ಹೊಸದಿಲ್ಲಿ: ಅಮೆರಿಕ-ಚೀನಾ ವ್ಯಾಪಾರ ಯುದ್ಧದಿಂದಾಗಿ ಇದೀಗ ಭಾರತಕ್ಕೆ ಅದೃಷ್ಟ ಖುಲಾಯಿಸುವ ಸೂಚನೆ ಇದೆ.
ಜಾಗತಿಕ ಮಟ್ಟದ ಪ್ರಮುಖ 12 ಕಂಪೆನಿಗಳು ತಮ್ಮ ನೆಲೆಯನ್ನು ಚೀನದಿಂದ ಭಾರತಕ್ಕೆ ವರ್ಗಾಯಿಸಲು ಉತ್ಸುಕವಾಗಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಇತ್ತೀಚೆಗೆ ಆರ್ಥಿಕ ಉತ್ತೇಜನಕ್ಕೆ ಕೇಂದ್ರ ಸರಕಾರ ಕಾರ್ಪೊರೆಟ್ ತೆರಿಗೆಯನ್ನು ಶೇ.15ರಷ್ಟಕ್ಕೆ ಇಳಿಕೆ ಮಾಡಿದ್ದು ಇದರ ಪರಿಣಾಮ ಕಂಪೆನಿಗಳು ಲಾಭ ಪಡೆಯಲು ಮುಂದಾಗಿವೆ ಎಂದು ಹೇಳಿದ್ದಾರೆ.
ಚೀನದಿಂದ ಹೊರಬರಲು ಉದ್ದೇಶಿಸಿರುವ ಕಂಪೆನಿಗಳೊಂದಿಗೆ ಮಾತುಕತೆ ನಡೆಸಲು ಒಂದು ಟಾಸ್ಕ್ಫೋರ್ಸ್ ರಚಿಸಲಾಗಿದ್ದು, ಅವರು ಈ ಕಂಪೆನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಈಗಾಗಲೇ 12 ಕಂಪೆನಿಗಳು ಈ ಕುರಿತಾಗಿ ಮಾತುಕತೆ ನಡೆಸಿದ್ದು, ಚರ್ಚೆ ನಡೆದ ಬಳಿಕ ಸರಕಾರ ಸೂಕ್ತ ನೆರವು ನೀಡುವ ಭರವಸೆ ಇದೆ. ಸೂಕ್ತ ವ್ಯವಸ್ಥೆಗಳು ಇಲ್ಲಿ ಸೃಷ್ಟಿಯಾದ ಬಳಿಕ ಕಂಪೆನಿಗಳು ಇಲ್ಲಿಗೆ ಬರಬಹುದು ಎಂದಿದ್ದಾರೆ. ಚೀನದಿಂದ ಹೊರಬರುವ ಕಂಪೆನಿಗಳನ್ನು ಭಾರತಕ್ಕೆ ಕರೆತರಲು ಸೂಕ್ತ ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ. ಇದಕ್ಕೆ ಪೂರಕವಾಗಿ ಮುಂದಿನ ಐದು ವರ್ಷಗಳಲ್ಲಿ 100 ಲಕ್ಷ ಕೋಟಿ ರೂ.ಗಳಷ್ಟು ಮೊತ್ತದ ಮೂಲಸೌಕರ್ಯ ಯೋಜನೆಗಳು ರೂಪು ತಳೆಯಲಿದ್ದು ಡಿ.15ರ ಮೊದಲು ಪ್ರಮುಖ 10 ಯೋಜನೆಗಳು ಘೋಷಣೆಯಾಗಲಿವೆ ಎಂದು ಸಚಿವೆ ಹೇಳಿದ್ದಾರೆ.
ಕಳೆದ 28 ವರ್ಷಗಳಲ್ಲೇ ಅತಿ ಹೆಚ್ಚು ಪ್ರಮಾಣದಲ್ಲಿ ತೆರಿಗೆ ಕಡಿತಮಾಡಲಾಗಿದೆ. ಸದ್ಯ ಇರುವ ಕಂಪೆನಿಗಳಿಗೆ ಮೂಲ ಕಾರ್ಪೊರೆಟ್ ತೆರಿಗೆಯನ್ನು ಶೇ.30ರಿಂದ ಶೇ.22ರಷ್ಟಕ್ಕೆ ಇಳಿಸಲಾಗಿದೆ. 2019 ಅ.1ರ ಬಳಿಕ ಮತ್ತು 2023 ಮಾ.31ರ ಮೊದಲು ಸ್ಥಾಪನೆಯಾಗುವ ಉತ್ಪಾದಕ ಕಂಪೆನಿಗಳಿಗೆ ಕಾರ್ಪೊರೆಟ್ ತೆರಿಗೆಯನ್ನು ಶೇ.25ರಿಂದ ಶೇ.15ರಷ್ಟಕ್ಕೆ ಇಳಿಸಲಾಗಿದೆ.