Advertisement

ಸಸಿಹಿತ್ಲು ದೋಣಿ ದುರಂತ: ಸಂತ್ರಸ್ತ ಕುಟುಂಬಗಳಿಗೆ 12 ಲ.ರೂ. ಪರಿಹಾರ

03:25 AM Jun 29, 2017 | Team Udayavani |

ಸುರತ್ಕಲ್‌: ಸಸಿಹಿತ್ಲು ಬಳಿ ರವಿವಾರ ಸಂಭವಿಸಿದ ದೋಣಿ ದುರಂತದಲ್ಲಿ ಮೃತಪಟ್ಟ ಮೂವರ ಕುಟುಂಬಕ್ಕೆ ತಲಾ 4 ಲಕ್ಷ ರೂ.ಗಳನ್ನು ಶಾಸಕ ಮೊದಿನ್‌ ಬಾವಾ ಬುಧವಾರ ಹಸ್ತಾಂತರಿಸಿದರು. ಕೃಷ್ಣಾಪುರ ಕಾನದ ಕೋರ್ದಬ್ಬು ದೈವಸ್ಥಾನ ನಿವಾಸಿಗಳಾದ ಗುರುವಪ್ಪ, ಯಶವಂತ್‌ ಮತ್ತು ವಿಘ್ನೇಶ್‌ ಅವರು ಬಾಡಿಗೆ ದೋಣಿಯಲ್ಲಿ ವಿಹಾರ ತೆರಳಿದ್ದ ಸಂದರ್ಭ ದುರಂತ ಸಂಭವಿಸಿತ್ತು. ಬುಧವಾರ ಅವರ ಮನೆಗಳಿಗೆ ತೆರಳಿದ ಶಾಸಕರು ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ 4 ಲಕ್ಷ ರೂಪಾಯಿ ಮೊತ್ತದ ಚೆಕ್ಕನ್ನು ಹಸ್ತಾಂತರಿಸಿದರು. ಪ್ರಕೃತಿ ವಿಕೋಪ ನಿಧಿಯಿಂದ ಕೇವಲ 24 ಗಂಟೆಗಳ ಒಳಗೆ ಸರಕಾರ ಅನುದಾನ ವಿತರಿಸಿ ಶ್ಲಾಘನೆಗೆ ಪಾತ್ರವಾಗಿದೆ.

Advertisement

ಈ ಸಂದರ್ಭ ಬಾವಾ ಅವರು ಮಾತನಾಡಿ, ಪ್ರಕೃತಿ ವಿಕೋಪದಡಿ ಸಂತ್ರಸ್ತ  ಕುಟುಂಬಗಳಿಗೆ ಕ್ಷಿಪ್ರವಾಗಿ ಸ್ಪಂದಿಸಿ ಸಹಾಯ ಹಸ್ತ ನೀಡಲಾಗಿದೆ. ಜೀವಕ್ಕೆ ಬೆಲೆ ಕಟ್ಟಲಾಗದಿದ್ದರೂ  ಬಡವರ್ಗದ ಕುಟುಂಬಕ್ಕೆ ಅವರ ನಿತ್ಯ ಬದುಕಿಗೆ ಆಧಾರವಾಗಲೆಂದು ಮಾತ್ರ ಈ ನಿಧಿ ನೀಡಲಾಗಿದೆ. ಈ ಕುಟುಂಬಗಳಿಗೆ ಸರಕಾರದ ಅನುದಾನವನ್ನು ಒದಗಿಸಲು ತಹಶೀಲ್ದಾರ್‌ ಮಹದೇವಯ್ಯ ಹಾಗೂ ಕಂದಾಯಾಧಿಕಾರಿ ನವೀನ್‌ ಅವರು ಹಗಲು ರಾತ್ರಿ ದಾಖಲೆ ಸಂಗ್ರಹಿಸಿ ನೀಡಿದ್ದಾರೆ. ಅಧಿಕಾರಿ ವರ್ಗದ ಈ ಸಹಕಾರ ನಿಜಕ್ಕೂ ರಾಜ್ಯಕ್ಕೆ ಮಾದರಿ ಎಂದರು. ರಾಜ್ಯ ಮಹಿಳಾ ಕಾಂಗ್ರೆಸ್‌ ಇದರ ರಾಜ್ಯ ಕಾರ್ಯದರ್ಶಿ ಪ್ರತಿಭಾ ಕುಳಾಯಿ, ಕಾರ್ಪೊರೇಟರ್‌ ಗುಣಶೇಖರ್‌, ಮಾಜಿ ಕಾರ್ಪೊರೇಟರ್‌ ಹರೀಶ್‌ ಸುರತ್ಕಲ್‌, ತಹಶೀಲ್ದಾರ್‌ ಮಹದೇವಯ್ಯ, ಕಂದಾಯಾಧಿಕಾರಿ ನವೀನ್‌, ಮೊದಲಾದವರು ಉಪಸ್ಥಿತರಿದ್ದರು.

ವಿಶೇಷ ಮುತುವರ್ಜಿ
ಪ್ರಕೃತಿ ವಿಕೋಪದಡಿ ಸಂತ್ರಸ್ತ ಕುಟುಂಬಗಳಿಗೆ ಸಹಾಯ ಹಸ್ತ ಚಾಚಲು ಅಧಿಕಾರಿ ವರ್ಗ ಸದಾ ಸಿದ್ಧವಾಗಿರುತ್ತದೆ. ದಾಖಲೆ ಸಂಗ್ರಹಕ್ಕೆ ಹೆಚ್ಚಿನ ಅವಧಿ ಬೇಕಾಗುವುದರಿಂದ ಮಾತ್ರ ಕೆಲವೊಮ್ಮೆ ವಿಳಂಬವಾಗುತ್ತದೆ. ಸಸಿಹಿತ್ಲು ದುರಂತ ಪ್ರಕರಣದಲ್ಲಿ ಕ್ಷಿಪ್ರವಾಗಿ ಸರಕಾರಕ್ಕೆ ಬೇಕಾದ ದಾಖಲೆ ಸಂಗ್ರಹಿಸಿ ಬಡಕುಟುಂಬಕ್ಕೆ ಅನುದಾನ ಒದಗಿಸಲಾಗಿದೆ ಎಂದು ತಹಶೀಲ್ದಾರ್‌ ಮಹದೇವಯ್ಯ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next