ಹೊಸದಿಲ್ಲಿ: ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಸೆ. 19 ಮರೆಯಲಾಗದ ದಿನ. ಆಲ್‌ರೌಂಡರ್ ಯುವರಾಜ್ ಸಿಂಗ್ ಒಂದೇ ಓವರ್‌ನಲ್ಲಿ 6 ಸಿಕ್ಸರ್ ಸಿಡಿಸಿ ಇತಿಹಾಸ ಬರೆದ ದಿನವಾಗಿದ್ದು, ಇದಕ್ಕೀಗ 12 ವರ್ಷ ಪೂರ್ತಿಗೊಂಡಿದೆ. ಈ ಆರೂ ಸಿಕ್ಸರ್ ದೃಶ್ಯಾವಳಿಯ ಕೊಲಾಜ್ ಒಂದನ್ನು ಮಾಡಿ ಬಿಸಿಸಿಐ ಸಂಭ್ರಮಿಸಿದೆ.
ದಕ್ಷಿಣ ಆಫ್ರಿಕಾದಲ್ಲಿ ನಡೆದ ಮೊದಲ ಟಿ20 ವಿಶ್ವಕಪ್ ಅದಾಗಿತ್ತು. 2007ರ ಐಸಿಸಿ ಏಕದಿನ ವಿಶ್ವಕಪ್ ಲೀಗ್ ಹಂತದÇÉೇ ರಾಹುಲ್ ದ್ರಾವಿಡ್ ನಾಯಕತ್ವದ ಭಾರತ ಹೊರಬಿದ್ದು ಆಘಾತಕ್ಕೆ ಒಳಗಾಗಿತ್ತು. ಇದಾದ ಕೆಲವೇ ದಿನಗಳ ಅನಂತರ ಭಾರತ ತಂಡದ ನಾಯಕತ್ವ ಪಡೆದ ಮಹೇಂದ್ರ ಸಿಂಗ್ ಧೋನಿ ದೇಶಕ್ಕೆ ಚೊಚ್ಚಲ ಟಿ-20 ವಿಶ್ವಕಪ್ ಸಮರ್ಪಿಸಿದ್ದರು.
ಇಂಗ್ಲೆಂಡ್ ಎದುರಿನ ಡರ್ಬನ್ ಲೀಗ್ ಪಂದ್ಯದಲ್ಲಿ ಭಾರತ 18 ಓವರ್‌ಗಳಲ್ಲಿ 3ಕ್ಕೆ 171 ರನ್ ಗಳಿಸಿತ್ತು. ಈ ವೇಳೆ ಕ್ರೀಸ್‌ನಲ್ಲಿದ್ದ ಯುವರಾಜ್ ಮತ್ತು ಧೋನಿ ತಂಡದ ಮೊತ್ತವನ್ನು ಏರಿಸುವ ಯೋಜನೆಯಲ್ಲಿದ್ದರು.
ಆ್ಯಂಡ್ರೂé ಫ್ಲಿಂಟಾಫ್ ಎಸೆದ18ನೇ ಓವರ್‌ನಲ್ಲಿ ಯುವಿ ಸತತ 2 ಬೌಂಡರಿ ಸಿಡಿಸಿದ್ದರು. ಇದು ಫ್ಲಿಂಟಾಫ್ ಅವರನ್ನು ಕೆಣಕುವಂತೆ ಮಾಡಿತ್ತು. ಯುವಿ ಬಳಿ ಬಂದು ಕೆಣಕಿ ಹೋಗಿದ್ದರು. ಇದಕ್ಕೆ ಬಲಿಪಶುವಾದದ್ದು ಮಾತ್ರ ಸ್ಟುವರ್ಟ್ ಬ್ರಾಡ್. ಯುವಿ ತಮ್ಮ ಆಕ್ರೋಶವನ್ನೆಲ್ಲ ಬ್ರಾಡ್ ಮೇಲೆ ತೀರಿಸಿಕೊಂಡರು. ಅವರೆಸೆದ 19ನೇ ಓವರ್‌ನಲ್ಲಿ ಬೆನ್ನು ಬೆನ್ನಿಗೆ ಆರು ಸಿಕ್ಸರ್ ಬಾರಿಸುವ ಮೂಲಕ ಯುವಿ ವಿಶ್ವರೂಪ ತೋರಿದರು. ಆ ರೋಮಾಂಚಕಾರಿ ಕ್ಷಣವನ್ನು ಭಾರತದ ಅಭಿಮಾನಿಗಳು ಇಂದಿಗೂ ಮರೆತಿಲ್ಲ.
ಯುವಿ ನೆನಪಿನ ಬುತ್ತಿ
“ದೇಶಕ್ಕಾಗಿ ಆಡುವಾಗ ಭಾವನೆಗಳು ಯಾವತ್ತೂ ಉನ್ನತ ಮಟ್ಟದಲ್ಲಿರುತ್ತವೆ. ಕೆಲವೊಮ್ಮೆ ಸಿಟ್ಟು ಕೂಡ ಬರುತ್ತದೆ. ಬಹುಶಃ ನಾನು ಫ್ಲಿಂಟಾಫ್ ಎಸೆತದಲ್ಲಿ ಸತತ 2 ಬೌಂಡರಿ ಹೊಡೆದದ್ದು ಅವರಿಗೆ ಸಹ್ಯವಾಗಿರಲಿಲ್ಲ. ಅವರು ನನ್ನ ಬಳಿ ಬಂದು ಕೆಣಕುವಂಥ ಮಾತಾಡಿದರು. ಇದು ನನ್ನನ್ನು ಪ್ರಚೋದಿಸುವಂತೆ ಮಾಡಿತು…’ ಎಂದು 12 ವರ್ಷಗಳ ಹಿಂದಿನ ಘಟನೆಯನ್ನು ಯುವರಾಜ್ ನೆನಪಿಸಿಕೊಂಡಿದ್ದಾರೆ.