡಲಾಗುತ್ತದೆ. ಈ ಪ್ರಕ್ರಿಯೆ ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭವಾಗಲಿದೆ.

ಸ್ಮಾರ್ಟ್‌ ಆಗಲಿರುವ ಸರಕಾರಿ ಶಾಲೆಗಳು
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸ್ತಿಗಾರ್ಡನ್‌, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೀರೇಶ್ವಾಲ್ಯ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಂಡೇಶ್ವರ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹೊಗೆ ಬಜಾರ್‌, ಸರಕಾರಿ ಪ್ರೌಢಶಾಲೆ ಹೊಗೆಬಜಾರ್‌, ಸರಕಾರಿ ಪ್ರಾಕ್ಟಿಸಿಂಗ್‌ ಹೆಚ್‌.ಎಸ್‌ ಮಂಗಳೂರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಂದರು(ಉರ್ದು), ಸರಕಾರಿ ಪ್ರೌಢಶಾಲೆ ಬಂದರು (ಉರ್ದು), ಪ್ರೈಮರಿ ಶಾಲೆ ಜ್ಯೋತಿ, ಸೆಕೆಂಡರಿ ಸ್ಕೂಲ್‌ ಜ್ಯೋತಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೋಳಾರ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೋಳಾರ ಪಶ್ಚಿಮ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾರ್‌ಸ್ಟ್ರೀಟ್‌.

Advertisement

 ಖಾಸಗಿ ಶಾಲೆಯಂತೆ ಸರಕಾರಿ ಶಾಲೆ ಅಭಿವೃದ್ಧಿ
ಸ್ಮಾರ್ಟ್‌ಸಿಟಿಯ ಪ್ರದೇಶಾಧಾರಿತ ಅಭಿವೃದ್ಧಿ ಯೋಜನೆಯಡಿಯಲ್ಲಿ 13 ಸರಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿ ಮಾಡಲಾಗುತ್ತದೆ. ಮೂಲಸೌಕರ್ಯ ಒದಗಿಸುವುದರೊಂದಿಗೆ ಪಾಠಗಳನ್ನು ಪ್ರೊಜೆಕ್ಟರ್‌ ಮೂಲಕ ಹೇಳಿಕೊಡ ಲಾಗುತ್ತದೆ. ಖಾಸಗಿ ಶಾಲೆಯಂತೆ ಸರಕಾರಿ ಶಾಲೆಯನ್ನು ಅಭಿವೃದ್ಧಿಪಡಿಸಲಾಗುತ್ತದೆ. ಇದಕ್ಕಾಗಿ ಶಿಕ್ಷಣ ಇಲಾಖೆಯ ಸಹಕಾರವನ್ನು ಕೋರಲಾಗಿದೆ.
– ನಾರಾಯಣಪ್ಪ,
ಮಂಗಳೂರು ಸ್ಮಾರ್ಟ್‌ ಸಿಟಿ ಆಡಳಿತ ನಿರ್ದೇಶಕ

ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next