ಕಾರವಾರ: ಆಂಧ್ರ ಪ್ರದೇಶ ಹೊಸ ಸರ್ಕಾರದ ಮಾದರಿಯಲ್ಲಿ ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಬೇಕು ಎಂದು ಆಗ್ರಹಿಸಿ ಉಕ ಜಿಲ್ಲೆಯ 1800ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಕಾರವಾರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ನಗರದ ಕೋಡಿಬೀರ ದೇವಸ್ಥಾನದಿಂದ ಹೊರಟ ಮೆರವಣಿಗೆ ನಗರದ ಮುಖ್ಯ ಬೀದಿಗಳಲ್ಲಿ ಹಾದು ಡಿಸಿ ಕಚೇರಿ ತಲುಪಿತು. ಜಿಲ್ಲೆಯ 12 ತಾಲೂಕುಗಳ ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.
ಗೌರವ ಸಲಹೆಗಾರ ಗಂಗಾಧರ ಬಡಿಗೇರ ಮಾತನಾಡಿ ಹೋರಾಟವಿಲ್ಲದೆ ಇವತ್ತು ಏನನ್ನು ಪಡೆಯುವ ಸ್ಥಿತಿಯಿಲ್ಲ. ಆರೋಗ್ಯ ಇಲಾಖೆಯ 18ಕ್ಕೂ ಹೆಚ್ಚು ಯೋಜನೆಗಳನ್ನು ಆಶಾ ಕಾರ್ಯಕರ್ತೆಯರು ಪ್ರಾಮಾಣಿಕತೆಯಿಂದ ಜಾರಿ ಮಾಡುತ್ತಿದ್ದಾರೆ. ಗರ್ಭಿಣಿಯರ ಆರೈಕೆ ಮಾಡಿ ಅವರ ಸುಗಮ ಹೆರಿಗೆಗೆ ಆಸ್ಪತ್ರೆ ಮತ್ತು ಸಮಾಜದ ನಡುವೆ ಕೊಂಡಿಯಾಗಿದ್ದಾರೆ. ಇಂಥವರಿಗೆ ತಿಂಗಳಿಗೆ 3 ಸಾವಿರ ಮಾತ್ರ ವೇತನ ನೀಡಲಾಗುತ್ತಿದೆ. ಅಲ್ಲದೇ ವಿವಿಧ ಯೋಜನೆಗಳ ಜಾರಿ ಮಾಡಿದ ಭತ್ಯೆಯನ್ನು ಕಳೆದ 9 ತಿಂಗಳಿಂದ ಕೊಟ್ಟಿಲ್ಲ ಎಂದು ಆರೋಪಿಸಿದರು. ಎಂಸಿಟಿಎಸ್ ಯೋಜನೆಯಲ್ಲಿ ಕೆಲಸ ಮಾಡಿದ್ದಕ್ಕೆ ನೀಡಿದ ವಿಶೇಷ ಭತ್ಯೆ ಹಿಂಪಡೆಯಲಾಗಿದೆ. 1800 ರೂ. ನಂತೆ ಜಿಲ್ಲೆಯ ಎಲ್ಲಾ ಆಶಾ ಕಾರ್ಯಕರ್ತೆಯರ ಖಾತೆಯಿಂದ ಹಣ ವಾಪಸ್ ಪಡೆಯಲಾಗಿದೆ. ಇದು ಆಶಾ ಕಾರ್ಯಕರ್ತೆಯರಿಗೆ ಮಾಡಿದ ಅವಮಾನವಾಗಿದೆ. ಹಗಲು ರಾತ್ರಿ ಎನ್ನದೇ ಕೆಲಸ ಮಾಡಿದ ಎಂಸಿಟಿಎಸ್ ಯೋಜನೆಗೆ ತಿಂಗಳಿಗೆ 300 ರೂ. ಕೊಡುತ್ತಿದ್ದು, ಈಗ ಅದನ್ನು ವಾರ್ಷಿಕವಾಗಿ ಕೊಡಲು ಸರ್ಕಾರ ಯೋಚಿಸಿದೆ. ಇದು ಸರಿಯಲ್ಲ. ಆಶಾ ಸಾಫ್ಟ್ ಅಥವಾ ಆರ್‌ಸಿಎಚ್ ಪೋರ್ಟಲ್ಗೆ ಪ್ರೋತ್ಸಾಹ ಧನ ಜೋಡಣೆ ರದ್ದುಪಡಿಸುವುದು ಈ ಗೊಂದಲಕ್ಕೆ ಪರಿಹಾರ ಕಾಣಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ಪದ್ಮಾ ಚಲವಾದಿ ಮಾತನಾಡಿ ಪ್ರತಿ ತಿಂಗಳು ಆಶಾ ಕಾರ್ಯಕರ್ತೆಯರಿಗೆ ಗೌರವಧನ ನೀಡುವ ವ್ಯವಸ್ಥೆಯನ್ನು ಸರ್ಕಾರ ಮಾಡಬೇಕು. ಕನಿಷ್ಠ 12 ಸಾವಿರ ವೇತನ ಕೊಡಿ. ಎಂಸಿಟಿಎಸ್ ಯೋಜನೆ ಅನುಷ್ಠಾನ ಮಾಡಿದ್ದಕ್ಕೆ ನೀಡುವ ವಿಶೇಷ ಭತ್ಯೆ 9 ತಿಂಗಳಿಂದ ಬಾಕಿಯಿದ್ದು, ಅದನ್ನು ಪಾವತಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು. ಜಿಲ್ಲಾ ಕಾರ್ಯದರ್ಶಿ ಸಂಗೀತಾ ಅಂಗ್ರೊಳ್ಳಿ ಮಾತನಾಡಿ ಗುಡ್ಡಗಾಡು ಮತ್ತು ಕಾಡು ಪ್ರದೇಶದ ಆಶಾ ಕಾರ್ಯಕರ್ತೆಯರಿಗೆ ವಿಶೇಷ ಭತ್ಯೆ ನೀಡಬೇಕು. ಅಂಗನವಾಡಿ ಕಾರ್ಯಕರ್ತೆಯರಿಗೆ ಇರುವಂತೆ ಆಶಾ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಬೇಕು. ಕಳೆದ ಹತ್ತು ವರ್ಷಗಳಿಂದ ಗ್ರಾಮಾಂತರ ಭಾಗದಲ್ಲಿ ಆರೋಗ್ಯ ಸೇವೆ ಮಾಡುತ್ತಿದ್ದೇವೆ. ಕೆಲವರು ನಿವೃತ್ತಿ ಅಂಚಿಗೆ ಬಂದಿದ್ದಾರೆ. ಅಂಥವರಿಗೆ ನಿವೃತ್ತಿ ವೇತನ ನೀಡಬೇಕು. ಆಶಾ ಕಾರ್ಯಕರ್ತೆಯರನ್ನು ನಗರ ಪ್ರದೇಶದಲ್ಲಿ 2500 ಜನರಿಗೆ ಒಬ್ಬ ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಿ ಎಂದರು.
ಸರ್ಕಾರದ ಪರವಾಗಿ ಅಪರ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ ಅವರು ಆಶಾ ಕಾರ್ಯಕರ್ತೆಯರ ಮನವಿ ಸ್ವೀಕರಿಸಿದರು. ಜಿಲ್ಲಾ ಮಟ್ಟದಲ್ಲಿ ಬಗೆ ಹರಿಸಬಹುದಾದ ಬೇಡಿಕೆಗಳ ಈಡೇರಿಕೆಗೆ ಡಿಎಚ್ಓ ಅವರಿಗೆ ಸೂಚನೆ ಕೊಡುವುದಾಗಿ ಹೇಳಿದರು.
ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಉಪಾಧ್ಯಕ್ಷೆ ಕವಿತಾ ಗಾವಡ, ಕಸ್ತೂರಿ ಹರಿಜನ, ಹಾಲಮ್ಮ ನಾಯಕ, ಅನ್ನಪೂರ್ಣ ನಾಯಕ ಸೇರಿದಂತೆ 1800ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಇದ್ದರು.