ಅರಕಲಗೂಡು: ಪಪಂ ಮಾಲೀಕತ್ವದ 61 ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆಗೆ ತಡೆ ನೀಡಿ 121 ವಾಣಿಜ್ಯ ಮಳಿಗೆಗಳನ್ನು ಒಂದೇ ಬಾರೀ ಹರಾಜು ಮಾಡಲು ಹೈಕೋರ್ಟ್ ಮಹತ್ವದ ತೀರ್ಪು ನೀಡಿದ ಬೆನ್ನಲ್ಲೆ ಹರಾಜು ಪ್ರಕ್ರಿಯೆ ಮುಂದೂಡಲಾಗಿದ್ದು, ಈ ಟೆಂಡರ್‌ಲ್ಲಿ ಭಾಗವಹಿಸಲು ಸಿದ್ಧರಾಗಿದ್ದ ಸಾವಿರಕ್ಕೂ ಅಧಿಕ ಮಳಿಗೆ ಆಕಾಂಕ್ಷಿಗಳಿಗೆ ನಿರಾಶೆಯಾಗಿದೆ.
ಪಪಂ ವ್ಯಾಪ್ತಿಯಲ್ಲಿ 121 ವಾಣಿಜ್ಯ ಮಳಿಗೆಗಳನ್ನ ಹೊಂದಿರುವ ಪಪಂ ಕಾಲಾವಧಿ ಮುಗಿದಿದ್ದ 61 ಮಳಿಗೆಗಳನ್ನ ಈ ಟೆಂಡರ್ ಮೂಲಕ ಅಕ್ಟೋಬರ್ 28, 29, 30 ರಂದು ಹರಾಜು ಪ್ರಕ್ರಿಯೆಗೆ ಸಿದ್ಧಪಡಿಸಿಕೊಂಡಿತ್ತು. ಆದರೆ ಮಳಿಗೆದಾರರು ಪಪಂ ಟೆಂಡರ್ ಪ್ರಕ್ರಿಯೆ ನಡೆಸುತ್ತಿ ರುವುದು ಕಾನೂನು ಬಾಹಿರವಾಗಿದೆ. ಇದನ್ನು ರದ್ದುಗೊಳಿಸುವಂತೆ ಹೈಕೋರ್ಟಗೆ ಮನವಿ ಸಲ್ಲಿಸಿದರು.
ಈ ಆಧಾರದಲ್ಲಿ 3-4 ವರ್ಷಗಳಿಂದ ನಡೆಯುತ್ತಿದ್ದ ಪಪಂ- ಮಳಿಗೆ ದಾರರ ನಡುವಿನ ಜಟಾಪಟಿಗೆ ಸೋಮವಾರ ನೀಡಿದ ತೀರ್ಪಿನಮೂಲಕ ತಾತ್ಕಾಲಿಕವಾಗಿ ರಿಲೀಫ್ ಸಿಕ್ಕಿದೆ. ಕೋರ್ಟ್ ತೀರ್ಪಿನ ಅನ್ವಯ ಉಳಿದ 50 ಮಳಿಗೆಗಳನ್ನ ಟೆಂಡರ್ ಕರೆಯುವವರೆಗೂ ಕಾಲವಕಾಶ ಸಿಕ್ಕಿದೆ. ಆದರೆ, ಈ 60 ಮಳಿಗೆಗಳ ಕಲಾವಧಿ 2024 ರವರೆಗೆ ಇರುವುದರಿಂದ ನ್ಯಾಯಾಲಯದ ತೀರ್ಪಿನಂತೆ ಪಪಂ ಹಾಲಿ ಮಳಿಗೆ ದಾರರು ಕಾಯಬೇಕೇ ಬೇಡವೇ ನೋಡಬೇಕು. ಪಪಂನ 121 ಮಳಿಗೆಗಳಲ್ಲಿ ಬಹುತೇಕ ಮಳಿಗೆಗಳು ಪಟ್ಟಣದ ಹೃಧಯ ಭಾಗದಲ್ಲಿದ್ದು, ವಹಿವಾಟು ಜೋರಾಗಿದೆ. ಕಳೆದ ವರ್ಷ 61 ಮಳಿಗೆಗಳ ಹರಾಜಾದಾಗಲೂ ಕೋರ್ಟ್ ತಡೆದಿತ್ತು.
ಪಪಂಗೆ ಹೆಚ್ಚು ಲಾಭ: 121 ಮಳಿಗೆಗಳ ಪೈಕಿ ಬಹುತೇಕ ಮಳಿಗೆಗಳು ಮೂಲ ಬಾಡಿಗೆದಾರರಿಂದ ಒಳ ಒಪ್ಪಂದದ ಮೂಲಕ ಪರಬಾರೆ ಮಾಡಿರುವ ವಿಷಯ ಗೋಪ್ಯ ವಾಗೇನೂ ಇಲ್ಲ. ಇದರ ಬಗ್ಗೆ ಧ್ವನಿಎತ್ತದೇ ಮೌನ ವಹಿಸಿದ ಪಪಂನ ನಿಲುವನ್ನು ಬಳಸಿಕೊಂಡು, ಈಗಲೂ ಬಳ ಕರಾರು ನಡೆಯುತ್ತಿದೆ. ಬಂಡವಾಳವನ್ನು ಹಾಕಿದ ಪಪಂಗೆ ಲಾಭಕ್ಕಿಂತ ಮಳಿಗೆದಾರರಿಗೆ ದುಪ್ಪಟ್ಟು ಲಾಭ ಸಿಗುತ್ತಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ. ನ್ಯಾಯಾಲಯದ ತೀರ್ಪು ಹೊರಬಂದ ಕೂಡಲೇ ಕೆಇಬಿ ರಸ್ತೆ, ಪೇಟೆ ಮುಖ್ಯ ರಸ್ತೆ, ಅನಕೃ ವೃತ್ತ ಹಾಗೂ ಸಂತೆಮಾಳ ದಲ್ಲಿರುವ 61 ಮಳಿಗೆಗಳ ಮಾಲೀಕರು ಹರ್ಷ ವ್ಯಕ್ತಪಡಿಸಿ ಸಿಹಿ ಹಂಚಿದರು.
ಪಟ್ಟಣ ಪಂಚಾಯ್ತಿ ಈಗಾಗಲೇ 2 ಬಾರಿ ಟೆಂಡರ್ ಕರೆದಿದ್ದು, ಕೋರ್ಟ್ ತಡೆ ನೀಡಿದೆ. ಪಪಂನ ಅಧಿಕಾರಿಗಳು ಟೆಂಡರ್ ಕರೆಯುವ ಮೊದಲು, ಎಲ್ಲಾಪ್ರಕ್ರಿಯೆಗಳನ್ನು ಮುಗಿಸಿ ಹಾರಾಜಿಗೆ ಮುಂದಾಗಿದ್ದರೆ, ನಮಗೆ ಈ ರೀತಿಯ ಅನ್ಯಾಯವಾಗುತ್ತಿರಲಿಲ್ಲ. ಪಪಂನ ಈ ನಿಲುವಿನಿಂದ ಸುಮಾರು 10-20 ಸಾವಿರ ಹಣ ಕಳೆದುಕೊಂಡಂತಾಗಿದೆ.
– ಸಂತೋಷ, ಟೆಂಡರ್‌ನಲ್ಲಿ ಭಾಗವಹಿಸಿದ್ದ ವ್ಯಕ್ತಿ
ಪಪಂನ 61 ಮಳಿಗೆಗಳನ್ನ ಕಾನೂನು ಪ್ರಕಾರವೇ ಸರ್ಕಾರದ ಆದೇಶದಂತೆ ಟೆಂಡರ್ ಕರೆಯಲಾಗಿತ್ತು. ಈ ಟೆಂಡರ್‌ನಿಂದ ಪಪಂಗೆ ಆದಾಯ ಅಧಿಕವಾಗಿತ್ತು. ಆದರೆ, ನ್ಯಾಯಾಲಯವು ಸೋಮವಾರ ನೀಡಿರುವ ತೀರ್ಪನ್ನು ಗೌರವಯುತವಾಗಿ ಸ್ವಾಗತಿಸುವೆ. ಮುಂದಿನ ಸಭೆಯಲ್ಲಿ ನ್ಯಾಯಾಲಯದ ತೀರ್ಪಿನ ಬಗ್ಗೆ ಚರ್ಚೆ ನಡೆಸಿ ಕ್ರಮ ಜರುಗಿಸಲಾಗುವುದು.
-ಹೂವಣ್ಣ ಅಧ್ಯಕ್ಷರು ಪಪಂ