Advertisement

ಕಾನೂನು ಸಮರದಲ್ಲಿ ಜಯ: ಪಾಕ್ ನಲ್ಲಿನ ಪುರಾತನ ಹಿಂದೂ ದೇವಸ್ಥಾನ ಪುನರ್ ನಿರ್ಮಾಣ

11:59 AM Aug 04, 2022 | Team Udayavani |

ಲಾಹೋರ್: ಸುದೀರ್ಘ ಕಾನೂನು ಹೋರಾಟದ ನಂತರ ಅಕ್ರಮವಾಗಿ ವಾಸವಾಗಿದ್ದ ನಿವಾಸಿಗಳನ್ನು ಹೊರ ಹಾಕಿದ ನಂತರ ಪಾಕಿಸ್ತಾನದ ಲಾಹೋರ್ ನಗರದಲ್ಲಿರುವ ಸುಮಾರು 1,200 ವರ್ಷಗಳಷ್ಟು ಹಳೆಯದಾದ ಹಿಂದೂ ದೇವಾಲಯವನ್ನು ಪುನರ್ ನಿರ್ಮಾಣ ಮಾಡಲಾಗುವುದು ಎಂದು ಪಾಕ್ ನ ಅಲ್ಪಸಂಖ್ಯಾತರ ಪೂಜಾ ಸ್ಥಳಗಳ ಮೇಲ್ವಿಚಾರಣೆಯ ಫೆಡರಲ್ ಮಂಡಳಿ ತಿಳಿಸಿದೆ.

Advertisement

ಇದನ್ನೂ ಓದಿ:ಗುಮಾಸ್ತನ ಮನೆಯಲ್ಲಿ ಕಂತೆ ಕಂತೆ ಹಣ: ಅಧಿಕಾರಿಗಳ ದಾಳಿ ವೇಳೆ ಫಿನಾಯಿಲ್ ಕುಡಿದ ಸರ್ಕಾರಿ ನೌಕರ

ಕಳೆದ ತಿಂಗಳು ಪಾಕಿಸ್ತಾನದ ಇಟಿಪಿ(ನಿರ್ವಸಿತ ಆಸ್ತಿಗಳ ಟ್ರಸ್ಟ್) ಮಂಡಳಿ ಲಾಹೋರ್ ನಲ್ಲಿರುವ ಪ್ರಸಿದ್ಧ ಅನಾರ್ಕಲಿ ಬಜಾರ್ ಸಮೀಪ ಇರುವ ಕ್ರಿಶ್ಚಿಯನ್ ಕುಟುಂಬದಿಂದ ವಾಲ್ಮೀಕಿ ಮಂದಿರವನ್ನು ತನ್ನ ವಶಕ್ಕೆ ತೆಗೆದುಕೊಂಡಿತ್ತು.

ಲಾಹೋರ್ ನಲ್ಲಿ ಕೃಷ್ಣ ದೇವಾಲಯ ಹೊರತುಪಡಿಸಿ, ವಾಲ್ಮೀಕಿ ಮಂದಿರ ಮಾತ್ರ ಪ್ರತಿನಿತ್ಯ ಪೂಜೆ, ಪುನಸ್ಕಾರ ನಡೆಯುತ್ತಿರುವ ದೇವಸ್ಥಾನವಾಗಿದೆ. ಕಳೆದ ಎರಡು ದಶಕಗಳಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವುದಾಗಿ ಹೇಳಿಕೊಳ್ಳುತ್ತಿರುವ ಕ್ರಿಶ್ಚಿಯನ್ ಕುಟುಂಬ ಕೇವಲ ವಾಲ್ಮೀಕಿ ಜಾತಿಯ ಹಿಂದೂಗಳಿಗೆ ಮಾತ್ರ ಪೂಜೆ ಮಾಡಲು ಅವಕಾಶ ಕೊಟ್ಟಿತ್ತು ಎಂದು ವರದಿ ತಿಳಿಸಿದೆ.

ಮುಂಬರುವ ದಿನಗಳಲ್ಲಿ ಮಂದಿರದ ನೀಲನಕ್ಷೆಯಂತೆ ವಾಲ್ಮೀಕಿ ದೇವಸ್ಥಾನವನ್ನು ಪುನರ್ ನಿರ್ಮಾಣ ಮಾಡಲಾಗುವುದು ಎಂದು ಇಟಿಪಿಬಿ ವಕ್ತಾರ ಅಮೀರ್ ಹಸ್ಮಿ ತಿಳಿಸಿದ್ದಾರೆ. ಬುಧವಾರ ಹಿಂದೂಗಳು, ಕೆಲವು ಸಿಖ್ ರು ಸೇರಿದಂತೆ ಸುಮಾರು ನೂರಕ್ಕೂ ಅಧಿಕ ಮಂದಿ ವಾಲ್ಮೀಕಿ ಮಂದಿರದಲ್ಲಿ ಸೇರಿ, ಹಿಂದೂ ಸಂಪ್ರದಾಯದಂತೆ ಪೂಜೆ ನೆರವೇರಿಸಿರುವುದಾಗಿ ವರದಿ ವಿವರಿಸಿದೆ.

Advertisement

ಸುಮಾರು 20 ವರ್ಷಗಳ ಹಿಂದೆ ಕ್ರಿಶ್ಚಿಯನ್ ಕುಟುಂಬವೊಂದು ದೇವಾಲಯ ಮತ್ತು ಜಾಗವನ್ನು ಕಬಳಿಸಿತ್ತು. ಈ ದೇವಾಲಯದ ಜಾಗ ಇಟಿಪಿಬಿಗೆ ವರ್ಗಾವಣೆಯಾಗಿರುವುದಾಗಿ ಕಂದಾಯ ಇಲಾಖೆ ದಾಖಲೆಯಲ್ಲಿತ್ತು. ಆದರೆ ಕ್ರಿಶ್ಚಿಯನ್ ಕುಟುಂಬ 2010-11ರಲ್ಲಿ ಈ ಜಾಗದ ಮಾಲಕರು ನಾವೇ ಎಂದು ವಾದಿಸಿತ್ತು.

ಕೊನೆಗೆ ಇಟಿಪಿಬಿ ಕೋರ್ಟ್ ಮೊರೆ ಹೋಗಿತ್ತು. ವಾಲ್ಮೀಕಿ ದೇವಾಲಯ ಕೇವಲ ವಾಲ್ಮೀಕಿ ಹಿಂದೂಗಳಿಗೆ ಮಾತ್ರ ಸೇರಿದ್ದು ಎಂದು ಕ್ರಿಶ್ಚಿಯನ್ ಕುಟುಂಬ ವಾದಿಸಿತ್ತು. ಸುದೀರ್ಘ ಕಾಲದ ಕೋರ್ಟ್ ಹೋರಾಟದ ನಂತರ ಕ್ರಿಶ್ಚಿಯನ್ ಕುಟುಂಬದ ವಾದ ಸುಳ್ಳು ಎಂಬುದಾಗಿ ತೀರ್ಪು ನೀಡಿ, ದೇವಾಲಯದ ಜಾಗ ಬಿಟ್ಟು ಕೊಡುವಂತೆ ಆದೇಶ ನೀಡಿತ್ತು. ಅಲ್ಲದೇ ಜಾಗವನ್ನು ಟ್ರಸ್ಟ್ ವಶಕ್ಕೆ ಒಪ್ಪಿಸಿತ್ತು.

199ರಲ್ಲಿ ಬಾಬ್ರಿ ಮಸೀದಿ ಪ್ರಕರಣ ನಡೆದ ನಂತರ ಪಾಕಿಸ್ತಾನದಲ್ಲಿ ಉದ್ರಿಕ್ತ ಗುಂಪು ಶಸ್ತ್ರಾಸ್ತ್ರಗಳೊಂದಿಗೆ ವಾಲ್ಮೀಕಿ ಮಂದಿರದೊಳಗೆ ನುಗ್ಗಿ ವಿಗ್ರಹಗಳನ್ನು ಒಡೆದು ಹಾಕಿತ್ತು. ಚಿನ್ನಾಭರಣಗಳನ್ನು ದೋಚಿದ ನಂತರ ದೇವಾಲಯದ ಕಟ್ಟಡವನ್ನು ಭಾಗಶಃ ಧ್ವಂಸಗೊಳಿಸಿ ಬೆಂಕಿಹಚ್ಚಿತ್ತು. ಸ್ಥಳೀಯವಾಗಿ ಇದ್ದ ಅಂಗಡಿಗಳಿಗೂ ಬೆಂಕಿ ಹಚ್ಚಿತ್ತು ಎಂದು ವರದಿ ವಿವರಿಸಿದೆ.

ಕೆಲ ವರ್ಷಗಳ ಹಿಂದೆ ಕ್ರಿಶ್ಚಿಯನ್ ಕುಟುಂಬ ಜಾಗವನ್ನು ಕಬಳಿಸಿ ವಾಲ್ಮೀಕಿ ಮಂದಿರದ ಭಾಗಶಃ ಕಟ್ಟಡದಲ್ಲಿ ಪೂಜೆಯನ್ನು ಆರಂಭಿಸಿತ್ತು. ಇದಕ್ಕೆ ಹಿಂದೂ ಸಮುದಾಯ ಆಕ್ಷೇಪ ವ್ಯಕ್ತಪಡಿಸಿತ್ತು.

ಈ ಪ್ರಕರಣದ ಬಗ್ಗೆ ಪಾಕಿಸ್ತಾನದ ಸುಪ್ರೀಂಕೋರ್ಟ್ ನೇಮಕ ಮಾಡಿದ್ದ ಏಕ ವ್ಯಕ್ತಿಯ ಆಯೋಗ ಸರ್ಕಾರಕ್ಕೆ ವರದಿಯನ್ನು ಒಪ್ಪಿಸಿತ್ತು. ಲಾಹೋರ್ ನಲ್ಲಿದ್ದ ವಾಲ್ಮೀಕಿ ಮಂದಿರವನ್ನು ಪುನರ್ ನಿರ್ಮಾಣ ಮಾಡಿ, ಹಿಂದೂ ಸಮುದಾಯಕ್ಕೆ ಪೂಜೆಗೆ ಅವಕಾಶ ನೀಡಬೇಕೆಂದು ವರದಿಯಲ್ಲಿ ಉಲ್ಲೇಖಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next