ನವದೆಹಲಿ: ಪ್ಲಾಸ್ಟಿಕ್ ವಸ್ತುಗಳಿಂದಾಗುವ ಅನಾಹುತಗಳನ್ನು ತಪ್ಪಿಸಲು ದಿಟ್ಟ ಹೆಜ್ಜೆ ಇಟ್ಟಿರುವ ಕೇಂದ್ರ ಸರ್ಕಾರ ಸಣ್ಣ ಬಾಟಲಿಗಳು, ಸಿಗರೇಟ್ ತುಂಡುಗಳು ಸೇರಿದಂತೆ 12 ರೀತಿಯ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಲು ಚಿಂತನೆ ನಡೆಸಿದೆ.
ಮರು ಬಳಕೆ ಮಾಡಲಾಗದಂತಹ ಪ್ಲಾಸ್ಟಿಕ್ ವಸ್ತುಗಳು ಹೆಚ್ಚು ಅಪಾಯಯವನ್ನು ತಂದೊಡ್ಡುವುದರಿಂದ ಅವುಗಳನ್ನು ನಿಷೇಧಿಸಲು ಚಿಂತನೆ ನಡೆಸಲಾಗಿದೆ, ಇದನ್ನು ಹಂತ ಹಂತವಾಗಿ ಜಾರಿಗೆ ತರಲಾಗುವುದು. ಪ್ಲಾಸ್ಟಿಕ್ ಗೆ ಪರ್ಯಾಯವಾಗಿ ಹೊಸ ವಸ್ತುವನ್ನು ಜಾರಿಗೆ ತರಲಾಗುವುದು. ಇದು ಹೆಚ್ಚು ಜನರಿಗೆ ಉದ್ಯೋಗವಕಾಶ ಕೊಡಲು ಕೂಡ ನೆರವಾಗುತ್ತದೆ ಎಂದು ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವನ್ ತಿಳಿಸಿದ್ದಾರೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸಲ್ಲಿಸಲಾದ ನಿಷೇಧಿಸಲಾಗುವ ಪ್ಲಾಸ್ಟಿಕ್ ವಸ್ತುಗಳ ಪಟ್ಟಿ: 50 ಮೈಕ್ರಾನ್ಸ್ ಗಿಂತ ಕಡಿಮೆಯಿರುವ ತೆಳು ಕ್ಯಾರಿ ಬ್ಯಾಗ್ ಗಳು, ಪ್ಯಾಕಿಂಗ್ ಮಾಡಲಾಗುವ ಪ್ಲಾಸ್ಟಿಕ್ ಗಳು, ಸ್ರ್ಟಾ ಗಳು. ಪ್ಲಾಸ್ಟಿಕ್ ಲೇಪನವಾಗಿರುವ ಬೌಲ್ಸ್ , ಪ್ಲೇಟ್ಸ್ , ಕಪ್ ಗಳು, 150 ಮಿಲಿ ಮತ್ತು 5 ಗ್ರಾಂ ಗಳಿಗಿಂತ ಕಡಿಮೆಯಿರುವ ಕಪ್ ಗಳು, ಇಯರ್ ಬಡ್ ನಲ್ಲಿರುವ ಪ್ಲಾಸ್ಟಿಕ್ ಸ್ಟಿಕ್, ಬಲೂನ್ಸ್, ಪ್ಲಾಸ್ಟಿಕ್ ಧ್ವಜ ಮತ್ತು ಕ್ಯಾಂಡಲ್ಸ್, ಸಿಗರೇಟ್ ತುಂಡುಗಳು, 200 ಮಿಲೀ ಗಿಂತ ಕಡಿಮೆಯಿರುವ ಪ್ಲಾಸ್ಟಿಕ್ ಬಾಟಲಿಗಳು, 100 ಮೈಕ್ರಾನ್ಸ್ ಗಿಂತ ಕಡಿಮೆಯಿರುವ ರಸ್ತೆ ಬದಿಯ ಫಲಕಗಳು, ಅಲಂಕಾರಕ್ಕೆ ಬಳಸುವ ಥರ್ಮೋಕೋಲ್ (ಪಾಲಿಸ್ಟಿರೇನ್) ಸೇರಿದಂತೆ ಇನ್ನಿತರ ವಸ್ತುಗಳು.
2022ರ ವೇಳೆಗೆ ಪ್ಲಾಸ್ಟಿಕ್ ಗಳಿಂದಲೇ ಪರಿಸರಕ್ಕೆ ಹೆಚ್ಚು ಹಾನಿಯಾಗುವ ಸಾಧ್ಯತೆಯಿರುವದರಿಂದ ಮಾಲಿನ್ಯ ವಿರೋಧಿ ಸಂಸ್ಥೆ ಈ ನಿಷೇಧಿಸಲಾಗುವ ವಸ್ತುಗಳ ಪಟ್ಟಿ ತಯಾರಿಸಿದೆ.
ಸ್ವಾತಂತ್ರ್ಯ ದಿನಾಚರಣೆ ಭಾಷಣದ ವೇಳೆ ಪ್ರಧಾನಿ ನರೇಂದ್ರ ಮೋದಿ ಅಕ್ಟೋಬರ್ 2ರಂದು ಪ್ಲಾಸ್ಟಿಕ್ ನಿಷೇಧದ ಕುರಿತು ಮೊದಲ ಹೆಜ್ಜೆ ಇಡಲಾಗುವುದು ಎಂದು ತಿಳಿಸಿದ್ದರು.