ಬೆಂಗಳೂರು: ಗೌರಿ-ಗಣೇಶ ಹಬ್ಬದ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ವು ಬೆಂಗಳೂರಿನಿಂದ ವಿವಿಧೆಡೆ 1,200 ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಿದೆ.
ಹಬ್ಬಕ್ಕೆ ಬೆಂಗಳೂರಿನಿಂದ ವಿವಿಧೆಡೆ ತೆರಳುವ ಹಾಗೂ ಹಬ್ಬದ ನಂತರ ನಾನಾ ಭಾಗಗಳಿಂದ ಬೆಂಗಳೂರಿಗೆ ಆಗಮಿಸುವವರ ಅನುಕೂಲಕ್ಕಾಗಿ ಈ ಸೌಲಭ್ಯ ಕಲ್ಪಿಸಲಾಗಿದೆ. ಈ ಹೆಚ್ಚುವರಿ ಬಸ್‌ಗಳು ಸೆ. 15, 16 ಮತ್ತು 17ರಂದು ಬೆಂಗಳೂರಿನಿಂದ ಹಾಗೂ 18ರಂದು ರಾಜ್ಯ ಮತ್ತು ಅಂತಾರಾಜ್ಯಗಳ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ಕಾರ್ಯಾಚರಣೆ ಮಾಡಲಿವೆ.
ನಾಲ್ವರು ಅಥವಾ ಅದಕ್ಕಿಂತ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೆಟ್ ಕಾಯ್ದಿರಿಸಿದಲ್ಲಿ ಶೇ.5ರಷ್ಟು ರಿಯಾಯ್ತಿ ದೊರೆಯಲಿದೆ. ಅಷ್ಟೇ ಅಲ್ಲ, ಹೋಗುವ ಮತ್ತು ಬರುವ ಟಿಕೆಟ್ ಅನ್ನು ಒಟ್ಟಿಗೆ ಕಾಯ್ದಿರಿಸಿದರೆ, ಶೇ. 10ರಷ್ಟು ರಿಯಾಯ್ತಿ ದೊರೆಯಲಿದೆ.
ಪ್ರಯಾಣಿಕರು ನಿಗಮದ ವೆಬ್‌ಸೈಟ್: //www.ksrtc.karnataka.gov.in ಮೂಲಕ ಇ-ಟಿಕೆಟ್ ಬುಕಿಂಗ್ ಮಾಡಿಕೊಳ್ಳಬಹುದು. ಪ್ರಯಾಣಿಕರು ಕರ್ನಾಟಕ ಮತ್ತು ಅಂತರರಾಜ್ಯದಲ್ಲಿರುವ 691 ಗಣಕೀಕೃತ ಬುಕಿಂಗ್ ಕೌಂಟರ್‌ಗಳ ಮೂಲಕವೂ ಆಸನಗಳನ್ನು ಕಾಯ್ದಿರಿಸಬಹುದು ಎಂದು ನಿಗಮದ ಪ್ರಕಟಣೆ ತಿಳಿಸಿದೆ.
ನಗರದ ಕೆಂಪೇಗೌಡ ಬಸ್ ನಿಲ್ದಾಣ ಮೆಜೆಸ್ಟಿಕ್, ಮೈಸೂರು ರಸ್ತೆ ಬಸ್ ನಿಲ್ದಾಣ, ಶಾಂತಿನಗರದಲ್ಲಿನ ಬಿಎಂಟಿಸಿ ಬಸ್ ನಿಲ್ದಾಣದಿಂದ ನಾನಾ ಭಾಗಗಳಿಗೆ ಈ ಹೆಚ್ಚುವರಿ ಬಸ್‌ಗಳು ಕಾರ್ಯಾಚರಣೆ ಮಾಡಲಿವೆ.