ನವದೆಹಲಿ: ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಪ್ರತಿಭಟನೆ ಮುಂದುವರಿದಿದ್ದು, ಅಧ್ಯಕ್ಷ ಗೊಟಬಯ ರಾಜಪಕ್ಸ ಮಾಲ್ಡೀವ್ಸ್ ನಿಂದ ಸಿಂಗಾಪುರಕ್ಕೆ ತೆರಳಲು ಸಿದ್ಧತೆ ನಡೆಸಿರುವುದಾಗಿ ವರದಿಯಾಗಿದೆ. ಏತನ್ಮಧ್ಯೆ ಶ್ರೀಲಂಕಾದ 120ಕ್ಕೂ ಹೆಚ್ಚು ವಿಮಾನಗಳಿಗೆ ಕೇರಳದ ತ್ರಿವೇಂಡ್ರಮ್ ಮತ್ತು ಕೊಚ್ಚಿಯ ವಿಮಾನ ನಿಲ್ದಾಣಗಳಲ್ಲಿ ತುರ್ತು ಲ್ಯಾಂಡಿಂಗ್ ಗೆ ಅನುಮತಿ ನೀಡಿರುವ ಕ್ರಮಕ್ಕೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಶ್ಲಾಘಿಸಿದ್ದಾರೆ.
ಇದನ್ನೂ ಓದಿ:ಝೀರೋ ಟ್ರಾಫಿಕ್ ಮೂಲಕ ಧಾರವಾಡದಿಂದ ಬೆಳಗಾವಿಗೆ ಅಂಗಾಗ ರವಾನೆ
ಶ್ರೀಲಂಕಾಕ್ಕೆ ತೆರಳುವ 120ಕ್ಕೂ ಅಧಿಕ ವಿಮಾನಗಳಿಗೆ ತಾಂತ್ರಿಕವಾಗಿ ತುರ್ತು ಲ್ಯಾಂಡಿಂಗ್ ಆಗಲು ಈ ವಿಮಾನ ನಿಲ್ದಾಣಗಳು ಅನುಮತಿ ನೀಡುವ ಮೂಲಕ ತಮ್ಮ ಕಾರ್ಯ ವ್ಯಾಪ್ತಿಯ ಅಧಿಕಾರವನ್ನು ಮೀರಿ ತೆಗೆದುಕೊಂಡಿರುವ ನಿರ್ಧಾರಕ್ಕೆ ಸಿಂಧಿಯಾ ಟ್ವೀಟ್ ನಲ್ಲಿ ಶ್ಲಾಘಿಸಿದ್ದಾರೆ. ಈ ನಿರ್ಧಾರದಿಂದ ನಮ್ಮ ನೆರೆಯ ದೇಶದೊಂದಿಗಿನ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲಿದೆ ಎಂದು ತಿಳಿಸಿದ್ದಾರೆ.
ಭಾರೀ ಪ್ರತಿಭಟನೆ, ಹಿಂಸಾಚಾರಕ್ಕೆ ಸಾಕ್ಷಿಯಾದ ಶ್ರೀಲಂಕಾದಲ್ಲಿ ಅಧ್ಯಕ್ಷ ಗೊಟಬಯ ರಾಜಪಕ್ಸ ಮಾಲ್ಡೀವ್ಸ್ ಗೆ ಪರಾರಿಯಾಗಿದ್ದಾರೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆಯೇ ಜನಾಕ್ರೋಶ ಸ್ಫೋಟಗೊಂಡಿತ್ತು.
ಉದ್ರಿಕ್ತ ಪ್ರತಿಭಟನಾಕಾರರು ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರ ಕಚೇರಿಯೊಳಗೆ ನುಗ್ಗಿ ಮೋಜು, ಮಸ್ತಿ ನಡೆಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ರಾನಿಲ್ ವಿಕ್ರಮಸಿಂಘೆ ಈಗ ಶ್ರೀಲಂಕಾದ ಹಂಗಾಮಿ ಅಧ್ಯಕ್ಷರಾಗಿದ್ದಾರೆ.