ಕೋಲಾರ: ಜಿಲ್ಲೆಯ ಆಸ್ಪತ್ರೆಗಳ ಸೇವೆ, ಸ್ವಚ್ಛತೆ ಹಾಗೂ ಸೌಲಭ್ಯಗಳನ್ನು ಗುರುತಿಸಿ 12 ಆಸ್ಪತ್ರೆಗಳಿಗೆ ಕಾಯಕಲ್ಪ ಪ್ರಶಸ್ತಿ ದೊರೆತಿದೆ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದರು.
ತಮ್ಮ ಕಚೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಶುಕ್ರವಾರ ಆರೋಗ್ಯ ಇಲಾಖೆ ಸಂಬಂಧಿಸಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ವರ್ಷಕ್ಕಿಂತ ಈ ವರ್ಷ ಆಸ್ಪತ್ರೆಗಳು ಉತ್ತಮವಾಗಿ ಸೇವೆ ನೀಡುತ್ತಿವೆ. 53 ವಿಧದ ಸೇವೆಗಳನ್ನು ಒದಗಿಸಲಾಗುತ್ತಿದೆ. ಸಾರ್ವಜನಿಕರಿಗೆ ಇನ್ನೂ ಹೆಚ್ಚಿನ ಸೇವೆ ನೀಡಲಾಗುವುದು ಎಂದು ತಿಳಿಸಿದರು.
ಆಸ್ಪತ್ರೆಗಳ ಸ್ವಚ್ಛತೆ ಕಾಪಾಡಲು ಬಯೋಮೆಡಿಕಲ್ ವೇಸ್ಟ್ ಅನ್ನು ಸಂಗ್ರಹಿಸಿ, ಬೇರ್ಪಡಿಸಿ ವಿಲೇವಾರಿ ಮಾಡಲು ಮೀರಾ ಇನ್ಫೋಟೆಕ್ ಏಜೆನ್ಸಿಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದೆ. ಪ್ರತಿ 75 ಕಿ.ಮೀ. ವ್ಯಾಪ್ತಿಗೆ 1 ರಂತೆ ಏಜೆನ್ಸಿಯನ್ನು ಗುರುತಿಸಿದೆ. ಈಓ ಏಜೆನ್ಸಿಯು ಜಿಲ್ಲಾ ಆಸ್ಪತ್ರೆಗಳಲ್ಲಿ ಪ್ರತಿ ದಿನ ಮತ್ತು ಇತರೆ ಆಸ್ಪತ್ರೆಗಳಲ್ಲಿ 2 ದಿನಕ್ಕೊಮ್ಮೆ ಬಯೋಮೆಡಿಕಲ್ ವೇಸ್ಟ್ ಅನ್ನು ಸಂಗ್ರಹಿಸಿ ವಿಲೇವಾರಿ ಮಾಡುತ್ತಾರೆ. ಇಂದು ಈ ಸಂಬಂಧ ಅವರ ಸೇವೆಯ ಗುಣಮಟ್ಟ ಹಾಗೂ ಲಭ್ಯತೆ ಕುರಿತು ಸಭೆ ನಡೆಸಲಾಗಿದೆ ಎಂದರು.
ಮೀರಾ ಇನ್ಫೋಟೆಕ್ ಏಜೆನ್ಸಿಯವರು ವಿಲೇವಾರಿ ದರವನ್ನು ಹೆಚ್ಚಿಸುವಂತೆ ಮನವಿ ಸಲ್ಲಿಸಿದ್ದು, ಇವರ ಒಂದು ತಿಂಗಳ ಸೇವೆಯನ್ನು ಪರಿಶೀಲಿಸಿ ಗುಣಮಟ್ಟವನ್ನು ಪರೀಕ್ಷಿಸಿ ದರ ಹೆಚ್ಚಿಸುವ ಕುರಿತು ಕ್ರಮ ವಹಿಸಲಾಗುವುದು. ವಿಲೇವಾರಿ ಮಾಡುವ ವಾಹನಗಳಿಗೆ ಜಿಪಿಎಸ್ ಅಳವಡಿಸಿರುವುದಾಗಿ ಏಜೆನ್ಸಿಯವರು ತಿಳಿಸಿದ್ದು, ಇದನ್ನು ಪರಿಶೀಲಿಸಲಾಗುವುದು. ವೇಸ್ಟ್ ಮ್ಯಾನೇಜ್‌ಮೆಂಟ್ ನಿರ್ವಹಣೆಯಲ್ಲಿ ಅವಶ್ಯಕ ಸುರಕ್ಷತಾ ಪರಿಕರಗಳನ್ನು ಅಳವಡಿಸಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ವಿಜಯ್ ಕುಮಾರ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆರೋಗ್ಯ ಕಲ್ಯಾಣಾಧಿಕಾರಿ ಡಾ.ಭಾರತಿ, ಮೀರಾ ಇನ್ಫೋಟೆಕ್ ಸಂಸ್ಥೆಯ ವೆಂಕಟರಾಮರೆಡ್ಡಿ ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳು, ಆರೋಗ್ಯ ಸಿಬ್ಬಂದಿ ಉಪಸ್ಥಿತರಿದ್ದರು.