ಮೈಸೂರು: ಕಳೆದ ಒಂದು ವಾರದಿಂದ ಕಾವೇರಿ ಮತ್ತು ಕಬಿನಿ ಜಲಾನಯನ ಪ್ರದೇಶದಲ್ಲಿ ಎಡಬಿಡದೆ ಮಳೆ ಸುರಿದ ಹಿನ್ನೆಲೆ ಜಿಲ್ಲೆಯಲ್ಲಿ 1226 ಎಕರೆ ಪ್ರದೇಶದಲ್ಲಿ ಬೆಳೆ ನಷ್ಟವಾಗಿದ್ದು, 818 ಮನೆಗಳು ಹಾನಿಯಾಗಿದೆ. ಜೊತೆಗೆ 2064 ಮಂದಿ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ತಿಳಿಸಿದ್ದಾರೆ.
ಪ್ರವಾಹದಿಂದಾಗಿ ಜಿಲ್ಲೆಯ ನಂಜನಗೂಡು ಮತ್ತು ಎಚ್.ಡಿ.ಕೋಟೆ ತಾಲೂಕುಗಳ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟವಾಗಿದೆ. 8 ತಾಲೂಕುಗಳ ಮುಖ್ಯರಸ್ತೆಗಳ ಸೇತುವೆಗಳು ಜಲಾವೃಗೊಂಡು ಮಾರ್ಗ ಬದಲಾಯಿಸಲಾಗಿದೆ.
1226 ಎಕರೆ ಬೆಳೆ ಹಾನಿ: ಹಿಂಗಾರಿನಲ್ಲಿ ಬಿತ್ತನೆ ಮಾಡಿದ್ದ ಫಸಲು ಕೈಗೆ ಬರುವ ಮುನ್ನವೇ ಪ್ರವಾಹಕ್ಕೆ ಸಿಲುಕಿ ಹಾನಿಯಾಗಿದ್ದು, ರೈತರಿಗೆ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ನಂಜನಗೂಡು ತಾಲೂಕಿನಲ್ಲಿ 370 ಎಕರೆ, ಎಚ್.ಡಿ.ಕೋಟೆ ತಾಲೂಕಿನಲ್ಲಿ 847 ಎಕರೆ ಸೇರಿ ಒಟ್ಟು 1,226 ಎಕರೆ ಪ್ರದೇಶದ ಬೆಳೆ ನಾಶವಾಗಿದೆ.
818 ಮನೆ ಹಾನಿ: ವರುಣನ ಅಬ್ಬರಕ್ಕೆ ಜಿಲ್ಲೆಯಲ್ಲಿ 818 ಮನೆಗಳು ಹಾನಿಯಾಗಿವೆ. ನಂಜನಗೂಡು 379, ಎಚ್.ಡಿ.ಕೋಟೆ 215, ಹುಣಸೂರು 129, ಪಿರಿಯಾಪಟ್ಟಣ 39, ಸರಗೂರು 22, ತಿ.ನರಸೀಪುರ 5 ಮತ್ತು ಕೆ.ಆರ್.ನಗರ ತಾಲೂಕಿನಲ್ಲಿ 7 ಮನೆಗಳು ಹಾನಿಯಾಗಿವೆ.
ಪರಿಹಾರ ಕೇಂದ್ರಗಳಲ್ಲಿ 2064 ಮಂದಿ: ನಂಜನಗೂಡು ತಾಲೂಕಿನ 11 ಪರಿಹಾರ ಕೇಂದ್ರಗಳಲ್ಲಿ 1,277 ಮಂದಿ ಆಶ್ರಯ ಪಡೆದಿದ್ದು, 2 ಗೋಶಾಲೆಯಲ್ಲಿ 75 ಜಾನುವಾರು ಸಂರಕ್ಷಿಸಲಾಗಿದೆ. ಎಚ್.ಡಿ.ಕೋಟೆ ತಾಲೂಕಿನ 4 ಪರಿಹಾರ ಕೇಂದ್ರಗಳಲ್ಲಿ 584 ಮಂದಿ, ಹುಣಸೂರು ತಾಲೂಕಿನ 9 ಕೇಂದ್ರಗಳಲ್ಲಿ 155 ಮಂದಿ, ಪಿರಿಯಾಪಟ್ಟಣ ತಾಲೂಕಿನ 2 ಕೇಂದ್ರಗಳಲ್ಲಿ 13 ಮಂದಿ, ಸರಗೂರು ಕೇಂದ್ರದಲ್ಲಿ 35 ಮಂದಿ ಆಶ್ರಯ ಪಡೆದಿದ್ದಾರೆ.
ಮಳೆ ಅನಾಹುತ ಇಬ್ಬರ ಸಾವು: ಪ್ರವಾಹಕ್ಕೆ ಜಿಲ್ಲೆಯಲ್ಲಿ ಓರ್ವ ಮಹಿಳೆ ಸೇರಿ ಇಬ್ಬರು ಮೃತಪಟ್ಟಿದ್ದಾರೆ. ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಲ್ಲಿ ಮನೆಗೋಡೆ ಕುಸಿದು ಗಣೇಶ್(35) ಮತ್ತು ಬಿದರಹಳ್ಳಿಯಲ್ಲಿ ಗೋಡೆ ಕುಸಿದು ಮುಬಿನಾ ತಾಜ್ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.