Advertisement

ರೈಲಿಗೆ ಶಾಲಾ ವಾಹನ ಢಿಕ್ಕಿ: 13 ಮಕ್ಕಳ ಸಾವು

06:00 AM Apr 27, 2018 | |

ಗೋರಖ್‌ಪುರ: ಆಟ-ಪಾಠದ ಜತೆಗೆ ಆಡಿ ಕುಣಿದಾಡಬೇಕಿದ್ದ ಮಕ್ಕಳು ಶಾಲಾ ವಾಹನದಲ್ಲಿ ಹೋಗುವಾಗ ಚಾಲಕನ ನಿರ್ಲಕ್ಷ್ಯದಿಂದ ಚಲಿಸುತ್ತಿದ್ದ ರೈಲಿಗೆ ಢಿಕ್ಕಿಯಾಗಿ ಪ್ರಾಣಕಳೆದು ಕೊಂಡ ದಾರುಣ ಘಟನೆ ಉತ್ತರ ಪ್ರದೇಶದ ಖುಷಿನಗರದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ. ಘಟನೆಯಲ್ಲಿ 13 ಮಕ್ಕಳು ಸಾವಿಗೀಡಾಗಿದ್ದು, 8 ಮಂದಿಗೆ ಗಂಭೀರ ಗಾಯಗಳಾಗಿವೆ. ಮೃತ ಮಕ್ಕಳೆಲ್ಲರೂ 7ರಿಂದ 11 ವರ್ಷದೊಳಗಿನವರು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಗೋರಖು³ರದಿಂದ 50 ಕಿ.ಮೀ. ದೂರದ ಖುಷಿನಗರದ ಮಾನವರಹಿತ ಲೆವಲ್‌ ಕ್ರಾಸಿಂಗ್‌ ಗೇಟ್‌ ಬಳಿ ಈ ದುರ್ಘ‌ಟನೆ ಸಂಭವಿಸಿದೆ. ಗಾಯಗೊಂಡಿರುವ 8 ಮಕ್ಕಳ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಶಾಲಾ ವಾಹನ ಡಿವೈನ್‌ ಪಬ್ಲಿಕ್‌ ಸ್ಕೂಲ್‌ಗೆ ಸೇರಿದ್ದಾಗಿದ್ದು, ವ್ಯಾನ್‌ನಲ್ಲಿ 22 ಮಕ್ಕಳು ಸೇರಿ 25 ಮಂದಿ ಪ್ರಯಾಣಿಸುತ್ತಿದ್ದರು. ಅದೇ ವೇಳೆ ಥಾವೆ-ಕಪ್ತಾನ್‌ಗಂಜ್‌ ಪ್ರಯಾಣಿಕ ರೈಲು ಆಗಮಿಸಿದ್ದು, ಇನ್ನೇನು ಮುಂದಕ್ಕೆ ಚಲಿಸಲಿದೆ ಎನ್ನುವಷ್ಟರಲ್ಲಿ ಶಾಲಾ ವಾಹನ ಚಾಲಕ ಮುನ್ನುಗ್ಗಿದ್ದರಿಂದ ಘಟನೆ ಸಂಭವಿಸಿದೆ.

4 ಲಕ್ಷ ರೂ. ಪರಿಹಾರ: ಅಸುನೀಗಿದ ಮಕ್ಕಳ ಕುಟುಂಬಕ್ಕೆ ರೈಲ್ವೇ ಸಚಿವ ಪಿಯೂಷ್‌ ಗೋಯಲ್‌ ತಲಾ 2ಲಕ್ಷ ರೂ. ಮತ್ತು ಸಿಎಂ ಯೋಗಿ ಆದಿತ್ಯನಾಥ್‌ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಮುಂದೆ ಇಂಥ ಘಟನೆ ಸಂಭವಿಸದಂತೆ ಕಠಿಣ ಕ್ರಮ ಜರುಗಿಸುವುದಾಗಿ ಸಿಎಂ ಯೋಗಿ ಹೇಳಿದ್ದು, ತನಿಖೆಗೆ ಆದೇಶಿಸಿದ್ದಾರೆ. ರಾಷ್ಟ್ರಪತಿ ಕೋವಿಂದ್‌, ಪ್ರಧಾನಿ ಮೋದಿ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ಗಾಂಧಿ, ರಾಜ್ಯಪಾಲ ರಾಮ್‌ ನಾಯ್ಕ ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ. ಇದೇ ವೇಳೆ, ಆ ಶಾಲೆಯು ನೋಂದಣಿಯೇ ಆಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಾಟಕ ನಿಲ್ಲಿಸಿ: ಪ್ರತಿಭಟನಕಾರರಿಗೆ ಯೋಗಿ
ಘಟನಾ ಸ್ಥಳಕ್ಕೆ ಸಿಎಂ ಯೋಗಿ ಆಗಮಿಸಿದ ವೇಳೆ ಆಕ್ರೋಶಗೊಂಡ ಗುಂಪೊಂದು ರೈಲ್ವೇ ಮತ್ತು ಸ್ಥಳೀಯ ಆಡಳಿತದ ವಿರುದ್ಧ ಘೋಷಣೆಗಳನ್ನು ಕೂಗತೊಡಗಿದರು. ಇದೇ ವೇಳೆ, ಕೆಲವರು ಭಾರತ್‌ ಮಾತಾ ಕೀ ಜೈ, ವಂದೇ ಮಾತರಂ ಎಂದೂ ಕೂಗತೊಡಗಿದರು. ಇದರಿಂದ ಕೋಪಗೊಂಡ ಸಿಎಂ ಯೋಗಿ, “ಘೋಷಣೆ ಕೂಗುವುದನ್ನು ನಿಲ್ಲಿಸಿ, ಈ ನಾಟಕ ನಿಲ್ಲಿಸಿ. ನಾನು ಬಂದಿರುವುದು ಸಂತಾಪ ಸೂಚಿಸಲು ‘ ಎಂದು ಹೇಳಿದರು. ಆದರೆ, ಇದರಿಂದ ಸುಮ್ಮನಾಗದ ಪ್ರತಿಭಟನಾಕಾರರು ರೈಲ್ವೇ ಹಳಿ ಮೇಲೆ ಮಲಗಿ ಪ್ರತಿಭಟನೆ ವ್ಯಕ್ತಪಡಿಸಿದರು.

ಇಯರ್‌ಫೋನ್‌ ಹಾಕಿಕೊಂಡಿದ್ದ ಚಾಲಕ
ಚಾಲಕ ಇಯರ್‌ಫೋನ್‌ ಹಾಕಿಕೊಂಡು ಮೊಬೈಲ್‌ನಲ್ಲಿ ಮಾತನಾಡಿ ಕೊಂಡೇ ವಾಹನ ಚಲಾಯಿತ್ತಿದ್ದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಹೀಗಾಗಿ ಗೇಟ್‌ ಬಳಿ ಇದ್ದ ರೈಲ್ವೇ ಸಿಬಂದಿ(ರೈಲ್ವೇ ಮಿತ್ರ)  ಕೂಗಿ ಕೊಂಡಿದ್ದೂ ಚಾಲಕನಿಗೆ ಕೇಳಿಸಲಿಲ್ಲ. ಆತ ಏಕಾಏಕಿ ಕ್ರಾಸಿಂಗ್‌ನಲ್ಲಿ ಹಳಿಯ ಮೇಲೆ ವಾಹನ ನುಗ್ಗಿಸಿದ ಪರಿಣಾಮ ಘಟನೆ ಸಂಭವಿಸಿದೆ. ಚಾಲಕನ ಸ್ಥಿತಿಯೂ ಚಿಂತಾಜನಕವಾಗಿದೆ .

Advertisement

ಅಪಘಾತಕ್ಕೆ ವಿದ್ಯಾರ್ಥಿ ಬಲಿ
ಹೊಸದಿಲ್ಲಿ:
ಹಾಲಿನ ವಾಹನ ಮತ್ತು ಶಾಲಾ ವಾಹನ ಮುಖಾಮುಖೀ ಢಿಕ್ಕಿಯಾದ ಪರಿಣಾಮ ಒಬ್ಬ ಬಾಲಕ ಸಾವಿಗೀಡಾಗಿ, 17 ಮಕ್ಕಳು ಗಾಯಗೊಂಡಿರುವ ಘಟನೆ ಹೊಸದಿಲ್ಲಿಯ ಕನ್ಹಯ್ಯ ನಗರದಲ್ಲಿ ಗುರುವಾರ ನಡೆದಿದೆ. ಇಲ್ಲಿನ ಎರಡು ಶಾಲೆಗೆ ಸೇರಿದ ಮಕ್ಕಳು ವಾಹನದಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮಾನವರಹಿತ ರೈಲ್ವೇ ಕ್ರಾಸಿಂಗ್‌ ದಾಟುವಾಗ ರಸ್ತೆ ಬಳಕೆದಾರರೇ ಎಚ್ಚರ ವಹಿಸಬೇಕೇ ಹೊರತು, ಪ್ರಾಥಮಿಕ ಹೊಣೆಗಾರಿಕೆಯು ರೈಲ್ವೇ ಇಲಾಖೆಯದ್ದಲ್ಲ. 2020ರೊಳಗೆ ಎಲ್ಲ ಕ್ರಾಸಿಂಗ್‌ಗಳನ್ನು ಮಾನವಸಹಿತವಾಗಿ ಬದಲಿಸುತ್ತೇವೆ.
ಅಶ್ವನಿ ಲೊಹಾನಿ, ರೈಲ್ವೇ ಮಂಡಳಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next