Advertisement

ಬರದಿಂದ 127 ಕೋಟಿ ಬೆಳೆಹಾನಿ

03:24 PM Dec 09, 2019 | Suhan S |

ಕೊಪ್ಪಳ: ಜಿಲ್ಲೆಯ ಕೆಲವು ಹೋಬಳಿಯಲ್ಲಿ ಪ್ರಸಕ್ತ ವರ್ಷ ಮುಂಗಾರು ಮಳೆ ಅಬ್ಬರಿಸಿದ್ದರೆ, ಗಂಗಾವತಿ ತಾಲೂಕಿನ ನಾಲ್ಕು ಹೋಬಳಿಗಳಲ್ಲಿ ಆಗಿಯೇ ಇಲ್ಲ. ಹೀಗಾಗಿ ಸರ್ಕಾರವೇ ಗಂಗಾವತಿ ತಾಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಿದ್ದು, ಕೃಷಿ ಇಲಾಖೆ ಸಹ ಸರ್ಕಾರಕ್ಕೆ 127 ಕೋಟಿ ರೂ. ಮುಂಗಾರು ಬೆಳೆ ಹಾನಿ ವರದಿ ಸಲ್ಲಿಸಿದೆ.

Advertisement

ಜಿಲ್ಲೆಯು ಒಂದಿಲ್ಲ ಒಂದು ವರ್ಷ ಬರ ಎದುರಿಸುತ್ತಲೇ ಇದೆ. ತುಂಗಭದ್ರಾ ಡ್ಯಾಂ ಜಿಲ್ಲೆಯಲ್ಲಿಯೇ ಇದ್ದರೂ ಬರದ ಹಣೆಪಟ್ಟಿ ಮಾತ್ರ ಜಿಲ್ಲೆಯಿಂದ ದೂರವಾಗುತ್ತಿಲ್ಲ. ಕಳೆದ 18 ವರ್ಷದಲ್ಲಿ 12 ವರ್ಷ ಬರಕ್ಕೆ ತುತ್ತಾಗಿರುವ ಇಲ್ಲಿನ ಜನರು ಉದ್ಯೋಗ ಅರಸಿ ಗುಳೆ ಹೋಗುವಂತ ಸ್ಥಿತಿ ಇಂದಿಗೂ ಇದೆ. ಈ ವರ್ಷ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನೆರೆ ಹಾವಳಿಯಿಂದ ಜನರು ಬದುಕನ್ನೇ ಕಳೆದುಕೊಂಡಿದ್ದಾರೆ. ಆದರೆ ಉಕ ವ್ಯಾಪ್ತಿಯ ಕೊಪ್ಪಳ ಜಿಲ್ಲೆಯ ಭತ್ತದ ನಾಡಿನ ಜನರಿಗೆ ಮಾತ್ರ ಮಳೆಯ ಕೊರತೆ ಎದುರಾಗಿ ಬರದ ಬೆಂಕಿ ಜನರನ್ನು ಬೆಂಬಿಡದೇ ಕಾಡಿದೆ. ಜಿಲ್ಲೆಯ ಏಳು ತಾಲೂಕುಗಳಲ್ಲಿ ಮೂರು ತಾಲೂಕಿನಲ್ಲಿ ಮಳೆಯ ಕೊರತೆಯಿಂದ ಬೆಳೆಯು ಮೊಳಕೆಯಲ್ಲಿಯೇ ಕಮರಿ ರೈತರ ಬದುಕನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.

ಒಟ್ಟಿನಲ್ಲಿ ಜಿಲ್ಲೆಯಲ್ಲಿನ ರೈತರನ್ನು ಮಾತ್ರ ಬರ ಎನ್ನುವ ಪೆಡಂಭೂತ ಬೆಂಬಿಡದೇ ಕಾಡುತ್ತಿದೆ. ಒಂದೊಮ್ಮೆ ಅತಿಯಾಗಿ ಮಳೆಯಿಂದ ಬೆಳೆ ಹಾನಿಗೀಡಾದರೆ, ಮತ್ತೂಮ್ಮೆ ಮಳೆ ಹನಿಯೂ ಭೂಮಿಗೆ ಬೀಳದೆ ಬೆಳೆ ಹಾನಿಯಾಗಿ ರೈತ ಸಂಕಷ್ಟ ಎದುರಿಸುವಂತ ಸ್ಥಿತಿಯಿರುತ್ತೆ. ಸರ್ಕಾರಗಳು ಜಿಲ್ಲೆಯಲ್ಲಿನ ಸ್ಥಿತಿಯನ್ನು ಅವಲೋಕಿಸಿ ಸಕಾಲಕ್ಕೆ ಬರ ಪರಿಹಾರ ನೀರಿ ರೈತರನ್ನು ನೋವಿನ ದವಡೆಯಿಂದ ಪಾರು ಮಾಡಬೇಕಿದೆ.

127 ಕೋಟಿ ರೂ. ಬೆಳೆ ಹಾನಿ: ಗಂಗಾವತಿ ತಾಲೂಕಿನಲ್ಲಿ 24,088 ಹೆಕ್ಟೇರ್‌ ಬಿತ್ತನೆ ಪ್ರದೇಶವಿತ್ತು. ಈ ಪೈಕಿ 22,905 ಹೆಕ್ಟೇರ್‌ ಪ್ರದೇಶ ಬಿತ್ತನೆಯಾಗಿತ್ತು. ಇದರಲ್ಲಿ 19,902 ಹೆಕ್ಟೇರ್‌ ಪ್ರದೇಶದಲ್ಲಿ ಶೇ. 50ಕ್ಕಿಂತಲೂ ಹೆಚ್ಚು ಪ್ರದೇಶವು ಬೆಳೆಹಾನಿಯಾಗಿದೆ. ಇದರಲ್ಲಿ 13,902 ಸಣ್ಣ ರೈತರುಹಾಗೂ 5438 ದೊಡ್ಡ ರೈತರು ಬೆಳೆನಷ್ಟ ಅನುಭವಿಸಿದ್ದಾರೆ. ಸಣ್ಣ ಹಾಗೂ ದೊಡ್ಡ ರೈತರ ಬೆಳೆ ಹಾನಿ ಸೇರಿ ಒಟ್ಟಾರೆ 127 ಕೋಟಿ ರೂ. ಬೆಳೆ ಹಾನಿಯಾಗಿದ್ದು, ಸರ್ಕಾರದಿಂದ ಎನ್‌ಡಿಆರ್‌ಎಫ್‌ ನಿಯಮದ ಪ್ರಕಾರ ಪರಿಹಾರ ಕೊಡಬೇಕು ಎನ್ನುವ ಲೆಕ್ಕಾಚಾರ ಹಾಕಿ ಸರ್ಕಾರಕ್ಕೆ ಕೃಷಿ ಇಲಾಖೆ ವರದಿ ಮಾಡಿದೆ.

ನಾಲ್ಕು ಹೋಬಳಿಯಲ್ಲಿ ಮಳೆ ಇಲ್ಲ : ಭತ್ತದ ನಾಡಿನಲ್ಲಿ ಬರ ಬಂದಿದೆಯೇ ಎಂದು ಜನರಲ್ಲಿ ಆಶ್ಚರ್ಯಕರ ಪ್ರಶ್ನೆ ಮೂಡಬಹುದು. ಇದು ಅಚ್ಚರಿಯಾದರೂ ಸತ್ಯದ ಸಂಗತಿ. ಹುಲಿಹೈದರ್‌, ಕನಕಗಿರಿ, ವೆಂಕಟಗಿರಿ ಹಾಗೂ ನವಲಿ ಹೋಬಳಿಯಲ್ಲಿ ಮಳೆಯ ಕೊರತೆ ತೀವ್ರವಾಗಿ ಕಾಡಿದ್ದರೆ, ಅಚ್ಚುಕಪಟ್ಟು ಪ್ರದೇಶದಲ್ಲಿನ ಮರಳಿ, ಸಿದ್ದಾಪೂರ, ಗಂಗಾವತಿ ಹೋಬಳಿಯಲ್ಲಿ ನೀರಾವರಿ ಪ್ರದೇಶವಿದೆ. ಹೀಗಾಗಿ ನಾಲ್ಕು ಹೋಬಳಿಯಲ್ಲಿ ಮಳೆಯ ಕೊರತೆಯಿಂದ ಸರ್ಕಾರವೇ ಗಂಗಾವತಿ ತಾಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಿದೆ.

Advertisement

ಗಂಗಾವತಿ ಬರಪೀಡಿತ: ಸರ್ಕಾರ ಗಂಗಾವತಿ ತಾಲೂಕನ್ನು ಮಾತ್ರ ಬರ ಪೀಡಿತ ಎಂದು ಘೋಷಣೆ ಮಾಡಿದೆ. ಕೃಷಿ ಇಲಾಖೆ ಗಂಗಾವತಿ ತಾಲೂಕು, ಕನಕಗಿರಿ ಹಾಗೂ ಕಾರಟಗಿ ತಾಲೂಕಿನಲ್ಲಿನ ಬೆಳೆ ಹಾನಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಇಲ್ಲಿ ಹೊಸ ಎರಡು ತಾಲೂಕುಗಳು ಇದರಲ್ಲಿ ಸೇರ್ಪಡೆಯಾಗಿವೆ. ಅಂದರೆ, ಕಂದಾಯ ವ್ಯಾಪ್ತಿಯ ಮಾತ್ರ ಹೊಸ ತಾಲೂಕು ವಿಂಗಡಣೆ ಮಾಡಲಾಗಿದೆ. ಕೃಷಿ ವ್ಯಾಪ್ತಿಯು ಮಾತ್ರ ಇನ್ನೂ ಮೂರು ತಾಲೂಕುಗಳನ್ನೂ ಒಳಗೊಂಡಿದೆ.

 

-ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next