Advertisement

ಮುದ್ರಣ ಮಾಧ್ಯಮ ಆದಾಯ ಏರಿಕೆ-ಆದಾಯದಲ್ಲಿ ಶೇ.13ರಿಂದ 15 ಹೆಚ್ಚಳ:ಕ್ರಿಸಿಲ್‌ ರೇಟಿಂಗ್ಸ್‌

11:38 PM Jul 13, 2023 | Team Udayavani |

ಹೊಸದಿಲ್ಲಿ: ಕೊರೊನಾ ಸಮಯದಲ್ಲಿ ಸೊರಗಿದ್ದ ಮುದ್ರಣ ಮಾಧ್ಯಮ ಇದೀಗ ಚೇತರಿಕೆ ಕಾಣುತ್ತಿದೆ. ಈ ಅಂಶವು ಕ್ರಿಸಿಲ್‌ ರೇಟಿಂಗ್ಸ್‌ ವರದಿಯಿಂದ ಸಾಬೀತಾಗಿದೆ. ವರದಿಯ ಪ್ರಕಾರ, ಮುಂಬರುವ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಪೊರೇಟ್‌ ಮತ್ತು ಸರಕಾರದ ಜಾಹೀರಾತು­ಗಳು ಹೆಚ್ಚಲಿವೆ. ಇದರ ಪರಿಣಾಮ 2023-24ರ ಅವಧಿಯಲ್ಲಿ ಭಾರತದ ಮುದ್ರಣ ಕ್ಷೇತ್ರದ ಆದಾಯದಲ್ಲಿ ಶೇ.13ರಿಂದ 15ರಷ್ಟು ಏರಿಕೆಯಾಗಲಿದೆ. ಈ ಅವಧಿಯಲ್ಲಿ ಮಾಧ್ಯಮ ಸಂಸ್ಥೆಗಳ ಒಟ್ಟು ಆದಾಯವು 30,000 ಕೋಟಿ ರೂ. ದಾಟಲಿದೆ ಎಂದು ಅಂದಾಜಿಸಿದೆ.

Advertisement

ಲಾಭದಲ್ಲಿ ಏರಿಕೆ ಸಾಧ್ಯತೆ: ಇನ್ನೊಂದೆಡೆ, ನ್ಯೂಸ್‌ಪ್ರಿಂಟ್‌ ಬೆಲೆಯು ಕಡಿಮೆಯಾಗಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ಮುದ್ರಣ ಕ್ಷೇತ್ರದ ಲಾಭದಲ್ಲಿ ಶೇ.10ರಿಂದ ಶೇ. 14.5ರಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ವರದಿ ತಿಳಿಸಿದೆ.

ಸಾಮಾನ್ಯವಾಗಿ ಮುದ್ರಣ ಮಾಧ್ಯಮಕ್ಕೆ 70:30 ಅನುಪಾತ­ದಲ್ಲಿ ಆದಾಯ ಬರುತ್ತದೆ. ಶೇ.70ರಷ್ಟು ಜಾಹೀರಾತುಗಳಿಂದ ಹಾಗೂ ಶೇ.30ರಷ್ಟು ಚಂದಾದಾರರಿಂದ. ಕೊರೊನಾ ಸಮಯದಲ್ಲಿ ಅಂದರೆ 2020-21ನೇ ಹಣಕಾಸು ವರ್ಷದಲ್ಲಿ ಭಾರತದ ಮುದ್ರಣ ಕ್ಷೇತ್ರದ ಆದಾಯವು ಶೇ.40ರಷ್ಟು ಕುಸಿದಿತ್ತು. ಆದರೆ ಅನಂತರ ಪುನಃ 2021-22 ಹಾಗೂ 2022-23ರ ಅವಧಿಯಲ್ಲಿ ಆದಾಯವು ಕ್ರಮವಾಗಿ ಶೇ.25­ರಷ್ಟು ಹಾಗೂ ಶೇ.15ರಷ್ಟು ಏರಿಕೆಯಾಯಿತು ಎಂದು ವರದಿ ತಿಳಿಸಿದೆ.

ಆದಾಯ ಬೆಳವಣಿಗೆ ಮುಂದುವರಿಯಲಿದೆ: “ಚಿಲ್ಲರೆ ವ್ಯಾಪಾರ, ಬಟ್ಟೆ, ಆಭರಣ, ಹೊಸ ವಾಹನಗಳ ಬಿಡುಗಡೆ, ಶಿಕ್ಷಣ, ಆನ್‌ಲೈನ್‌ ಖರೀದಿ ಮತ್ತು ರಿಯಲ್‌ ಎಸ್ಟೇಟ್‌ ಕ್ಷೇತ್ರಗಳಿಂದ ಮುದ್ರಣ ಮಾಧ್ಯಮದ ಮೂರನೇ ಎರಡರಷ್ಟು ಆದಾಯ ಬರುತ್ತದೆ. ಈ ಕ್ಷೇತ್ರಗಳು ಮುದ್ರಣ ಮಾಧ್ಯಮಗಳ ನಿರಂತರ ಆದಾಯ ಬೆಳವಣಿಗೆಯಲ್ಲಿ ವೇಗವನ್ನು ಮುಂದುವರಿಸಲಿವೆ’ ಎಂದು ಕ್ರಿಸಿಲ್‌ ರೇಟಿಂಗ್ಸ್‌ನ ನಿರ್ದೇಶಕ ನವೀನ್‌ ವೈದ್ಯನಾಥನ್‌ ಹೇಳಿದ್ದಾರೆ.

ಓದುಗರ ಸಂಖ್ಯೆಯಲ್ಲಿ ಏರಿಕೆ
“ಸರ್ಕಾರಿ ಜಾಹಿರಾತುಗಳು ಮುದ್ರಣ ಮಾಧ್ಯಮದ ಐದನೇ ಒಂದು ಭಾಗದಷ್ಟು ಆದಾಯ ತರುತ್ತದೆ. ಚುನಾವಣೆಗಳ ಹಿನ್ನೆಲೆಯಲ್ಲಿ ಜಾಹೀರಾತುಗಳು ಕೂಡ ಹೆಚ್ಚಲಿವೆ. ಇನ್ನೊಂದೆಡೆ, ಓದುಗರ ಸಂಖ್ಯೆಯು ಗಣನೀಯವಾಗಿ ಏರಿಕೆಯಾಗಿದೆ. ಕಳೆದ ಎರಡು ಹಣಕಾಸು ವರ್ಷಗಳಲ್ಲಿ ಓದುಗರ ಸಂಖ್ಯೆ ಶೇ.8ರಿಂದ ಶೇ10ರಷ್ಟು ಏರಿಕೆಯಾಗಿದೆ. ಜತೆಗೆ ಆನ್‌ಲೈನ್‌ ನ್ಯೂಸ್‌ಪೇಪರ್‌ ಸಬ್‌ಸ್ಕ್ರಿಪ್ಶನ್‌ನಲ್ಲೂ ಶೇ.5ರಿಂದ ಶೇ.7ರಷ್ಟು ಏರಿಕೆಯಾಗಿದೆ’ ಎಂದು ಅವರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next