ಗ್ವಾಲಿಯರ್: ದಕ್ಷಿಣ ಆಫ್ರಿಕಾದಿಂದ 12 ಚೀತಾಗಳನ್ನು ಇಂದು ಬೆಳಗ್ಗೆ ಮಧ್ಯಪ್ರದೇಶಕ್ಕೆ ತೆರಲಾಯಿತು. ಈ ಮೊದಲು ನಮೀಬಿಯಾದಿಂದ ಎಂಟು ಚೀತಾಗಳನ್ನು ತರಲಾಗಿತ್ತು.
ಚಿರತೆಗಳನ್ನು ಹೊತ್ತಿದ್ದ ವಾಯುಪಡೆಯ ವಿಮಾನವೊಂದು ಗ್ವಾಲಿಯರ್ ವಾಯುನೆಲೆಗೆ ಬೆಳಗ್ಗೆ 10 ಗಂಟೆಗೆ ಬಂದಿಳಿಯಿತು. ಈಗ ಅವುಗಳನ್ನು ಹೆಲಿಕಾಪ್ಟರ್ ಗಳಲ್ಲಿ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಕರೆದೊಯ್ಯಲಾಗುತ್ತದೆ.
ಏಳು ಗಂಡು ಮತ್ತು ಐದು ಹೆಣ್ಣು ಚೀತಾಗಳನ್ನು ತರಲಾಗಿದೆ. ಮಧ್ಯ ಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಅವು ಕೆಲ ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇರಲಿದೆ.
ಚೀತಾಗಳಿಗೆ ಮೀಸಲು ಪ್ರದೇಶದಲ್ಲಿ 10 ಕ್ವಾರಂಟೈನ್ ಆವರಣಗಳನ್ನು ರಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತೀಯ ವನ್ಯಜೀವಿ ಕಾನೂನಿನ ಪ್ರಕಾರ, ದೇಶಕ್ಕೆ ಬಂದ ನಂತರ ಪ್ರಾಣಿಗಳನ್ನು 30 ದಿನಗಳವರೆಗೆ ಪ್ರತ್ಯೇಕವಾಗಿ ಇರಿಸಬೇಕಾಗುತ್ತದೆ.
ಕಳೆದ ಸಪ್ಟೆಂಬರ್ ನಲ್ಲಿ ನಮೀಬಿಯಾದಿಂದ ಎಂಟು ಚೀತಾಗಳನ್ನು ತರಲಾಗಿತ್ತು. ಅವರುಗಳನ್ನು ಸೆಪ್ಟೆಂಬರ್ 17ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕುನೊ ಪಾರ್ಕ್ ಗೆ ಬಿಡುಗಡೆ ಮಾಡಿದ್ದರು.