ಮುಂಬೈ: 2008ರ ನವೆಂಬರ್ 26ರಂದು ಇಡೀ ಮುಂಬೈ ನಗರಿ 60 ಗಂಟೆಗಳ ಕಾಲ ನಡೆದ ದಾಳಿಗೆ ತತ್ತರಿಸಿ ಹೋಗಿದ್ದು, 18 ಭದ್ರತಾ ಸಿಬ್ಬಂದಿಗಳು ಸೇರಿದಂತೆ 166 ಮಂದಿ ಸಾವನ್ನಪ್ಪಿದ್ದರು. ಈ ಸಂದರ್ಭದಲ್ಲಿ ನಡೆದ ಪ್ರತಿದಾಳಿಯಲ್ಲಿ ಒಂಬತ್ತು ಮಂದಿ ಉಗ್ರರು ಬಲಿಯಾಗಿದ್ದರು. ಏಕೈಕ ಉಗ್ರ ಅಜ್ಮಲ್ ಕಸಬ್ ಜೀವಂತವಾಗಿ ಸೆರೆ ಸಿಕ್ಕಿದ್ದ.(2012 ನವೆಂಬರ್ 21ರಂದು ಬೆಳಗ್ಗೆ ಕಸಬ್ ನನ್ನು ನೇಣುಗಂಬಕ್ಕೆ ಏರಿಸಲಾಗಿತ್ತು).
ಮುಂಬೈ ದಾಳಿಯಲ್ಲಿ ಭಯೋತ್ಪಾದಕ (ಎಟಿಎಸ್) ನಿಗ್ರಹ ದಾಳಿಯ ವರಿಷ್ಠ ಹೇಮಂತ್ ಕರ್ಕರೆ, ಆರ್ಮಿ ಮೇಜರ್ ಸಂದೀಪ್ ಉನ್ನಿಕೃಷ್ಣನ್, ಮುಂಬೈಯ ಹೆಚ್ಚುವರಿ ಪೊಲೀಸ್ ಕಮಿಷನರ್ ಅಶೋಕ್ ಕಾಮ್ಟೆ, ಪೊಲೀಸ್ ಇನ್ಸ್ ಪೆಕ್ಟರ್ ವಿಜಯ್ ಸಾಲಸ್ಕರ್ ಮತ್ತು ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ (ಎಎಸ್ ಐ) ತುಕಾರಾಂ ಓಂಬ್ಳೆ ಹುತಾತ್ಮರಾಗಿದ್ದರು.
26/11 ಹೀರೋಗಳು ಇವರು:
ಲಷ್ಕರ್ ಎ ತೊಯ್ಬಾ ಉಗ್ರಗಾಮಿ ಸಂಘಟನೆಯ ಅಜ್ಮಲ್ ಕಸಬ್ ಹಾಗೂ ಅವರ ಸಹೋದ್ಯೋಗಿ ಇಸ್ಮಾಯಿಲ್ ಕಾಮಾ ಆಸ್ಪತ್ರೆಯ ಸಮೀಪ ಸಾಗುತ್ತಿದ್ದ ವ್ಯಾನ್ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಇದರ ಪರಿಣಾಮ ಹೇಮಂತ್ ಕರ್ಕರೆ, ಆಶೋಕ್ ಕಾಮ್ಟೆ ಮತ್ತು ವಿಜಯ್ ಸಾಲಾಸ್ಕರ್ ಹುತಾತ್ಮರಾಗಿದ್ದರು.
ಹೇಮಂತ್ ಕರ್ಕರೆ ದಾದರ್ ನಿವಾಸದಲ್ಲಿದ್ದ ವೇಳೆ ಛತ್ರಪತಿ ಶಿವಾಜಿ ರೈಲ್ವೆ ನಿಲ್ದಾಣದಲ್ಲಿ ಉಗ್ರರು ದಾಳಿ ನಡೆಸಿದ್ದಾರೆಂದು ದೂರವಾಣಿ ಕರೆಯೊಂದು ಬಂದಿತ್ತು. ಕೂಡಲೇ ಕರ್ಕರೆ ಚಾಲಕ ಹಾಗೂ ಅಂಗರಕ್ಷಕನ ಜತೆ ಸಿಎಸ್ ಟಿನತ್ತ ಹೊರಟಿದ್ದರು. ಆದರೆ ಉಗ್ರರು ಕಾಮಾ ಆಸ್ಪತ್ರೆ ಮತ್ತು ಅಲ್ ಬ್ಲೇಸ್ ಆಸ್ಪತ್ರೆಯತ್ತ ದೌಡಾಯಿಸಿರುವುದಾಗಿ ಕರ್ಕರೆಗೆ ಮಾಹಿತಿ ಬಂದಿತ್ತು.
ಕಾಮಾ ಆಸ್ಪತ್ರೆ ಬಳಿ ಕರ್ಕರೆ ಗುಂಡಿನ ದಾಳಿಯಿಂದ ಕಸಬ್ ಗಾಯಗೊಂಡಿದ್ದ, ಆದರೆ ಮತ್ತೊಬ್ಬ ಉಗ್ರ ಇಸ್ಮಾಯಿಲ್ ಖಾನ್ ಗುಂಡಿನ ಸುರಿಮಳೆಗೈದಿದ್ದ. ಇದರ ಪರಿಣಾಮ ಕರ್ಕರೆ, ಅಶೋಕ್ ಕಾಮ್ಟೆ ಮತ್ತು ಸಾಲಾಸ್ಕರ್ ಹುತಾತ್ಮರಾಗಿದ್ದರು. ಇವರ ಧೀರ ಸೇವೆಯನ್ನು ಪರಿಗಣಿಸಿ ಗೌರವಾರ್ಥವಾಗಿ 2009ರ ಜನವರಿ 26ರಂದು ಮರಣೋತ್ತರ ಅಶೋಕ ಚಕ್ರ ನೀಡಲಾಗಿತ್ತು.
26/11 ಹೀರೋ ಅಸಿಸ್ಟೆಂಟ್ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ತುಕಾರಾಂ ಓಂಬ್ಳೆ:
ತುಕಾರಾಂ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ನಂತರ ಮುಂಬೈ ಪೊಲೀಸ್ ಇಲಾಖೆಯಲ್ಲಿ ಸಹಾಯಕ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮರಿನಾ ಡ್ರೈವ್ ಸಮೀಪದ ಗಿರ್ಗಾಂವ್ ಚೌಪಟ್ಟಿಯಲ್ಲಿ ಉಗ್ರ ಅಜ್ಮಲ್ ಕಸಬ್ ನನ್ನು ಜೀವಂತವಾಗಿ ಸೆರೆಹಿಡಿಯಲು ನೆರವು ನೀಡಿದ್ದ ಹೀರೋ.
ಅಂದು ಏನಾಗಿತ್ತು:
ತುಕಾರಾಂ ಒಂಬ್ಳೆ ದಕ್ಷಿಣ ಮುಂಬೈನ ಚೌಪಟ್ಟಿಯಲ್ಲಿ ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ (ನವೆಂಬರ್ 26, 2008) ಮರೀನಾ ಡ್ರೈವ್ ನಲ್ಲಿ ನಿಲ್ಲಿಸಿದ್ದ ಕಾರನ್ನು ಇಬ್ಬರು ಉಗ್ರರು ಹೈಜಾಕ್ ಮಾಡಿಕೊಂಡು ಮಲಬಾರ್ ಹಿಲ್ ಕಡೆ ಹೊರಟಿದ್ದಾರೆ, ಅವರನ್ನು ತಡೆಯಿರಿ ಎಂಬ ಸಂದೇಶವನ್ನು ತುಕಾರಾಂ ಸ್ವೀಕರಿಸಿದ್ದರು.
ಕೂಡಲೇ ಓಂಬ್ಳೆ ಹಾಗೂ ಸಹೋದ್ಯೋಗಿ ಗಿರ್ಗೌಮ್ ಚೌಪಟ್ಟಿ ಸಮೀಪ ಬ್ಯಾರಿಕೇಡ್ ಹಾಕಿ ಕಾರನ್ನು ತಡೆಗಟ್ಟಲು ಸಜ್ಜಾಗಿ ನಿಂತಿದ್ದರು. ಎದುರಿನಲ್ಲಿ ಉಗ್ರರಿದ್ದ ಸ್ಕೋಡಾ ಕಾರು ವೇಗವಾಗಿ ಬರುತ್ತಿದ್ದು, ಬ್ಯಾರಿಕೇಡ್ ನಿಂದ 50 ಅಡಿ ದೂರದಲ್ಲಿ ನಿಂತುಬಿಟ್ಟಿತ್ತು. ನಂತರ ಏಕಾಏಕಿ ಕಾರಿನ ಬೀಮ್ ಲೈಟ್ಸ್ ಆನ್ ಆಗಿ ಕಾರು ಬ್ಯಾರಿಕೇಡ್ ನತ್ತ ವೇಗವಾಗಿ ಚಲಿಸತೊಡಗಿತ್ತು. ಅಪಾಯ ಅರಿತ ತುಕಾರಾಂ ಕೂಡಲೇ ಬ್ಯಾರಿಕೇಡ್ ನ ಹಿಂಬದಿ ಹೋಗಿ ನಿಂತಿದ್ದರು. ಆಗ ಕಾರಿನಿಂದ ಹೊರಗೆ ಹಾರಿದ್ದ ಅಜ್ಮಲ್ ಕಸಬ್ ನನ್ನು ಹಿಡಿದುಕೊಂಡು ಬಿಟ್ಟಿದ್ದರು. ಗಾಯಗೊಂಡಿದ್ದ ಕಸಬ್ ನ ಕೈಯಲ್ಲಿದ್ದ ಎಕೆ 47 ರೈಫಲ್ ನ ಬ್ಯಾರೆಲ್ ಅನ್ನು ಹಿಡಿದುಕೊಂಡಿದ್ದರು. ಆತನನ್ನು ಹಿಡಿಯಲೇಬೇಕೆಂಬ ಹಠಕ್ಕೆ ಬಿದ್ದ ತುಕಾರಾಂ ಅವರ ದೇಹದೊಳಕ್ಕೆ ಕಸಬ್ 40 ಗುಂಡುಗಳನ್ನು ಹೊಡೆದುಬಿಟ್ಟಿದ್ದ. ಉಳಿದ ಅಧಿಕಾರಿಗಳು ಕಸಬ್ ನನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಆದರೆ ತುಕಾರಾಂ ಅವರು ಹೋರಾಡುತ್ತಲೇ ಹುತಾತ್ಮರಾಗಿದ್ದರು.
2009ರ ಜನವರಿ 26ರಂದು ಗೌರವಾರ್ಥವಾಗಿ ಓಂಬ್ಳೆಗೆ ಮರಣೋತ್ತರ ಅಶೋಕ ಚಕ್ರವನ್ನು ಭಾರತ ಸರ್ಕಾರ ಕುಟುಂಬ ಸದಸ್ಯರಿಗೆ ನೀಡಿ ಗೌರವಿಸಿತ್ತು. ಇಂದಿಗೆ (ನವೆಂಬರ್ 26, 2020) ಮುಂಬೈ ದಾಳಿ ನಡೆದು 12 ವರ್ಷ ಕಳೆದಿದ್ದು, ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ರಾಜ್ಯ ಗೃಹ ಸಚಿವ ಅನಿಲ್ ದೇಶ್ ಮುಖ್, ಪರಿಸರ ಸಚಿವ ಆದಿತ್ಯ ಠಾಕ್ರೆ ದಕ್ಷಿಣ ಮುಂಬೈನ ಪೊಲೀಸ್ ಕೇಂದ್ರ ಕಚೇರಿಯಲ್ಲಿ ನೂತನವಾಗಿ ಕಟ್ಟಿರುವ ಹುತಾತ್ಮ ಪೊಲೀಸರ ಸ್ಮಾರಕಕ್ಕೆ ಗೌರವ ಸಲ್ಲಿಸಿದರು.