ಕಾಸರಗೋಡು: ರಾಜ್ಯದ ಸಮಗ್ರ ವಲಯಗಳ ಅಭಿವೃದ್ಧಿ ಉದ್ದೇಶ ಹೊಂದಿರುವ ಬಜೆಟ್ ಶುಕ್ರವಾರ ಮಂಡನೆಗೊಂಡಿದ್ದು, ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ಗೆ 2021-22ನೇ ವರ್ಷಕ್ಕೆ 125 ಕೋಟಿ ರೂ. ಮಂಜೂರು ಮಾಡಲಾಗಿದೆ.
ಕಾಸರಗೋಡು ಜಿಲ್ಲೆಗೆ ಸಂಬಂಧಿಸಿ ಬಜೆಟ್‌ನ ಪ್ರಧಾನ ಅಂಶಗಳು ಇಂತಿವೆ.
ರಾಜ್ಯದಲ್ಲಿ ಆದ್ಯತೆ ನೀಡಲಾದ ಉದ್ದಿಮೆ ಗಳಲ್ಲಿ ಮಲಬಾರ್ ಅಭಿವೃದ್ಧಿ ಉದ್ದೇಶ ಹೊಂದಿರುವ ಕೊಚ್ಚಿ-ಮಂಗಳೂರು ಉದ್ದಿಮೆಯೂ ಒಂದು. ಇದಕ್ಕಾಗಿ ಮಾಸ್ಟರ್ ಪ್ಲಾನ್ ರಚಿಸಲಾಗುವುದು. ಪ್ರಧಾನ ಅಭಿವೃದ್ಧಿ ಏಜೆನ್ಸಿಗಳಾದ ಕೆ.ಎಸ್. ಐ.ಡಿ.ಸಿ. ಮತ್ತು ಕಿನ್ಫ್ರಾ ಗಳಿಗೆ 401 ಕೋಟಿ ರೂ. ಮಂಜೂರು ಮಾಡಲಾಗುವುದು. ಕಾಸರಗೋಡು ಏರ್ ಸ್ಟ್ರಿಪ್‌ನ ಡಿ.ಪಿ.ಆರ್. ಸಿದ್ಧಗೊಳ್ಳುತ್ತಿದೆ. ಜಾರಿಯಲ್ಲಿರುವ ಪ್ರವಾ ಸೋದ್ಯಮ ಡೆಸ್ಟಿನೇಷನ್‌ಗಳ ಹಿನ್ನೆಲೆ ಅಭಿವೃದ್ಧಿಗಳಿಗಾಗಿ 117 ಕೋಟಿ ರೂ.ನ ಪ್ಯಾಕೇಜ್ ಘೊಷಿಸಲಾಗಿದೆ. ಒಳನಾಡ ಮೀನುಗಾರಿಕೆ, ಮೀನು ಕೃಷಿಗೆ 92 ಕೋಟಿ ರೂ. ಘೊಷಿಸಲಾಗಿದೆ.
ಎಂಡೋಸಲ್ಫಾನ್ ಸಂತ್ರಸ್ತರಿಗೆ 19 ಕೋಟಿ ರೂ. ಪ್ಯಾಕೇಜ್ :
ಕಾಸರಗೋಡು ಜಿಲ್ಲೆಯಲ್ಲಿ ಸಂಕಷ್ಟ ಅನುಭವಿಸುತ್ತಿರುವ ಎಂಡೋಸಲ್ಫಾನ್ ಸಂತ್ರಸ್ತರ ಪುನಃಶ್ಚೇತನ ಕ್ರಮಗಳ ಮುಂದುವರಿಕೆ ಯೋಜನೆಗೆ ರಾಜ್ಯ ಬಜೆಟ್‌ನಲ್ಲಿ 19 ಕೋಟಿ ರೂ. ಮೀಸಲಿರಿಸಲಾಗಿದೆ. ಎಂಡೋಸಲ್ಫಾನ್ ಸಂತ್ರಸರಿಗಾಗಿ ಪುನರ್ನಿವಾಸ ಸೆಲ್ ಪುನಶ್ಚೇತನ ಸಹಾಯ, ಮುಳಿಯಾರು ಗ್ರಾ.ಪಂ. ವ್ಯಾಪ್ತಿಯಲ್ಲಿ ಪುನರ್ವಸತಿ ಗ್ರಾಮ ನಿರ್ಮಾಣ ಪ್ರಾರಂಭ ವೆಚ್ಚಗಳಿಗಾಗಿ ಈ ಮೊಬಲಗು ಮೀಸಲಿರಿಸಲಾಗಿದೆ.
ಎಂಡೋಸಲ್ಫಾನ್ ರೋಗಿಗಳಿಗೆ ತಲಾ 2,200 ರೂ., ವಿಶೇಷ ಚೇತನ ಪಿಂಚಣಿ ಪಡೆಯುತ್ತಿರುವ ಮಂದಿಗೆ 1,700 ರೂ. ಆರ್ಥಿಕ ಸಹಾಯ ನೀಡಲಾಗುತ್ತಿದೆ. ಇದೇ ರೀತಿ ಈ ವಿಭಾಗಗಳಲ್ಲಿ ಸೇರಿರುವ ಕುಟುಂಬಗಳ ಒಂದನೇ ತರಗತಿಯಿಂದ 7ನೇ ತರಗತಿ ವರೆಗೆ ಕಲಿಕೆ ನಡೆಸುತ್ತಿರುವ ಮಕ್ಕಳಿಗೆ 2 ಸಾವಿರ ರೂ., 8ರಿಂದ 10ನೇ ತರಗತಿ ವರೆಗೆ ಕಲಿಕೆ ನಡೆಸುತ್ತಿರುವ ಮಕ್ಕಳಿಗೆ 3 ಸಾವಿರ ರೂ., 11ರಿಂದ 12ನೇ ತರಗತಿ ವರೆಗೆ ಕಲಿಕೆ ನಡೆಸುತ್ತಿರುವ ಮಕ್ಕಳಿಗೆ 4 ಸಾವಿರ ರೂ. ವರೆಗಿನ ಆರ್ಥಿಕ ಸಹಾಯ ಮುಂದುವರಿಯಲಿದೆ.ಎಂಡೋಸಲ್ಫಾನ್ ಕಾರಣದಿಂದ ಪೂರ್ಣರೂಪದಲ್ಲಿ ಹಾಸಿಗೆ ಹಿಡಿದಿರುವ ರೋಗಿಗಳಿಗೆ, ಮಾನಸಿಕ ಅಸ್ವಸ್ಥರ ಪರಿಚರಣೆಗೆ 700 ರೂ. ಆರ್ಥಿಕ ಸಹಾಯ ನೀಡಲಾಗುತ್ತಿದೆ.