ಅಫಜಲ್ಪುರ (ಮಧ್ಯಪ್ರದೇಶ): ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರನ್ನು ಗಲ್ಲಿಗೇರಿಸುವ ವಿಡಿಯೋವನ್ನು ಅನುಕರಿಸಿದ 12 ವರ್ಷದ ಬಾಲಕನೋರ್ವ ಮೃತಪಟ್ಟ ಘಟನೆ ಮಧ್ಯಪ್ರದೇಶದ ಮಂದ್ಸೌರ್ ನಲ್ಲಿ ನಡೆದಿದೆ.
ಅಫಜಲ್ಪುರದ ಭೋಲಿಯಾ ಗ್ರಾಮದ 12 ವರ್ಷದ ಶ್ರೇಯಾಂಶ್ ಎಂಬ ಬಾಲಕ ಈ ಹೃದಯವಿದ್ರಾವಕ ಘಟನೆಯಲ್ಲಿ ಸಾವನ್ನಪ್ಪಿದ ಬಾಲಕ.
ಭಗತ್ ಸಿಂಗ್ ಜೀವನದ ಕಥೆಯುಳ್ಳ ನಾಟಕದ ವಿಡಿಯೋವೊಂದನ್ನು ಬಾಲಕ ಮೊಬೈಲ್ ನಲ್ಲಿ ನೋಡುತ್ತಿದ್ದ. ಅಂತಿಮವಾಗಿ ಭಗತ್ ಸಿಂಗ್ ರನ್ನು ನೇಣುಗಂಬಕ್ಕೇರಿಸುವ ದೃಶ್ಯವನ್ನು ನೋಡಿ ಅದನ್ನು ಅನುಕರಿಸಿದ್ದಾನೆ. ಅದೇ ರೀತಿ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸ್ಥಳೀಯ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಬಾಲಕ ಉಸಿರುಗಟ್ಟಿ ಸಾವನ್ನಪ್ಪಿರುವುದು ಸಾಬೀತಾಗಿದೆ.
“ಮಕ್ಕಳು ತಾವು ನೋಡಿದ ದೃಶ್ಯಗಳನ್ನು ಅನುಕರಿಸುವ ಪ್ರಯತ್ನ ಮಾಡುತ್ತಾರೆ. ಹಾಗಾಗಿ ಪೋಷಕರು ಎಚ್ಚರದಿಂದರಬೇಕು” ಎಂದು ಪೊಲೀಸರು ಪೋಷಕರಿಗೆ ಮನವಿ ಮಾಡಿದ್ದಾರೆ.