ಗಾಂಧಿನಗರ: ಗುಜರಾತ್‌ನ ಗಾಂಧಿನಗರದಲ್ಲಿ ಬುಧವಾರದಿಂದ ಆರಂಭವಾಗಲಿರುವ ಡಿಫೆನ್ಸ್ ಎಕ್ಸ್‌ಪೊ-2022ದಲ್ಲಿ ದೇಶಿ ನಿರ್ಮಿತ ತರಬೇತಿ ವಿಮಾನ ಎಚ್‌ಟಿಟಿ-40 ಪ್ರಮುಖ ಆಕರ್ಷಣೆಯಾಗಿದೆ. ಇದನ್ನು ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಹಿಂದುಸ್ತಾನ್ ಏರೊನಾಟಿಕಲ್ಸ್ ಲಿಮಿಟೆಡ್ (ಎಚ್‌ಎಎಲ್) ನಿರ್ಮಿಸಿದೆ.
ಪ್ರಧಾನಿ ನರೇಂದ್ರ ಮೋದಿ ಬುಧವಾರ ಡಿಫೆನ್ಸ್ ಎಕ್ಸ್‌ಪೊ-2022 ಉದ್ಘಾಟಿಸಲಿದ್ದಾರೆ.
“ಪಾಥ್ ಟು ಪ್ರೈಡ್’ ಎಂಬ ಥೀಮ್ ಅಡಿಯಲ್ಲಿ ಈ ವರ್ಷದ ಎಕ್ಸ್‌ಪೊ ನಡೆಯುತ್ತಿದೆ. ಇದೇ ವೇಳೆ ಪ್ರಧಾನಿ ಮೋದಿ ಅವರು ಎಚ್‌ಟಿಟಿ-40 ಲೋಕಾರ್ಪಣೆಗೊಳಿಸಲಿದ್ದಾರೆ.
ಎಚ್‌ಎಎಲ್ ನಿರ್ಮಿತ ತರಬೇತಿ ವಿಮಾನ ಎಚ್‌ಜೆಟಿ-36 ಅಗತ್ಯ ಪರೀಕ್ಷೆಗಳು ಪೂರ್ಣಗೊಳಿಸಿದ್ದು, ಶೀಘ್ರದಲ್ಲೇ ಪ್ರಮಾಣೀಕೃತಗೊಳ್ಳಲಿದೆ. ಐಎಎಫ್ ಜತಗೆ ಭಾರತೀಯ ನೌಕಾ ಪಡೆಗೂ ಈ ತರಬೇತಿ ವಿಮಾನಗಳು ಪೂರೈಕೆಯಾಗಲಿವೆ. ಇಷ್ಟು ದಿನಗಳು ಐಎಎಫ್, ತರಬೇತಿ ವಿಮಾನಗಳ ಕೊರತೆ ಎದುರಿಸುತ್ತಿತ್ತು.
ಇದೇ ಮೊದಲ ಬಾರಿಗೆ ಪ್ರತ್ಯೇಕವಾಗಿ ರಕ್ಷಣಾ ಕ್ಷೇತ್ರದ ಭಾರತೀಯ ಕಂಪನಿಗಳು, ಭಾರತದಲ್ಲಿ ನೋಂದಾಯಿತ ಕಂಪನಿಗಳು, ಭಾರತದಲ್ಲಿರುವ ವಿದೇಶಿ ಸಂಸ್ಥೆಗಳ ಅಂಗ ಸಂಸ್ಥೆಗಳಿಗಾಗಿ ಎಕ್ಸ್‌ಪೊ ನಡೆಸಲಾಗುತ್ತಿದೆ.
ಬೆಂಬಲ ಇಲ್ಲ:
“ಇತರೆ ದೇಶಗಳಿಗಿಂತ ಕೆಲವು ದೇಶಗಳು ಶ್ರೇಷ್ಠ ಎಂದು ಭಾವಿಸುವ ಶ್ರೇಣೀಕೃತ ವಿಶ್ವ ಕ್ರಮವನ್ನು ಭಾರತ ಬೆಂಬಲಿಸುವುದಿಲ್ಲ,’ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರತಿಪಾದಿಸಿದ್ದಾರೆ. ಭಾರತ-ಆಫ್ರಿಕಾ ರಕ್ಷಣಾ ಸಂವಾದ-2022ರಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡುವ ನಿಟ್ಟಿನಲ್ಲಿ ಆಫ್ರಿಕನ್ ರಾಷ್ಟ್ರಗಳಿಗೆ ಎಲ್ಲ ಕ್ಷೇತ್ರಗಳಲ್ಲಿ ಬೆಂಬಲ ನೀಡಲು ಭಾರತ ಬದ್ಧವಾಗಿದೆ,’ ಎಂದರು.