ಲಖೀಂಪುರ ಖೇರಿ, ಉತ್ತರ ಪ್ರದೇಶ : ಇಂದು ನಸುಕಿನ ವೇಳೆ 24ನೇ ರಾಷ್ಟ್ರೀಯ ಹೆದ್ದಾರಿಯಲ್ಲಿ, ನಿಂತಿದ್ದ ಟ್ರಕ್ಕಿಗೆ ವ್ಯಾನ್ ಢಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ 12 ಮಂದಿ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ವ್ಯಾನಿನಲ್ಲಿ ಒಟ್ಟು 16 ಮಂದಿ ಇದ್ದರು. ಈ ಪೈಕಿ 12 ಮಂದಿ ಅಸು ನೀಗಿ ಉಳಿದ ನಾಲ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾದರು.
ಈ ಭೀಕರ ಅಪಘಾತದ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತೀವ್ರ ಆಘಾತ ವ್ಯಕ್ತಪಡಿಸಿದ್ದು ಅಪಘಾತ ಸಂತ್ರಸ್ತರಿಗೆ ಸರ್ವ ರೀತಿಯಲ್ಲಿ ನೆರವಾಗುವ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಈ ದುರ್ಘಟನೆಯು ಉಚೌಲಿಯಾ ಎಂಬಲ್ಲಿ ನಡೆದಿದೆ. ಶಹಜಹಾನ್‌ಪುರದಿಂದ ಸೀತಾಪುರಕ್ಕೆ ಹೋಗುತ್ತಿದ್ದ ಓವರ್ ಲೋಡ್ ಆಗಿದ್ದ ಟಾಟಾ ಮ್ಯಾಜಿಕ್ ವ್ಯಾನ್, ರಸ್ತೆ ಬದಿಯ ಹೊಟೇಲೊಂದರ ಬಳಿ ನಿಲ್ಲಿಸಿಡಲಾಗಿದ್ದ ಟ್ರಕ್ಕಿಗೆ ಹಿಂಬದಿಯಿಂದ ಢಿಕ್ಕಿ ಹೊಡೆಯಿತು ಎಂದು ಎಸ್‌ಪಿ ಎಸ್ ಚನ್ನಪ್ಪ ತಿಳಿಸಿದ್ದಾರೆ.
ವ್ಯಾನ್ ಚಾಲಕ ಅನೂಪ್ ಅವಸ್ಥಿ (25) ಮತ್ತು ಹೆಲ್ಪರ್ ಕಿಶನ್ (23) ಸೇರಿದಂತೆ ಒಟ್ಟು 9 ಮಂದಿ ಸ್ಥಳದಲ್ಲೇ ಮೃತಪಟ್ಟರು. 7 ಗಾಯಗಳುಗಳಲ್ಲಿ ಮೂವರನ್ನು ಶಹಜಹಾನ್‌ಪುರ ಆಸ್ಪತ್ರೆಗೆ ಸೇರಿಸಲಾಗಿದ್ದು ಅಲ್ಲಿ ಅವರ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.
ವ್ಯಾನ್ ಅತ್ಯಧಿಕ ವೇಗದಲ್ಲಿ ಧಾವಿಸುತ್ತಿದ್ದುದರಿಂದ ಅದರ ಚಾಲಕನಿಗೆ ನಿಯಂತ್ರಣ ತಪ್ಪಿ ಅಪಘಾತಕ್ಕೆ ಗುರಿಯಾಯಿತು; ಮೃತರ ಗುರುತನ್ನು ಪತ್ತೆ ಹಚ್ಚುವ ಕೆಲಸ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಮೊನ್ನೆ ಗುರುವಾರವಷ್ಟೇ ಕುಶಿನಗರದಲ್ಲಿ ಮಾನವ ಕಾವಲು ಇಲ್ಲದ ರೈಲ್ವೇ ಕ್ರಾಸಿಂಗ್‌ನಲ್ಲಿ ರೈಲು ವ್ಯಾನಿಗೆ ಢಿಕ್ಕಿಯಾಗಿ ಸಂಭವಿಸಿದ್ದ ಭೀಕರ ಅಪಘಾತದಲ್ಲಿ 13 ಮಂದಿ ಶಾಲಾ ಮಕ್ಕಳು ದಾರುಣವಾಗಿ ಅಸುನೀಗಿದ್ದರು.