Advertisement

12 ವಾರ್ಡ್‌ ಸ್ಮಾರ್ಟ್  ಸಿಟಿ ವ್ಯಾಪ್ತಿಗೆ 

03:40 PM Sep 20, 2017 | |

ಶಿವಮೊಗ್ಗ: ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌. ಈಶ್ವರಪ್ಪ ಅಧ್ಯಕ್ಷತೆಯಲ್ಲಿ ಸ್ಮಾರ್ಟ್‌ಸಿಟಿ ಕುರಿತು ಸೋಮವಾರ ಸಂಜೆ ಪಾಲಿಕೆಯಲ್ಲಿ ಸಭೆ ನಡೆಯಿತು.

Advertisement

ನಗರ ಪಾಲಿಕೆ ಆಯುಕ್ತ ಮುಲೈ ಮುಹಿಲನ್‌ ಮಾತನಾಡಿ, ನಗರದ ಕೇಂದ್ರ ಭಾಗದಲ್ಲಿನ 12 ವಾರ್ಡ್‌ಗಳ ಆಯ್ದ ಪ್ರದೇಶಗಳು ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಸೇರುತ್ತವೆ. ಉಳಿದಂತೆ ಪಾರ್ಕ್‌ ಅಭಿವೃದ್ಧಿ, ವೃತ್ತಗಳ ಅಭಿವೃದ್ಧಿ ಇದರಿಂದ ಹೊರತಾಗಿರುತ್ತವೆ ಎಂದು ತಿಳಿಸಿದರು.

ಯೋಜನೆಗೆಂದು ನೀಡಲಾಗುವ ಒಂದು ಸಾವಿರ ಕೋಟಿ ರೂ. ಪೈಕಿ 600 ಕೋಟಿ ರೂ. ಮೂಲ ಸೌಕರ್ಯಕ್ಕೆ ವ್ಯಯ ಮಾಡಲಾಗುತ್ತದೆ. ಉಳಿದ 400 ಕೋಟಿ ರೂ. ವೃತ್ತಗಳ ಅಭಿವೃದ್ಧಿ, ಸಂಚಾರಿ ವ್ಯವಸ್ಥೆ ಅಭಿವೃದ್ಧಿ, ಘನತ್ಯಾಜ್ಯ ನಿರ್ವಹಣೆಗೆ ಬಳಸಿಕೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.

ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌. ಈಶ್ವರಪ್ಪ ಮಾತನಾಡಿ, ಐದು ವರ್ಷಗಳ ಕಾಲ ಒಂದೇ ಪ್ರದೇಶವನ್ನೂ ಅಭಿವೃದ್ಧಿ ಮಾಡ್ತೀರಾ? ನಗರ ಪಾಲಿಕೆಯ ಯಾವ ವಾರ್ಡ್‌ಗಳು ಸ್ಮಾರ್ಟ್‌ ಸಿಟಿ ಯೋಜನೆಯ ವ್ಯಾಪ್ತಿಗೆ ಒಳಪಡುವುದಿಲ್ಲ ಎಂಬ ಬಗ್ಗೆ ಮಾಹಿತಿ ನೀಡುವಂತೆ ಅಧಿಕಾರಿಗಳನ್ನು ಪ್ರಶ್ನಿಸಿದರು.

ಇಂಜಿನಿಯರ್‌ ಗಣೇಶ್‌ ಮಾತನಾಡಿ, 500 ಎಕರೆ ಪ್ರದೇಶ ಮಾತ್ರ ಸ್ಮಾರ್ಟ್‌ ಸಿಟಿ ಯೋಜನೆಗೆ ಆಯ್ಕೆ ಮಾಡಬೇಕೆಂದು ಕೇಂದ್ರ ಸರ್ಕಾರದ ನಿಯಮವಿದೆ. ಒಂದು ಸಾವಿರ ಕೋಟಿ ರೂ.ನಲ್ಲಿ ಎಷ್ಟು ಪ್ರದೇಶ ಅಭಿವೃದ್ಧಿಪಡಿಸಬಹುದೋ ಅದನ್ನು ಯೋಜನೆಯಲ್ಲಿ ಸೇರಿಸಲಾಗಿದೆ. ಆರು ಸಂಪೂರ್ಣ ವಾರ್ಡ್‌ಗಳು ಸ್ಮಾರ್ಟ್‌ ಸಿಟಿಯಿಂದ ಹೊರಗುಳಿಯುತ್ತವೆ ಎಂದು ಮಾಹಿತಿ ನೀಡಿದರು.

Advertisement

ಬಸ್‌ ನಿಲ್ದಾಣದಿಂದ ಕೃಷ್ಣಪ್ಪ ವೃತ್ತದ ರಸ್ತೆ ಅಭಿವೃದ್ಧಿಗೆ 48 ಕೋಟಿ ರೂ., ಸ್ಮಾರ್ಟ್‌ ರಸ್ತೆಗಳ ನಿರ್ಮಾಣಕ್ಕೆ 265.92 ಕೋಟಿ ರೂ., ಬಸ್‌ ಟರ್ಮಿನಲ್‌ ನಿರ್ಮಾಣಕ್ಕೆ 22.74 ಕೋಟಿ ರೂ., ಕನ್ಸರ್ವೆನ್ಸಿ ಅಭಿವೃದ್ಧಿಗೆ 21 ಕೋಟಿ ರೂ., ನಾಲೆಗಳ ಸೌಂದರ್ಯ ಹೆಚ್ಚಿಸಲು 72 ಕೋಟಿ ರೂ., ಪಾರ್ಕ್‌ ಅಭಿವೃದ್ಧಿಗೆ 96.84 ಕೋಟಿ ರೂ., ಜೈವಿಕ ಸಂಶೋಧನಾ ಕೇಂದ್ರಕ್ಕೆ 10 ಕೋಟಿ ರೂ., ಹೆರಿಟೇಜ್‌ ವಿಲೇಜ್‌ಗೆ 6 ಕೋಟಿ ರೂ. ಹಾಗೂ ಕೊಳಚೆ ಪ್ರದೇಶಗಳ ಅಭಿವೃದ್ಧಿಗೆ 81 ಕೋಟಿ ರೂ. ಬಳಕೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದರು.

ಅಲ್ಲದೆ, ಖಾಸಗಿ ಸಹಭಾಗಿತ್ವದಲ್ಲಿ ಪಂಪ್‌ ಹೌಸ್‌ನಲ್ಲಿ ಸೋಲಾರ್‌ ಮೇಲ್ಚಾವಣಿ ಅಳವಡಿಕೆಗೆ 4 ಕೋಟಿ ರೂ., ತುಂಗಾ ನಾಲೆಗೆ ಸೋಲಾರ್‌ ಮೇಲ್ಚಾವಣಿ 324 ಕೋಟಿ ರೂ., ಯೋಗ-ನ್ಯಾಚುರೋಪತಿ ಕೇಂದ್ರ 68 ಕೋಟಿ ರೂ., ಇಕೋ ರೆಸಾರ್ಟ್ -ಬಟರ್‌ಫ್ಲೈ ಪಾರ್ಕ್‌-93.91 ಕೋಟಿ ರೂ., ಐದು ಎಕರೆಯಲ್ಲಿ ವಾಟರ್‌ ಥೀಮ್‌ ಪಾರ್ಕ್‌ 15 ಕೋಟಿ ರೂ., ಶಿವಪ್ಪ ನಾಯಕ ಅರಮನೆ ನವೀಕರಣ 37.54 ಕೋಟಿ ರೂ., ಪುಷೋದ್ಯಮದ ಅಭಿವೃದ್ಧಿಗೆ 10.42 ಕೋಟಿ ರೂ., ಎಲ್‌ಇಡಿ ಬೀದಿ ದೀಪ ಅಳವಡಿಕೆ-2.97 ಕೋಟಿ ರೂ. ಹಾಗೂ 10 ಕೋಟಿ ರೂ. ವೆಚ್ಚದಲ್ಲಿ ಬಹುಮಹಡಿ ಕಾರ್‌ ಪಾರ್ಕಿಂಗ್‌ ನಿರ್ಮಾಣವಾಗಲಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಮೇಯರ್‌ ಏಳುಮಲೈ, ಉಪಮೇಯರ್‌ ರೂಪಾ ಲಕ್ಷ್ಮಣ್‌, ನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಅರ್ಚನಾ ಬಳ್ಳಕೆರೆ, ಎಸ್‌.ರಮೇಶ್‌, ನಗರ ಪಾಲಿಕೆ ಸದಸ್ಯರಾದ ಎನ್‌. ಜೆ. ರಾಜಶೇಖರ್‌, ಮಾಲತೇಶ್‌, ಮೋಹನ್‌ ರೆಡ್ಡಿ ಮತ್ತಿತರರು ಇದ್ದರು.

ಡೆಂಘೀ ಜ್ವರ ಹೆಚ್ಚಳವಾಗುತ್ತಿದೆ. ಯಾವ ಆಸ್ಪತ್ರೆಯಲ್ಲಿ ನೋಡಿದರೂ ಡೆಂಘೀ ತಗುಲಿರುವ ನಾಗರಿಕರು ಕಾಣುತ್ತಿದ್ದಾರೆ. ಫಾಗಿಂಗ್‌ಗೆ ಏನು ವ್ಯವಸ್ಥೆ ಮಾಡಿಕೊಂಡಿದ್ದೀರಿ. ಪಾಲಿಕೆಯಿಂದ ಸೂಕ್ತ ವ್ಯವಸ್ಥೆ ಮಾಡಿಕೊಂಡಂತಿಲ್ಲ. ಜಿಲ್ಲಾ ಆರೋಗ್ಯ ಇಲಾಖೆಯಿಂದ ನಿಮಗೆ ಏನಾದರೂ ಸಹಾಯ ಬೇಕಿದ್ದರೆ ಪಡೆದುಕೊಳ್ಳಿ ಎಂದು ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ನಗರ ಪಾಲಿಕೆ ಆಯುಕ್ತರಿಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next