ನವದೆಹಲಿ: ಕಳೆದ ಎರಡು ವಾರಗಳಲ್ಲಿ ದಿಲ್ಲಿಯ ಸಿಎಆರ್ ಪಿಎಫ್ ಬೆಟಾಲಿಯನ್ ನ 122 ಯೋಧರ ಕೋವಿಡ್ 19 ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದು, ಇನ್ನೂ ನೂರು ಮಂದಿ ಯೋಧರ ಕೋವಿಡ್ 19 ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ ಎಂದು ವರದಿ ತಿಳಿಸಿದೆ.
ಪೂರ್ವ ದಿಲ್ಲಿಯ ವಿಹಾರ್ 3ನೇ ಹಂತದಲ್ಲಿರುವ 31ನೇ ಅರೆಸೇನಾ ಪಡೆಯ ಯೋಧರಿಗೆ ಕೋವಿಡ್ 19 ತಗುಲಿರುವುದಾಗಿ ವರದಿ ಹೇಳಿದೆ. ಕಳೆದ ಕೆಲವು ದಿನಗಳಲ್ಲಿ ಬೆಟಾಲಿಯನ್ ನಲ್ಲಿ ಭಾರೀ ಪ್ರಮಾಣದ ಸೋಂಕು ಹರಡಿದೆ. ಇತ್ತೀಚೆಗಷ್ಟೇ ದಿಲ್ಲಿಯ ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ಅಸ್ಸಾಂ ಮೂಲದ 55ವರ್ಷದ ಯೋಧ ಸಾವನ್ನಪ್ಪಿರುವುದಾಗಿ ವರದಿ ವಿವರಿಸಿದೆ.
ಶುಕ್ರವಾರ ನಡೆಸಿದ ಕೋವಿಡ್ 19 ಪರೀಕ್ಷೆಯಲ್ಲಿ 12 ಮಂದಿ ಯೋಧರಿಗೆ ಸೋಂಕು ತಗುಲಿರುವುದು ಪತ್ತೆಯಾಗಿತ್ತು. ಕೆಲವು ದಿನಗಳ ಹಿಂದೆ ಬೆಟಾಲಿಯನ್ ನಲ್ಲಿದ್ದ 45 ಯೋಧರಿಗೆ ಸೋಂಕು ಹರಡಿತ್ತು. ಸಿಆರ್ ಪಿಎಫ್ ನ ನರ್ಸಿಂಗ್ ಅಸಿಸ್ಟೆಂಟ್ ಅವರಿಂದ ಯೋಧರಿಗೆ ಸೋಂಕು ಹರಡಿರುವುದಾಗಿ ಶಂಕಿಸಲಾಗಿದೆ. ಕಳೆದ ತಿಂಗಳು ನಡೆಸಿದ ಪರೀಕ್ಷೆಯಲ್ಲಿ ನರ್ಸ್ ಗೆ ಕೋವಿಡ್ 19 ಸೋಂಕು ತಗುಲಿರುವುದು ಪತ್ತೆಯಾಗಿತ್ತು.
ಏಪ್ರಿಲ್ 17ರಿಂದ ಕೋವಿಡ್ 19 ಸೋಂಕಿನ ರೋಗ ಲಕ್ಷಣ ಕಾಣಿಸಿಕೊಳ್ಳಲು ಆರಂಭಿಸಿದ್ದು, ಏಪ್ರಿಲ್ 21ರಂದು ಪರೀಕ್ಷೆ ನಡೆಸಿದಾಗ ಪಾಸಿಟಿವ್ ಎಂದು ವರದಿ ಬಂದಿತ್ತು. ನಂತರ ಅವರನ್ನು ದಿಲ್ಲಿಯ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಏಪ್ರಿಲ್ 24ರಂದು ಮತ್ತೆ ಒಂಬತ್ತು ಮಂದಿ ಸಿಆರ್ ಪಿಎಫ್ ಜವಾನರಿಗೆ ಕೋವಿಡ್ 19 ಸೋಂಕು ತಗುಲಿರುವುದು ಪತ್ತೆಯಾಗಿತ್ತು. ನಂತರ ಮತ್ತೆ 15 ಯೋಧರಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಭಾರತದಲ್ಲಿ ಒಂದೇ ದಿನ ದಾಖಲೆ ಎಂಬಂತೆ 2,293 ಮಂದಿಗೆ ಕೋವಿಡ್ 19 ಸೋಂಕು ತಗುಲಿದ್ದು, ಇದರೊಂದಿಗೆ ದೇಶದಲ್ಲಿ ಒಟ್ಟು ಕೋವಿಡ್ 19 ಪೀಡಿತರ ಸಂಖ್ಯೆ 37,336ಕ್ಕೆ ಏರಿಕೆಯಾಗಿದೆ. 1,218 ಮಂದಿ ಸಾವನ್ನಪ್ಪಿದ್ದಾರೆ.