ಬೆಂಗಳೂರು: ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಗೆ ಸ್ಕ್ರೀನಿಂಗ್ ಸಮಿತಿ ಕಸರತ್ತು ಪೂರ್ಣಗೊಂಡಿದ್ದು, 120 ಕ್ಷೇತ್ರಗಳಿಗೆ ಒಂದೊಂದೇ ಹೆಸರು, 104 ಕ್ಷೇತ್ರಗಳಲ್ಲಿ ಮೂರರಿಂದ ನಾಲ್ಕು ಹೆಸರುಗಳನ್ನು ಶಿಫಾರಸು ಮಾಡಲಾಗಿದೆ.
ಸ್ಕ್ರೀನಿಂಗ್ ಸಮಿತಿ ಕೆಲಸ ಮುಗಿದಿರುವುದರಿಂದ ಹೈಕಮಾಂಡ್‌ಗೆ ಶಿಫಾರಸು ಪಟ್ಟಿ ರವಾನೆಯಾಗಲಿದ್ದು, ಟಿಕೆಟ್ ಹಂಚಿಕೆ “ಚೆಂಡು’ ಹೈಕಮಾಂಡ್ ಅಂಗಳ ತಲುಪಲಿದೆ. ಬಹುತೇಕ ಈ ತಿಂಗಳ ಅಂತ್ಯದೊಳಗೆ 125ರಿಂದ 150 ಕ್ಷೇತ್ರಗಳ ಮೊದಲ ಪಟ್ಟಿ ಬಿಡುಗಡೆಯಾಗಲಿದೆ.
ವಿಧಾನಪರಿಷತ್ ಸದಸ್ಯರಿಗೆ ಟಿಕೆಟ್ ನೀಡದಿರಲು ಸಮಿತಿಯಲ್ಲಿ ನಿರ್ಧಾರ ಕೈಗೊಳ್ಳಲಾಗಿದ್ದು, ತೀರಾ ಅನಿವಾರ್ಯ ಎಂದರೆ ಒಬ್ಬರಿಗೆ ಸಿಗುವ ಸಾಧ್ಯತೆಯಿದೆ.
ವಿಧಾನಪರಿಷತ್ ಸದಸ್ಯರಾದ ಯು.ಬಿ. ವೆಂಕಟೇಶ್, ಪಿ.ಆರ್. ರಮೇಶ್, ಹರೀಶ್ ಕುಮಾರ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಆದರೆ ಆಕಾಂಕ್ಷಿಗಳು ಹೆಚ್ಚಾಗಿರುವುದರಿಂದ ಹಾಲಿ ಪರಿಷತ್ ಸದಸ್ಯರಿಗೆ ಟಿಕೆಟ್ ನೀಡದಿರುವ ನಿರ್ಧಾರ ಮಾಡಲಾಗಿದೆ.
Related Articles
ಕಾಂಗ್ರೆಸ್ ಸರಕಾರ ಬಂದರೆ ಮೂರರಿಂದ ಐವರು ಪರಿಷತ್ ಸದಸ್ಯರಿಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿ ಟಿಕೆಟ್‌ಗೆ ಒತ್ತಡ ಹಾಕದಂತೆ ಮನವೊಲಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ 40ಕ್ಕೆ ಕುಸಿದರೂ ಅಚ್ಚರಿಯಿಲ್ಲ
ಸಭೆ ಕುರಿತು ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರುವ ಖಾತರಿ ಇದೆ. ಬಿಜೆಪಿ 65ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುವುದಿಲ್ಲ ಎಂಬ ಖಾತರಿಯೂ ಇದೆ. ಬಿಜೆಪಿಯ ಆಂತರಿಕ ವಿಚಾರವಾಗಿ ನಾನು ಮಾತನಾಡುವುದಿಲ್ಲ. 40 ಕ್ಷೇತ್ರಕ್ಕೆ ಕುಸಿದರೂ ಅಚ್ಚರಿ ಇಲ್ಲ. ಜನ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನೀವು ಯಾರನ್ನೇ ಕೇಳಿದರೂ ಬಿಜೆಪಿಯಿಂದ ಅನುಕೂಲ ಆಗಿಲ್ಲ ಎಂದೇ ಹೇಳುತ್ತಿದ್ದಾರೆ ಎಂದು ಹೇಳಿದರು.
ಸೋಮಣ್ಣ ಅವರು ಪಕ್ಷ ಸೇರುವ ಬಗ್ಗೆ ವಿರೋಧವಿದೆಯೇ ಎಂದು ಕೇಳಿದಾಗ, “ನಮ್ಮ ಬಳಿ ಅವರು ಮಾತನಾಡಿಲ್ಲ. ಅವರು ಪಕ್ಷ ಸೇರುವ ವಿಚಾರ ಚರ್ಚೆಯಾಗಿಲ್ಲ. ಇವೆಲ್ಲವೂ ಕೇವಲ ಊಹಾಪೋಹಗಳೇ ಹೊರತು ಯಾವುದೂ ನಿಜವಲ್ಲ’ ಎಂದು ಸ್ಪಷ್ಟಪಡಿಸಿದರು.
ಬಹುತೇಕ ಅಂತಿಮ
ಈ ಮಧ್ಯೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಸ್ಕ್ರೀನಿಂಗ್ ಸಮಿತಿ ಸಭೆ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿ, ಬಹುತೇಕ ಶೇ. 75ರಷ್ಟು ಕ್ಷೇತ್ರಗಳಿಗೆ ಒಂದೊಂದೇ ಹೆಸರು ಅಂತಿಮವಾಗಿದ್ದು, ಹೆಚ್ಚು ಆಕಾಂಕ್ಷಿಗಳು ಇರುವ ಕ್ಷೇತ್ರಗಳಲ್ಲಿ ಒಮ್ಮತದ ಆಯ್ಕೆ ಮಾಡಲಾಗುವುದು. ಸ್ಕ್ರೀನಿಂಗ್ ಸಮಿತಿ ಸಭೆಯ ಅನಂತರ ಕೇಂದ್ರ ರಾಜಕೀಯ ವ್ಯವಹಾರಗಳ ಸಮಿತಿ ಸಭೆ ನಡೆದು ಪಟ್ಟಿ ಬಗ್ಗೆ ಚರ್ಚಿಸಿ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.