Advertisement

51 ಪಶು ಆಸ್ಪತ್ರೆಗೆ 13 ಮಂದಿ ವೈದ್ಯರು..!

08:42 PM Mar 01, 2020 | Lakshmi GovindaRaj |

ಚನ್ನರಾಯಪಟ್ಟಣ: ಪಶುಗಳಿಗೆ ಚಿಕಿತ್ಸೆ ನೀಡಬೇಕಾದ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಗೆ ವೈದ್ಯರ ಹಾಗೂ ಸಿಬ್ಬಂದಿ ಕೊರತೆ ಕಾಡುತ್ತಿದ್ದು, ತಾಲೂಕಿನ ಜಾನುವಾರುಗಳಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ. ತಾಲೂಕಿನಲ್ಲಿ 51 ಪಶು ಆಸ್ಪತ್ರೆಗಳಿದ್ದು, ಕೇವಲ 13 ಮಂದಿ ವೈದ್ಯರು ಮಾತ್ರ ಇದ್ದಾರೆ.

Advertisement

ಇದಲ್ಲದೇ ಪಶು ಪರಿವೀಕ್ಷಕರು, ಜಾನುವಾರು ಅಭಿವೃದ್ಧಿ ಅಧಿಕಾರಿ, ಆಸ್ಪತ್ರೆ ಮೇಲ್ವಿಚಾರಕರು ಸೇರಿದಂತೆ ವಿವಿಧ ಹುದ್ದೆಗಳು ದಶಕಗಳಿಂದ ಖಾಲಿ ಇದ್ದರೂ ನೇಮಕಾತಿ ಮಾಡಲು ಸರ್ಕಾರಗಳು ಮುಂದಾಗುತ್ತಿಲ್ಲ. ಇದರಿಂದಾಗಿ ಹೈನುಗಾರಿಕೆ ಮಾಡುವ ರೈತರಿಗೆ ಹಾಗೂ ರಾಸುಗಳನ್ನು ಹೊಂದಿರುವವರಿಗೆ ಸಮರ್ಪಕ ಸೇವೆ ದೊರೆಯದೇ ಬಹಳ ತೊಂದರೆ ಯಾಗುತ್ತಿದೆ.

ಕಾಯಿಲೆ ನಿಯಂತ್ರಣ ಕಷ್ಟ: ಬೇಸಿಗೆ ಸಮೀಪಿಸಿದೆ ಈ ವೇಳೆಯಲ್ಲಿ ರಾಸುಗಳಿಗೆ ರೈತರು ಒಣ ಮೇವು ಹಾಕುತ್ತಾರೆ. ಇನ್ನು ಬಿಸಿಲ ತಾಪಕ್ಕೆ ಚಪ್ಪೆರೋಗ, ಕುಂದುರೋಗ, ಗಂಟಲುಬೇನೆ, ಕಾಲುಬೇನೆ, ಕರಳುಬೇನೆ, ಕೆಚ್ಚಲು ಬಾವು, ಕಾಲು ಬಾಯಿರೋಗ ಬರುವುದಲ್ಲದೇ ಹಲವು ರಾಸುಗಳು ಸೇವನೆ ಮಾಡುವ ಆಹಾರ ವಿಷವಾಗುತ್ತದೆ. ಇಂತಹ ವೇಳೆಯಲ್ಲಿ ಚಿಕಿತ್ಸೆ ಕೊಡಿಸಲು ರೈತರು ಹರ ಸಾಹಸ ಪಡುವಂತಾಗಿದೆ. ಇದಲ್ಲದೇ ಕುರಿ, ಮೇಕೆ, ಕೋಳಿ, ನಾಯಿಗಳಿಗೆ ರೋಗ ಬಂದರೂ ವೈದ್ಯರನ್ನು ಸಂಪರ್ಕಿಸುವುದು ಕಷ್ಟವಾಗುತ್ತಿದೆ.

ಹೆಚ್ಚು ಒತ್ತಡ: ತಾಲೂಕಿನಲ್ಲಿರುವ ಬೆರಳೆಣಿಕೆಯಷ್ಟು ವೈದ್ಯರು ಜಾನುವಾರುಗಳ ತಪಾಸಣೆಯನ್ನು ಮಾತ್ರ ಮಾಡುತ್ತಿಲ್ಲ ಚಿರತೆ ದಾಳಿಗೆ ತುತ್ತಾದ ರಾಸುಗಳ ತಪಾಸಣೆ ಮಾಡುವುದು, ಒಂದು ವೇಳೆ ರೋಗಕ್ಕೆ ತತ್ತಾಗಿ ಮೃತಪಟ್ಟರೆ ಮಹಜರ್‌ ಮಾಡಿ ವರದಿ ನೀಡುವುದು. ವಿಮೆ ದೃಢೀಕರಣ ಕೆಲಸವನ್ನೂ ವೈದ್ಯರೇ ಮಾಡಬೇಕಾಗಿದೆ. ಲಸಿಕಾ ಅಭಿಯಾನದಲ್ಲಿ ಪಾಲ್ಗೊಳಬೇಕು, ರೈತರಿಗೆ ಶಿಬಿರ ಏರ್ಪಡಿಸಿ ರಾಸುಗಳನ್ನು ಯಾವ ರೀತಿಯಲ್ಲಿ ಜೋಪಾನವಾಗಿ ನೋಡಿಕೊಳ್ಳಬೇಕು ಎನ್ನುವ ಮಾಹಿತಿಯನ್ನು ಇವರೇ ನೀಡಬೇಕಾಗಿದ್ದು ಒತ್ತಡದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

12 ಆಸ್ಪತ್ರೆಗೆ ಪ್ರಭಾರಿ ವೈದ್ಯರು: ತಾಲೂಕಿನ ಬಾಗೂರು ಆಸ್ಪತ್ರೆ ವೈದ್ಯ ಹೆಚ್ಚುವರಿಯಾಗಿ ನುಗ್ಗೇಹಳ್ಳಿ ಆಸ್ಪತ್ರೆಯನ್ನು ನೋಡಿಕೊಳ್ಳಬೇಕಾಗಿದೆ. ಹತ್ತಿಹಳ್ಳಿ ಆಸ್ಪತ್ರೆ ಪಶುವೈದ್ಯ ಜಿನ್ನೇನಹಳ್ಳಿಯಲ್ಲಿಯೂ ಕರ್ತವ್ಯ ಮಾಡಬೇಕಾಗಿದೆ. ಇದೇ ರೀತಿ ಹಿರೀಸಾವೆ ವೈದ್ಯ ನಾಲ್ಕು ಆಸ್ಪತ್ರೆಯಲ್ಲಿ ಅಂದರೆ ದಿಡಗ, ಕಬ್ಬಳಿ, ಮಟ್ಟನವಿಲೆ, ಅಯ್ಯರಹಳ್ಳಿ ಆಸ್ಪತ್ರೆಗೆ ಆಗಮಿಸಿವು ರೋಗಗ್ರಸ್ಥ ರಾಸುಗಳ ತಪಾಸಣೆ ಮಾಡಬೇಕಾಗಿದೆ.

Advertisement

ಕಲ್ಕೆರೆ ವೈದ್ಯ ರಾಯಸಮುದ್ರ ಕಾವಲಿನಲ್ಲಿರುವ ಅಮೃತ್‌ಮಹಲ್‌ ತಳಿ ಸಂವರ್ಧನ ಉಪಕೇಂದ್ರದಲ್ಲಿನ ನೂರಾರು ರಾಸುಗಳ ತಪಾಸಣೆ ಮಾಡಬೇಕಿದೆ. ಅಣತಿ ವೈದ್ಯ ಕೆಂಬಾಳು, ಬೋಳಘಟ್ಟ, ರಾಮ್‌ಪುರ ನೋಡಿಕೊಂಡರೆ ಉದಯಪುರದವರು ದಂಡಿಗನಹಳ್ಳಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ನೀಡಬೇಕಾಗಿದೆ.

ಅಧಿಕಾರಿಯೂ ಆಸ್ಪತ್ರೆಗೆ ತೆರಳುತ್ತಿದ್ದಾರೆ: ತಾಲೂಕು ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ವಿ.ಕೃಷ್ಣಮೂರ್ತಿ ತಾಲೂಕಿನ ಎಲ್ಲಾ ಪಶು ಆಸ್ಪತ್ರೆಗಳನ್ನು ನೋಡಿಕೊಳ್ಳುವುದಲ್ಲದೇ ಎಲ್ಲಿ ವೈದ್ಯರು ಸರಿಯಾಗಿ ಸೇವೆ ಮಾಡುತ್ತಿದ್ದಾರೆ ಎನ್ನುವುದನ್ನು ಗಮನ ಹರಿಸಬೇಕು. ಇದರೊಂದಿಗೆ ಸರ್ಕಾರದ ಯೋಜನೆಯನ್ನು ಜನತೆಗೆ ತಲುಪಿಸುವ ಕೆಲಸ, ತಾಲೂಕು ಪಂಚಾಯಿತಿ ಸಾಮಾನ್ಯ ಸಭೆ, ಕೆಡಿಪಿ ಸಭೆ, ಶಾಸಕರ ಸಭೆ ಸೇರಿದಂತೆ ವಿವಿಧ ಸಭೆಗೆ ಹಾಜರಾಗಬೇಕಿದ್ದರೂ ಪಟ್ಟಣದ ಪಶು ಆಸ್ಪತ್ರೆಗೆ ಆಗಮಿಸುವ ರಾಸುಗಳ ಚಿಕಿತ್ಸೆ ನೀಡುವುದಲ್ಲದೆ ಹೆಚ್ಚುವರಿಯಾಗಿ ಆನೇಕರೆ ಗ್ರಾಮದ ಆಸ್ಪತ್ರೆಗೂ ತೆರಳಬೇಕಾಗಿದೆ.

ಹೋಬಳಿವಾರು ರಾಸುಗಳ ವಿವರ: ಬಾಗೂರು ಹೋಬಳಿಯಲ್ಲಿ 71 ಗ್ರಾಮಗಳಿದ್ದು ಎಮ್ಮೆ 7,984, ಕುರಿ 6,658, ಮೇಕೆ 5,424, ಹಂದಿ 38, ನಾಯಿ 576, ಕೋಳಿ 23,128 ಇವೆ, ದಂಡಿಗನಹಳ್ಳಿ ಹೋಬಳಿಯಲ್ಲಿ 74 ಗ್ರಾಮವಿದ್ದು, ಎಮ್ಮೆ 7,473, ಕುರಿ 4,852, ಮೇಕೆ 4,556, ಹಂದಿ 18, ನಾಯಿ 180, ಕೋಳಿ 14,086 ಇವೆ. ನುಗ್ಗೇಹಳ್ಳಿ ಹೋಬಳಿಯಲ್ಲಿ 51 ಗ್ರಾಮವಿದ್ದು, ಎಮ್ಮೆ 5,612, ಕುರಿ 4,119, ಮೇಕೆ 3,032,

ಹಂದಿ 123, ನಾಯಿ 426, ಕೋಳಿ 15,305 ಇವೆ. ಹಿರೀಸಾವೆ 67 ಗ್ರಾಮವಿದ್ದು, ಎಮ್ಮೆ 9,448, ಕುರಿ 7,999, ಮೇಕೆ 10,338, ಹಂದಿ 220, ನಾಯಿ 1,292, ಕೋಳಿ 44,517 ಇವೆ. ಶ್ರವಣಬೆಳಗೊಳ 65 ಗ್ರಾಮವಿದ್ದು ಎಮ್ಮೆ 9,530, ಕುರಿ 6,392, ಮೇಕೆ 6,735, ಹಂದಿ 73, ನಾಯಿ 490, ಕೋಳಿ 66,292 ಇವೆ. ಕಸಬಾ 79 ಗ್ರಾಮವಿದ್ದು ಎಮ್ಮೆ 6,420, ಕುರಿ 2,671, ಮೇಕೆ 3,751, ಹಂದಿ 106, ನಾಯಿ 253, ಕೋಳಿ 23509 ಇವೆ.

ವೈದ್ಯರು ಕೊರತೆ ಇರುವ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದಿರುವುದಲ್ಲದೇ ಶಾಸಕರು, ತಾಲೂಕು ಪಂಚಾಯಿತಿ ಸಾಮಾನ್ಯ ಸಭೆ ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದೆ. ಇವರು ವೈದ್ಯರಲ್ಲಿಯೇ ಎಲ್ಲಾ ಆಸ್ಪತ್ರೆಗಳಲ್ಲಿ ಕೆಲಸ ಮಾಡಿಸಲಾಗುತ್ತಿದೆ.
-ವಿ.ಕೃಷ್ಣಮೂರ್ತಿ, ಸಹಾಯಕ ನಿರ್ದೇಶಕರು, ಪಶುಪಾಲನಾ ಇಲಾಖೆ.

ಪಶುಪಾಲನಾ ಮಂತ್ರಿ ಪ್ರಭು ಚೌಹಾಣ್‌ ಅವರೊಂದಿಗೆ ಮಾತನಾಡಿದ್ದು, ತಾಲೂಕಿನಲ್ಲಿ ಪಶು ವೈದ್ಯರ ಸಮಸ್ಯೆ ಬಗೆ ಹರಿಸುವಂತೆ ಮನವಿ ಮಾಡಲಾಗಿದೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
-ಸಿ.ಎನ್‌.ಬಾಲಕೃಷ್ಣ, ಶಾಸಕ

* ಶಾಮಸುಂದರ್‌ ಕೆ.ಅಣ್ಣೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next