ಕೋಲಾರ: ದೇಶದಲ್ಲಿ ವೈದ್ಯಕೀಯ ದಾಖಲೆಗಳಿಲ್ಲದೇ ಶೇ.50 ಮಂದಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಇದನ್ನು ತಪ್ಪಿಸಲು ವ್ಯಕ್ತಿಯ ಆರೋಗ್ಯ ತಪಾಸಣೆ ನಡೆಸಿ ಗ್ಲೋಬಲ್ ಡಿಜಿಟಲ್ ಹೆಲ್ತ್ ಕಾರ್ಡ್ ನೀಡುವ ಪ್ಯಾಕ್ಸಿಕಾಪ್ ಸಂಸ್ಥೆಯ ಸಾಮಾಜಿಕ ಕಾಳಜಿ ಶ್ಲಾಘನೀಯ ಎಂದು ಕೋಚಿಮುಲ್ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್ ಅಭಿಪ್ರಾಯಪಟ್ಟರು.
ನಗರದ ಕುವೆಂಪುನಗರದ 4ನೇ ಅಡ್ಡರಸ್ತೆಯ ಶ್ರೀನಿವಾಸ ಎಂಟರ್‌ಪ್ರೈಸಸ್‌ನಲ್ಲಿ ಪ್ಯಾಕ್ಸಿಕಾಪ್ ಸಂಸ್ಥೆಯ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯನ ರಕ್ತದೊತ್ತಡ, ಡಯಾಬಿಟೀಸ್, ಕೊಲೆಸ್ಟ್ರಾಲ್, ಇಸಿಜಿ, ರಕ್ತಚಲನೆ, ರಕ್ತದಲ್ಲಿ ಆಮ್ಲಜನಕದ ಪ್ರಮಾಣ, ಹೃದಯ ಮತ್ತಿತರ 12 ಪರೀಕ್ಷೆಗಳನ್ನು ಕೇವಲ 600 ರೂ.ಗೆ ನಡೆಸಿ ಈ ಕಾರ್ಡ್ ನೀಡುತ್ತಿದ್ದಾರೆ ಎಂದು ಹೇಳಿದರು.
ಈ ಸಂಸ್ಥೆ ಬಡ, ಸಾಮಾನ್ಯ, ಮಧ್ಯಮ ವರ್ಗದವರ ಆರೋಗ್ಯದ ಬಗ್ಗೆಯೂ ವಹಿಸಿರುವ ಕಾಳಜಿ ಮೆಚ್ಚುವಂತದ್ದು ಎಂದ ಅವರು, ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೋರಿದರು. ಪ್ಯಾಕ್ಸಿ ಕಾಪ್ ಸಂಸ್ಥೆಯ ಸಿಇಒ ಹಾಗೂ ಸಂಸ್ಥಾಪಕ ರಜನೀಕಾಂತ್ ತೋರಗಲ್, ಪ್ರತಿ ವ್ಯಕ್ತಿಯನ್ನು ಎಲ್ಲಾ ರೀತಿಯಲ್ಲೂ ತಪಾಸಣೆ ನಡೆಸಿ ಆತನ ವೈದ್ಯಕೀಯ ಸ್ಥಿತಿಗತಿ ಆನ್‌ಲೈನ್‌ನಲ್ಲಿ ದಾಖಲಿಸಿ ಅದಕ್ಕೊಂದು ಕಾರ್ಡ್, ಬಾರ್‌ಕೋಡ್ ನೀಡಲಾಗುತ್ತದೆ. ತುರ್ತು ಸಂದರ್ಭಗಳಲ್ಲಿ ರೋಗಿಗೆ ರಕ್ತ, ಮೂತ್ರ, ಇಸಿಜಿ ಮತ್ತಿತರ ಪರೀಕ್ಷೆಗಳನ್ನು ನಡೆಸಿಯೇ ಚಿಕಿತ್ಸೆ ಆರಂಭಿಸುವ ಸ್ಥಿತಿ ಇದರಿಂದ ದೂರವಾಗುತ್ತದೆ, ಈ ಕಾರ್ಡ್‌ನ ಒಟಿಪಿ ನಂಬರ್ ನೀಡಿದ ಕೂಡಲೇ ರೋಗಿಯ ಆರೋಗ್ಯ ಸ್ಥಿತಿ ವೈದ್ಯರಿಗೆ ಅರಿವಾಗಿ ಯಾವುದೇ ಪರೀಕ್ಷೆಗಳಿಲ್ಲದೇ ಚಿಕಿತ್ಸೆ ಆರಂಭಿಸುವುದರಿಂದ ಜೀವ ಉಳಿಸಲು ಸಹಕಾರಿ ಎಂದರು.
ಜಗತ್ತಿನ ಯಾವುದೇ ದೇಶದ ಆಸ್ಪತ್ರೆಗೆ ಹೋದೊಡನೇ ಈ ಗ್ಲೋಬಲ್ ಡಿಜಿಟಲ್ ಹೆಲ್ತ್ ಕಾರ್ಡ್‌ನಿಂದಾಗಿ ಶೀಘ್ರ ಚಿಕಿತ್ಸೆ ಸಿಗುತ್ತದೆ ಎಂದು ತಿಳಿಸಿದರು. ಸಾಮಾಜಿಕ ಕಾಳಜಿಯಿಂದ ವಿಶ್ವದ ಖ್ಯಾತ 3600 ವೈದ್ಯರು ಸೇರಿ ಈ ಸಂಸ್ಥೆ ಸ್ಥಾಪಿಸಿದ್ದು, ಈ ಕಾರ್ಡ್ ಮೂಲಕ ವಿಶ್ವದ ಯಾವುದೇ ಮೂಲೆಯಲ್ಲೂ ರೋಗಿಗೆ ಆಸ್ಪತ್ರೆಗೆ ಹೋದ ಕೂಡಲೇ ಯಾವುದೇ ಪರೀಕ್ಷೆಗೆ ಕಾಯದೇ, ಚಿಕಿತ್ಸೆ ಆರಂಭಿಸಲು ಸಹಕಾರಿಯಾಗಿ ಸಾವಿನ ಪ್ರಮಾಣ ಕಡಿಮೆಯಾಗುತ್ತದೆ ಎಂಬ ಧ್ಯೇಯ ನಮ್ಮದಾಗಿದೆ ಎಂದರು. ಹೊರಗಡೆ ಕೇವಲ ಒಂದೆರಡು ಪರೀಕ್ಷೆಗಳಿಗೆ ಸಾವಿರಾರು ಆಗುತ್ತದೆ, ಇಲ್ಲಿ ಎಲ್ಲಾ ಪರೀಕ್ಷೆಗೂ ಕೇವಲ 600 ಪಡೆದು ನಿಮ್ಮ ಆರೋಗ್ಯ ಸ್ಥಿತಿ ದಾಖಲಿಸುತ್ತಿದ್ದು, ಜನತೆ ಇದರ ಪ್ರಯೋಜನ ಪಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಎಸ್.ಎನ್.ವಿಜಯಕುಮಾರ್, ಡಾ.ಜನಾರ್ದನ್, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಕೆ.ಎನ್.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಕೆ.ಬಿ.ಅಶೋಕ್, ಖಜಾಂಚಿ ಎಸ್.ಚೌಡಪ್ಪ ಇದ್ದರು.