Advertisement

13ಮಂದಿ ಅಂತಾರಾಷ್ಟ್ರೀಯ ರಕ್ತಚಂದನ ದಂಧೆಕೋರರ ಸೆರೆ

01:05 AM May 19, 2019 | Lakshmi GovindaRaj |

ಬೆಂಗಳೂರು: ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಹಾಗೂ ಆತನ ಸಹಚರರ ಜತೆ ಸಂಪರ್ಕದಲ್ಲಿದ್ದ ಎನ್ನಲಾದ ಅಂತಾರಾಷ್ಟ್ರೀಯ ರಕ್ತಚಂದನ ಮಾರಾಟ ದಂಧೆಯ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕು ಮೂಲದ ಕಿಂಗ್‌ಪಿನ್‌ ಸೇರಿ 13 ಮಂದಿ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರ ಬಲೆಗೆ ಬಿದ್ದಿದ್ದಾರೆ.

Advertisement

ಪ್ರಮುಖ ಆರೋಪಿ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಅಬ್ದುಲ್‌ ರಶೀದ್‌ ಅಲಿಯಾಸ್‌ ಪುತ್ತು ಬಾಯರ್‌(48), ಬಂಟ್ವಾಳ ತಾಲೂಕಿನ ಎಂ.ಎಸ್‌.ಬಾಷಾ(40) ಷಪಿ (30) ಮುನ್ನಾ(25), ಇಬ್ರಾಹಿಂ(28), ಅನ್ನು ಅಲಿಯಾಸ್‌ ಮೊಹಮ್ಮದ್‌ ಅನ್ವರ್‌(23), ಕೇರಳದ ಕಾಸರಗೊಡಿನ ನೌಷಾದ್‌ (27), ಸಿದ್ಧಿಕ್‌ ಅಲಿಯಾಸ್‌ ಅಬುಬ್‌ಕರ್‌(40), ಬೆಂಗಳೂರಿನ ಎಚ್‌ಎಎಲ್‌ ನಿವಾಸಿಗಳಾದ ಜುಬೇರ್‌ ಖಾನ್‌(33), ಸಲೀಂ ಖಾನ್‌(50), ತಾಹೀರ್‌ ಖಾನ್‌ (25),ಮುಭಾರಕ್‌(26), ಆಲಿ ಖಾನ್‌ ಮೊಹಮ್ಮದ್‌(40) ಬಂಧಿತರು.

ಅವರಿಂದ 3.5 ಕೋಟಿ ರೂ. ಮೌಲ್ಯದ ನಾಲ್ಕು ಸಾವಿರ ರಕ್ತ ಚಂದನದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಬೆಂಗಳೂರು ಸೇರಿ ರಾಜ್ಯದ ವಿವಿಧ ಅರಣ್ಯ ಪ್ರದೇಶಗಳು, ಜನವಸತಿ ಪ್ರದೇಶಗಳಲ್ಲಿ ಬೆಳೆದಿರುವ ರಕ್ತ ಚಂದನ ಮರಗಳನ್ನು ಕಡಿಸಿ, ಅವುಗಳನ್ನು ನಗರದ ಸುಬ್ರಹ್ಮಣ್ಯಪುರ, ಎಲೆಕ್ಟ್ರಾನಿಕ್‌ ಸಿಟಿ, ವಿನಾಯಕನಗರ ಹಾಗೂ ಇತರೆ ಪ್ರದೇಶಗಳಲ್ಲಿರುವ ಗೋಡೌನ್‌ಗಳಲ್ಲಿ ದಾಸ್ತಾನು ಮಾಡಿ, ನಂತರ ಚೆನೈ, ಮುಂಬೈ ಸೇರಿ ದೇಶದ ಇತರೇ ರಾಜ್ಯಗಳಿಗೆ ಕಳ್ಳಸಾಗಣೆ ಮಾಡುತ್ತಿದ್ದರು. ಅಲ್ಲಿಂದ ಹಡಗು, ವಿಮಾನಗಳ ಮೂಲಕ ವಿದೇಶಗಳಿಗೆ ರಫ್ತು ಮಾಡುತ್ತಿದ್ದರು ಎಂದು ನಗರ ಪೊಲೀಸ್‌ ಆಯುಕ್ತ ಟಿ.ಸುನಿಲ್‌ ಕುಮಾರ್‌ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕಾರ್ಯಾಚರಣೆ ಹೇಗೆ?: ಸಿಸಿಬಿ ಇನ್ಸ್‌ಪೆಕ್ಟರ್‌ ಎಸ್‌.ಕೆ.ಮಾಲ್ತೇಶ್‌ ಸುಮಾರು ಎರಡು ತಿಂಗಳ ಸತತ ನಿಗಾವಣೆಯಿಂದ ಆರೋಪಿಗಳ ದಂಧೆಯನ್ನು ಖಚಿತ ಪಡಿಸಿಕೊಂಡು, ವಿಭಾಗದ ಹಿರಿಯ ಅಧಿಕಾರಿಗಳು ಹಾಗೂ ಇತರೆ ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತಂಡಗಳು ಕಾರ್ಯಾಚರಣೆ ನಡೆಸಿ ಮೇ 17 ರಂದು ರಾತ್ರಿ ನಗರದ ವಿನಾಯಕ ನಗರದ ಸಮೀಪದ ನ್ಯಾಷನಲ್‌ ಟ್ರಾವೆಲ್ಸ್‌ಗೆ ಸಂಬಂಧಿಸಿದ ಒಂದು ಕಾರ್ಗೋ ಗೋಡೌನ್‌ ಮುಂದೆ ನಿಂತಿದ್ದ ವಾಹನದ ಮೇಲೆ ದಾಳಿ ನಡೆಸಿ ಬಾಷಾ ಎಂಬಾತನನ್ನು ವಶಕ್ಕೆ ಪಡೆದು, ವಾಹನ ತಪಾಸಣೆ ನಡೆಸಿದಾಗ ಏಳು ಬಾಕ್ಸ್‌ಗಳಲ್ಲಿ ಶೇಖರಿಸಿದ್ದ ಸುಮಾರು 500 ಕೆ.ಜಿ ತೂಕದ 14 ರಕ್ತಚಂದನದ ಮರದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂದರು.

ನಂತರ ವಿಚಾರಣೆ ಸಂದರ್ಭದಲ್ಲಿ ಆರೋಪಿ ಬಾಷಾ ನೀಡಿದ ಮಾಹಿತಿಯ ಮೇರೆಗೆ ದಾಳಿ ಮುಂದುವರಿಸಿ ಸಿಸಿಬಿ ಅಧಿಕಾರಿಗಳು, ಶನಿವಾರ ಮುಂಜಾನೆ ಎಲೆಕ್ಟ್ರಾನಿಕ್‌ ಸಿಟಿ ಠಾಣಾ ವ್ಯಾಪ್ತಿಯ ದೊಡ್ಡನಾಗಮಂಗಲದಲ್ಲಿರುವ ಗೋಡೌನ್‌ನ ಎರಡು ಕೊಠಡಿಗಳ ಮೇಲೆ ದಾಳಿ ನಡೆಸಿ 12 ಮಂದಿ ಇತರೆ ಆರೋಪಿಗಳನ್ನು ಬಂಧಿಸಲಾಯಿತು. ಅದೇ ವೇಳೆ ಹೊರರಾಜ್ಯಗಳಿಗೆ ಕಳ್ಳಸಾಗಣೆ ಮತ್ತು ದೇಶಗಳಿಗೆ ರಫ್ತು ಮಾಡಲು ಶೇಖರಿಸಲಾಗಿದ್ದ ತಲಾ 35 ಕೆ.ಜಿ ತೂಕದ 100 ಕ್ಕೂ ಹೆಚ್ಚು ಉನ್ನತ ಗುಣಮಟ್ಟದ ಸುಮಾರು 3,500 ಕೆ.ಜಿ ತೂಕದ ರಕ್ತಚಂದನ ಮರದ ತುಂಡುಗಳನ್ನು ವಶಪಡಿಸಿಕೊಳ್ಳುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ ಎಂದರು.

Advertisement

ಅನಂತರ 12 ಮಂದಿ ಆರೋಪಿಗಳನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ಇಡೀ ಪ್ರಕರಣದ ಪ್ರಮುಖ ಆರೋಪಿ ಕಿಂಗ್‌ಪಿನ್‌ ಅಬ್ದುಲ್‌ ರಶೀದ್‌ ಎಂಬುದು ತಿಳಿಯುತ್ತಿದ್ದಂತೆ ಕೂಡಲೇ ಕಾರ್ಯಪ್ರವೃತ್ತವಾದ ಇನ್ಸ್‌ಪೆಕ್ಟರ್‌ಗಳಾದ ಎಂ.ಆರ್‌.ಹರೀಶ್‌, ಮೊಹಮ್ಮದ್‌ ಷರೀಫ್ ರಾವುತ್ತರ್‌, ಲಕ್ಷ್ಮೀಕಾಂತಯ್ಯ ಆರೋಪಿಯನ್ನು ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನಲ್ಲಿ ಬಂಧಿಸಿದ್ದಾರೆ ಎಂದರು.

ಅಂತಾರಾಜ್ಯ, ವಿದೇಶಕ್ಕೂ ರಫ್ತು: ಆರೋಪಿಗಳು ಸಂಘಟಿತ ಕಳ್ಳಸಾಗಣೆ ಮೂಲಕ ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ಕೇರಳ, ಮಹಾರಾಷ್ಟ್ರ ಹಾಗೂ ಇತರೆ ರಾಜ್ಯಗಳಲ್ಲಿ ವ್ಯವಸ್ಥಿತವಾದ ರೀತಿಯಲ್ಲಿ ಅಕ್ರಮವಾಗಿ ರಕ್ತಚಂದನ ಮರಗಳನ್ನು ಕಡಿಸುತ್ತಿದ್ದರು. ನಂತರ ಅವುಗಳನ್ನು ಯಾರಿಗೂ ಗೊತ್ತಾಗದ ರೀತಿಯಲ್ಲಿ ಉನ್ನತ ದರ್ಜೆಯ ಪಾರ್ಸ್‌ಲ್‌ ಪರಿಕರಗಳನ್ನು ಬಳಸಿಕೊಂಡು ರಕ್ತಚಂದನ ತುಂಡುಗಳನ್ನು ಲಾರಿ ಹಾಗೂ ಬಸ್‌ಗಳ ಮೂಲಕ ನಕಲಿ ಹೆಸರುಗಳಲ್ಲಿ ಬಿಲ್‌ ತಯಾರಿಸಿ ಅವುಗಳನ್ನು ಚೆನೈ, ಮುಂಬೈ ಹಾಗೂ ಇತರೇ ರಾಜ್ಯಗಳಿಗೆ ಕಳ್ಳಸಾಗಣೆ ಮಾಡುತ್ತಿದ್ದರು.

ಈ ರಾಜ್ಯಗಳಿಗೆ ಹೋಗುತ್ತಿದ್ದಂತೆ ಅಲ್ಲಿಂದ ಹಡಗು ಮತ್ತು ವಿಮಾನಗಳಲ್ಲಿ ಕಾರ್ಗೋ ಮೂಲಕ ಹಾಂಕಾಂಗ್‌, ಮಲೇಶಿಯಾ, ವಿಯಾಟ್ನಂ ಮತ್ತು ಚೀನಾ ಸೇರಿ ಹಲವು ದೇಶಗಳಿಗೆ ರಫ್ತು ಮಾಡುತ್ತಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಪ್ರಮುಖ ಆರೋಪಿಗಳ ಹಿನ್ನೆಲೆ?: ಜುಬೇರ್‌ ಖಾನ್‌, ಸಲೀಂ ಖಾನ್‌,ತಾಹೀರ್‌ಖಾನ್‌ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಕಟ್ಟಿಗೇನಹಳ್ಳಿ ನಿವಾಸಿಗಳಾಗಿದ್ದು, ಈ ಪೈಕಿ ಜುಬೇರ್‌ ಖಾನ್‌ ವಿರುದ್ಧ ಆಂಧ್ರಪ್ರದೇಶ ರಾಜ್ಯದ ಪುಂಗನೂರು, ಗಂಗಾವರಂ ಮತ್ತು ವಾಯಿಲ್‌ಪಾಟ್‌ ಠಾಣೆಗಳಲ್ಲಿ ತಲಾ ಒಂದೊಂದು ರಕ್ತಚಂದನ ಕಳ್ಳಸಾಗಣೆ ಆರೋಪ ಸಂಬಂಧ ಪ್ರಕರಣಗಳು ದಾಖಲಾಗಿವೆ.

ಎಂ.ಎಸ್‌.ಬಾಷಾ ದಂಧೆ ಬಳಸುತ್ತಿದ್ದ ವಾಹನದ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಷಫಿ, ಮುನ್ನಾ, ನೌಷಾದ್‌, ಸಿದ್ದೀಕ್‌,ಅಲಿಖಾನ್‌, ಇಬ್ರಾಹಿಂ ಹಾಗೂ ಅನ್ನು ಗೊಡೌನ್‌ನಲ್ಲಿ ಕಾನೂನು ಬಾಹಿರವಾಗಿ ಸಂಗ್ರಸಲಾಗಿದ್ದ ರಕ್ತಚಂದನ ತುಂಡುಗಳನ್ನು ಕಾವಲು ಕಾಯುವುದು ಮತ್ತು ಪಾರ್ಸಲ್‌ ಮಾಡುವ ಕೆಲಸ ಮಾಡುತ್ತಿದ್ದರು. ಇನ್ನು ಮುಬಾರಕ್‌ ನ್ಯಾಷನಲ್‌ ಟ್ರಾವೆಲ್ಸ್‌ ಪಾರ್ಸಲ್‌ ಭಾಗದಲ್ಲಿ ಕೆಲಸ ಮಾಡಿಕೊಂಡಿದ್ದು, ರಕ್ತಚಂದನದ ತುಂಡುಗಳನ್ನು ಜುಬೇರ್‌ ಖಾನ್‌ ಹೇಳಿದ ರಾಜ್ಯಗಳಿಗೆ ಕಳುಹಿಸುವ ಕೆಲಸ ಮಾಡುತ್ತಿದ್ದಾಗಿ ತಿಳಿದು ಬಂದಿದೆ.

ದಾವೂದ್‌, ಆತನ ಸಹಚರರ ಜತೆ ಸಂಪರ್ಕ: ಪ್ರಕರಣದ ಕಿಂಗ್‌ಪಿನ್‌ ಅಬ್ದುಲ್‌ ರಶೀದ್‌ 1994ರಿಂದ 98ರವರೆಗೆ ದುಬೈನಲ್ಲಿದ್ದು, ಭೂಗತ ಪಾತತಿ ದಾವೂದ್‌ ಇಬ್ರಾಹಿಂ, ಆತನ ಆಪ್ತ ಛೋಟಾ ಶಕೀಲ್‌ ಹಾಗೂ ಇತರೆ ಸಹಚರರ ಜತೆ ಸಂಪರ್ಕ ಹೊಂದಿದ್ದ. 2009ರಲ್ಲಿ ಮಹಾರಾಷ್ಟ್ರ ರಾಜ್ಯದಲ್ಲಿ ಖೋಟಾ ನೋಟು ಚಲಾವಣೆ ಪ್ರಕರಣದಲ್ಲಿ ಬಂಧನವಾಗಿದ್ದ, ನಂತರ ಆಂಧ್ರಪ್ರದೇಶದ ನಾಲ್ಕು, ಕೇರಳದ ಮೂರು ರಕ್ತಚಂದನ ಕಳ್ಳಸಾಗಾಣಿಯ ಪ್ರಕರಣಗಳಲ್ಲಿ ಬಂಧನವಾಗಿದ್ದ. ಕರ್ನಾಟಕದ ಬೆಂಗಳೂರು ಮತ್ತು ಮಂಗಳೂರಿನಲ್ಲಿ ತಲಾ ಒಂದೊಂದು ಪ್ರಕರಣಗಳು ಆತನ ವಿರುದ್ದ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next