ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕೆರೆಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ 1,253 ಕೋಟಿ ರೂ.ಮೀಸಲಿಡುವಂತೆ ಮನವಿ ಮಾಡಲಾಗಿದೆ ಎಂದು ಬಿಬಿಎಂಪಿಯ ಕೆರೆ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಪಾಲಿಕೆ ವ್ಯಾಪ್ತಿಯ ಹಲವು ಕೆರೆಗಳ ವ್ಯಾಪ್ತಿಯಲ್ಲಿ ದುರಂತ ಸಂಭವಿಸಿದ್ದು, ಈ ಕೆರೆಗಳನ್ನು ಆದ್ಯತೆಯ ಮೇಲೆ ಅಭಿವೃದ್ಧಿ ಮಾಡಬೇಕಿದೆ.ಅಲ್ಲದೆ, ಸರ್ಕಾರ ಬಿಡಿಎ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸುಪರ್ದಿಯಲ್ಲಿರುವ ಕೆರೆಗಳನ್ನು ಯಥಾಸ್ಥಿತಿಯಲ್ಲಿ ಬಿಬಿಎಂಪಿಗೆ ಹಸ್ತಾಂತರ ಮಾಡುವಂತೆ ಆದೇಶ ಮಾಡಿದೆ. ಈ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳು ಕೆರೆಗಳನ್ನು ಯಥಾಸ್ಥಿತಿಯಲ್ಲಿ ಪಾಲಿಕೆಗೆ ಹಸ್ತಾಂತರ ಮಾಡಲು ಮುಂದಾಗಿವೆ.
ಇವುಗಳನ್ನು ನಿರ್ವಹಣೆ ಮಾಡುವ ಜವಾಬ್ದಾರಿಯೂ ಪಾಲಿಕೆಯ ಮೇಲಿದೆ. ಇತ್ತೀಚೆಗೆ ವಿವಿಧ ಇಲಾಖೆಗಳಿಂದ ಪಾಲಿಕೆಗೆ 38 ಕೆರೆಗಳನ್ನು ಹಸ್ತಾಂತರ ಮಾಡಲಾಗಿದ್ದು, ಇನ್ನೂ 38 ಕೆರೆಗಳು ಅಭಿವೃದ್ಧಿ ಹಂತದಲ್ಲಿವೆ. ಇದರೊಂದಿಗೆ 76 ಕೆರೆಗಳನ್ನು ಸಂರಕ್ಷಣೆ ಹಾಗೂ ನಿರ್ವಹಣೆ ಮಾಡುವ ಜವಾಬ್ದಾರಿಯೂ ಪಾಲಿಕೆಯ ಮೇಲಿದೆ.
ಸಿಎಸ್‌ಆರ್ ಜೊತೆ ಪಾಲಿಕೆ ಹಣ: ಬಿಬಿಎಂಪಿ ವ್ಯಾಪ್ತಿಯ ದೊಡ್ಡಕಲ್ಲಸಂದ್ರ ಕೆರೆ ಸೇರಿದಂತೆ ಮಾರಸಂದ್ರ ಕೆರೆ, ಕಮ್ಮಸಂದ್ರ, ದೊಡ್ಡನಾಗಮಂಗಲ, ದೊಡ್ಡ ತೂಗೂರು, ದೊಡ್ಡಕಲ್ಲಸಂದ್ರ, ಕಾರೇಹಳ್ಳಿ ಕೆರೆಗಳನ್ನು ಸುಮಾರು 37 ಕೋಟಿ ರೂ. ವೆಚ್ಚದಲ್ಲಿ ನಿರ್ವಹಣೆ ಜತೆಗೆ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿತ್ತು. ಈ ಕಂಪನಿಗಳು ತಮ್ಮ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಅನುದಾನದಡಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿತ್ತು.
ಇದರೊಂದಿಗೆ ಸದ್ಯ ಪಾಲಿಕೆಯ ನಲ್ಲೂರಹಳ್ಳಿ ಕೆರೆಯನ್ನು ಸಾಮಾಜಿಕ ಹೊಣೆಗಾರಿಕೆಯಡಿ ಅಭಿವೃದ್ಧಿ ಮಾಡಲು ಪಾಲಿಕೆಯ ಅಧಿಕಾರಿಗಳು ನಿರ್ಧರಿಸಿದ್ದಾರೆ. ಈ ಕೆರೆಯ ವಿಸ್ತೀರ್ಣ 150 ಎಕರೆ ಇದೆ. ನಲ್ಲೂರಹಳ್ಳಿ ಕೆರೆಯ ಸಂಪೂರ್ಣ ಅಭಿವೃದ್ಧಿ ಮಾಡಲು ಯೋಜನೆ ರೂಪಿಸಿಕೊಳ್ಳಲಾಗುತ್ತಿದ್ದು, ಸಿಎಸ್‌ಆರ್‌ನಡಿ 4ಕೋಟಿ ರೂ. ಹಾಗೂ 4ಕೋಟಿ ರೂ. ಪಾಲಿಕೆಯಿಂದ ವ್ಯಹಿಸಲಾಗುವುದು. ಅದೇ ರೀತಿ ದೊಡ್ಡಕಲ್ಲಸಂದ್ರ ಕೆರೆ ಅಭಿವೃದ್ಧಿಗೆ ಖಾಸಗಿ ಕಂಪನಿ 1.50 ಕೋಟಿ ನೀಡಲಿದ್ದು, ಪಾಲಿಕೆ 4.50ಕೋಟಿ ರೂ. ವೆಚ್ಚ ಮಾಡಲಿದೆ.
ಆದರೆ, ಈ ಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಖಾಸಗಿ ಕಂಪನಿಯ ಸಹಭಾಗಿತ್ವವನ್ನು ಸ್ಥಳೀಯರು ವಿರೋಧಿಸಿರುವ ಹಿನ್ನೆಲೆಯಲ್ಲಿ ಈ ವಿಚಾರವಾಗಿ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರವು ಸ್ಥಳೀಯರೊಂದಿಗೆ ಚರ್ಚೆ ಮಾಡಿದ್ದು, ಅಂತಿಮ ವರದಿ ನೀಡಿಲ್ಲ. ಕೆರೆ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶನವನ್ನು ನಿರೀಕ್ಷಿಸುತ್ತಿದ್ದು, ನಿರ್ದೇಶನದ ಅನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆರೆ ಭಾಗದಲ್ಲಿ ಜಿಮ್ ಅಭಿವೃದ್ಧಿ?: ಹಲವು ಕೆರೆಗಳ ಪಾದಚಾರಿ ಮಾರ್ಗ ಹಾಗೂ ವಿಶ್ರಾಂತ ಸ್ಥಳಗಳು ಹಾಳಾಗಿದ್ದು, ಅವುಗಳನ್ನು ಪುನರುಜ್ಜೀವನ ಮಾಡಬೇಕಿದೆ. ಅಲ್ಲದೆ, ಸಾರ್ವಜನಿಕರು ಕೆರೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜಿಮ್ ಹಾಗೂ ವ್ಯಾಯಾಮಕ್ಕೆ ಅನುಕೂಲಕರವಾದ ಸಾಧನಗಳನ್ನು ಅಳವಡಿಸುವಂತೆ ಮನವಿ ಮಾಡಿದ್ದು, ಈ ಬಗ್ಗೆಯೂ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.