ರಾಯಚೂರು: ಉತ್ತರ ಕರ್ನಾಟಕವನ್ನು ತೀವ್ರವಾಗಿ ಬಾಧಿಸಿದ್ದ ನೆರೆಯಲ್ಲಿ ಅದೆಷ್ಟೋ ಮಾನವೀಯ ಮುಖಗಳು ಬೆಳಕಿಗೆ ಬಂದಿವೆ. ಅದರಲ್ಲಿ ಒಂದು ಶಾಲಾ ಬಾಲಕನೊಬ್ಬ ಗಾಯಾಳುಗಳನ್ನು ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಗೆ ನೀರಿನಲ್ಲಿ ಮುಳುಗಿದ್ದ ಸೇತುವೆ ಮೇಲೆ ದಾರಿ ತೋರಿಸಿದ ಆ ಘಟನೆ. ದೇವದುರ್ಗದ ವೆಂಕಟೇಶ ಎಂಬ 12 ವರ್ಷದ ಶಾಲಾ ಬಾಲಕನ ಈ ಕೆಚ್ಚೆದೆಯ ಕಾರ್ಯವನ್ನು ಸ್ವಾತಂತ್ರ್ಯ ಸಂಭ್ರಮದ ದಿನದಂದು ಸ್ಥಳೀಯ ಆಡಳಿತವು ಗುರುತಿಸಿ ಆತನನ್ನು ಪುರಸ್ಕರಿಸಿದೆ.
ಘಟನೆಯ ವಿವರ:
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಹಿರಿಯನಕುಂಪಿ ಗ್ರಾಮದಲ್ಲಿ ನೆರೆ ನೀರಿನಿಂದ ಕಿರು ಸೇತುವೆ ಒಂದು ಸಂಪೂರ್ಣ ಜಲಾವೃತಗೊಂಡಿತ್ತು. ಆ ಸಂದರ್ಭದಲ್ಲಿ ನಾಲ್ವರು ಗಾಯಾಳು ಮಕ್ಕಳು ಹಾಗೂ ಓರ್ವ ಮಹಿಳೆಯ ಶವ ಇದ್ದ ಆ್ಯಂಬುಲೆನ್ಸ್ ತುರ್ತಾಗಿ ಆ ಸೇತುವೆಯನ್ನು ದಾಟಿ ಹೋಗಲೇಬೇಕಿತ್ತು. ಆದರೆ ಸಂಪೂರ್ಣ ನೀರು ತುಂಬಿಕೊಂಡಿದ್ದರಿಂದ ಆ್ಯಂಬುಲೆನ್ಸ್ ಚಾಲಕನಿಗೆ ಸೇತುವೆ ಮತ್ತು ನದಿಯ ಅಂತರವೇ ಗೊತ್ತಾಗುತ್ತಿರಲಿಲ್ಲ.
ಆ ಸಂದರ್ಭದಲ್ಲಿ 12 ವರ್ಷ ಪ್ರಾಯದ ವೆಂಕಟೇಶ ತಾನು ನೀರು ತುಂಬಿದ ಸೇತುವೆಯ ಮೇಲೆ ಓಡಿಕೊಂಡು ಸಾಗಿ ಆ್ಯಂಬುಲೆನ್ಸ್ ಚಾಲಕನಿಗೆ ಸೇತುವೆಯ ಮೇಲೆ ಸರಿಯಾಗಿ ವಾಹನ ಚಲಾಯಿಸಲು ಸಹಾಯ ಮಾಡುತ್ತಾನೆ. ಅಷ್ಟೊತ್ತಿಗೆ ಸೇತುವೆಯ ಇನ್ನೊಂದು ಬದಿಯಲ್ಲಿದ್ದ ಕೆಲವರು ಸಹಾಯಕ್ಕೆ ಬರುತ್ತಾರಾದರೂ ವೆಂಕಟೇಶನ ಧೈರ್ಯದ ಕಾರ್ಯದಿಂದ ಆ್ಯಂಬುಲೆನ್ಸ್ ಈ ಬದಿಗೆ ಯಶಸ್ವಿಯಾಗಿ ಸಾಗಿ ಬಂದಿತ್ತು.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು ಮಾತ್ರವಲ್ಲದೆ ಬಾಲಕನ ಈ ಸಮಯಪ್ರಜ್ಞೆಗೆ ಎಲ್ಲೆಡೆಯಿಂದಲೂ ಪ್ರಶಂಸೆ ವ್ಯಕ್ತವಾಗಿತ್ತು.