Advertisement

ಸುಖೀಗೀತ

10:20 AM Feb 29, 2020 | mahesh |

ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಆ್ಯಂಬುಲೆನ್ಸ್‌ ಸೇವೆ ಒದಗಿಸುತ್ತಿರುವ “ಕಾವೇರಿ ಆ್ಯಂಬುಲೆನ್ಸ್‌’ನ ಒಡತಿ ರಾಧಿಕಾ ಸಿ.ಎಸ್‌. ಮಹಿಳೆಯೊಬ್ಬರು ಆ್ಯಂಬುಲೆನ್ಸ್‌ ಚಾಲನೆ ಮಾಡುವುದು ಕಷ್ಟ ಎನ್ನುವ ಕಾಲದಲ್ಲಿ, ರಾಧಿಕಾ ಚಾಲಕಿಯಾಗಿ ಯಶಸ್ಸು ಕಂಡಿದ್ದಾರೆ. 12 ಆ್ಯಂಬುಲೆನ್ಸ್‌ಗಳನ್ನು ನಿರ್ವಹಿಸುತ್ತ ಅನೇಕರಿಗೆ ಉದ್ಯೋಗವನ್ನೂ ಕಲ್ಪಿಸಿದ್ದಾರೆ. ಅನಾರೋಗ್ಯದಿಂದ ಆ್ಯಂಬುಲೆನ್ಸ್‌ ಹತ್ತುವ ಎಷ್ಟೋ ಮಂದಿ ಬಡವರಾಗಿದ್ದಾಗ, ಸ್ವತಃ ಸಹಾಯ ಮಾಡಿದವರು. ಅವರು ಸಾಗಿಬಂದ ಬದುಕಿನ ಹಾದಿಯಲ್ಲಿ ಹೂವು-ಮುಳ್ಳು ಎರಡೂ ಇದ್ದವು. ತಮ್ಮ ಬದುಕಿನ ಕುರಿತು ಅವರು ಹೇಳಿಕೊಂಡಿದ್ದಾರೆ:

Advertisement

ಈಗ ಎಲ್ಲ ನೆನಪು ಮಾಡಿಕೊಂಡರೆ ಕಣ್ಣಲ್ಲಿ ನೀರು ತುಂಬಿಬಿಡುತ್ತದೆ. ಹಾಗಂತ ಈಗ ನಾನು ಬಹಳ ಕಷ್ಟದಲ್ಲಿದ್ದೇನೆ ಎಂದೇನಲ್ಲ. ಈಗ ಬದುಕು ಸುಖವಾಗಿದೆ. ಹನ್ನೆರಡು ಆ್ಯಂಬುಲೆನ್ಸ್‌ ಗಳು, ಎರಡು ಬಸ್ಸುಗಳನ್ನು ನಡೆಸುತ್ತಿದ್ದೇನೆ. ಹಣಕಾಸಿನ ಕೊರತೆಯೇನೂ ಇಲ್ಲ. ಮಕ್ಕಳಿಬ್ಬರೂ ಓದಿ ತಮ್ಮ ಕಾಲಿನ ಮೇಲೆ ನಿಂತಿದ್ದಾರೆ. ಆದರೆ, ಕಳೆದ ದಿನಗಳನ್ನು ಮರೆಯುವುದು ಸಾಧ್ಯವೇ ಇಲ್ಲ. ಆ ದಿನಗಳು ಹಾಗಿದ್ದವು.

ನಾನು ಹುಟ್ಟಿದ್ದು ಹಾಸನದಲ್ಲಿ. ಅಪ್ಪ ಅಮ್ಮ ಕೂಲಿಕಾರ್ಮಿಕರಾದ್ದರಿಂದ ನಾನೂ ಶಾಲೆಗೆ ಹೋಗುತ್ತ, ಕೂಲಿಗೂ ಹೋಗುತ್ತ ಹೇಗೋ ಹತ್ತನೇ ತರಗತಿಯನ್ನು ತಲುಪಿದೆ. ಅಂಗನವಾಡಿ ಸಹಾಯಕಿಯಾಗಿ ಕೆಲಸ ಸಿಕ್ಕಿದಾಗ ಕೂಲಿ ಕೆಲಸದಿಂದ ಮುಕ್ತಿ ಸಿಕ್ಕಿತು. ಆಗ ನನಗೆ ನರ್ಸ್‌ ಆಗಬೇಕು ಎಂಬ ಆಸೆ ಚಿಗುರೊಡೆಯಿತು. ಅದಕ್ಕೆ ಸಂಬಂಧಿಸಿದ ಪರೀಕ್ಷೆ ಬರೆಯಲು ಹಣ ಹೊಂದಿಸಿಕೊಂಡು ಪುತ್ತೂರಿಗೆ ಬರುವಷ್ಟರಲ್ಲಿ ಆ ಪರೀಕ್ಷೆಯ ದಿನಾಂಕ ಮುಗಿದು ಹೋಗಿತ್ತು. ಅಲ್ಲಿ ವೈದ್ಯರಾದ ಡಾ. ನಳಿನಿ ರೈ ಅವರ ಮನೆಯಲ್ಲಿ ಕೆಲಸ ಮಾಡುತ್ತ ನರ್ಸಿಂಗ್‌ ಕಲಿತೆ. ಅಷ್ಟರಲ್ಲಿ ಮದುವೆಯೂ ಆಯಿತು. ಕೊಡಗಿನವರಾದ ಪತಿ ಸಿ.ಎಸ್‌. ಸುರೇಶ್‌ ಅವರೊಡನೆ ಮಂಗಳೂರಿಗೆ ಬಂದಾಗ ಬದುಕು ಹೊಸ ದಾರಿಯನ್ನು ತೋರಿಸಿತು. ಚಿತ್ರಾಪುರದಲ್ಲಿ ಸಮುದ್ರ ದಡದಲ್ಲಿ ಮನೆಮಾಡಿಕೊಂಡಿದ್ದೆವು. ಆ್ಯಂಬುಲೆನ್ಸ್‌ ಚಾಲಕರಾಗಿದ್ದ ಅವರು, ಮದುವೆಯಾದ ಹೊಸದರಲ್ಲಿ “ನೀನೂ ಗಾಡಿ ಕಲಿ’ ಎಂದು ಹುರಿದುಂಬಿಸುತ್ತಿದ್ದರು. ನಾನು ಕಲಿಯುವುದಿಲ್ಲ ಎಂದು ಹಠ ಮಾಡುತ್ತಿದ್ದೆ. ಮನೆಗೆಂದೇ ಒಂದು ಕಾರು ಖರೀದಿಸಿದಾಗ, ಅವರು “ಡ್ರೈವಿಂಗ್‌ ಕಲಿ’ ಅಂತ ಜೋರುದನಿಯಲ್ಲಿ ಹೇಳಿದರು. ಆಗೆಲ್ಲ ಮನಸ್ಸಿಲ್ಲದ ಮನಸ್ಸಿನಿಂದ ಕಲಿಯುತ್ತಿದ್ದೆ. ಆದರೆ, ದೇವರು ಅಂತಹ ಸ್ಥಿತಿಯನ್ನು ಯಾಕೆ ಸೃಷ್ಟಿಸಿದ ಎಂಬುದು ಬಳಿಕ ಅರ್ಥವಾಯಿತು. ಅವರು ಅಷ್ಟು ಬೇಗ ಹೋಗಿಬಿಡುತ್ತಾರೆ ಎಂದು ನಾನು ಕನಸಿನಲ್ಲಿಯೂ ಭಾವಿಸಿರಲಿಲ್ಲ. ದೊಡ್ಡ ಮಗಳು ಭಾರ್ಗವಿ, ಎರಡನೇ ಮಗಳು ಭೂಮಿಕಾ ಜೊತೆಗೆ ನಾವು ನೆಮ್ಮದಿಯಿಂದಲೇ ಇದ್ದೆವು. ಭಾರೀ ಅನುಕೂಲಸ್ಥರಲ್ಲದೇ ಇದ್ದರೂ, ದುಡಿದು ತಿನ್ನುತ್ತ ಚೆನ್ನಾಗಿಯೇ ಜೀವನ ನಡೆಯುತ್ತಿತ್ತು. ಯಾವ ದೃಷ್ಟಿ ಬಡಿಯಿತೋ ಏನೋ, ಅವರಿಗೆ ಕ್ಯಾನ್ಸರ್‌ ಕಾಯಿಲೆ ಬಂತು. ಅವರನ್ನು ಉಳಿಸಿಕೊಳ್ಳಲು ಎಷ್ಟು ಪ್ರಯತ್ನಪಟ್ಟೆನೆಂದರೆ, ಸಂಗ್ರಹಿಸಿಟ್ಟ ದುಡ್ಡು ಚಿನ್ನ ಎಲ್ಲ ಖಾಲಿ ಆಯಿತು. ಸಾಲದ ಹೊರೆ ದೊಡ್ಡದಾಗುತ್ತಾ ಹೋಯಿತು. ಅವರನ್ನುಳಿಸಿಕೊಂಡರೆ ಸಾಕಿತ್ತು. ಆದರೆ ಅದು ಸಾಧ್ಯ ಆಗಲೇ ಇಲ್ಲ. ಅವರು ನಮ್ಮನ್ನೆಲ್ಲ ಬಿಟ್ಟು ಹೋದರು. ಇನ್ಯಾಕೆ ನನಗೆ ಬದುಕು ಎನ್ನುತ್ತಾ ನಾನು ಕುಸಿದು ಕುಳಿತೆ. ಖನ್ನತೆಯಿಂದ ತುಂಬ ಸೋತಿದ್ದೆ. ಆಗ ನಮ್ಮ ಕುಟುಂಬದ ಹಿತೈಷಿ ಸುನೀಲ್‌ ಕುಮಾರ್‌ ಅವರು ತವರಿನ ಅಣ್ಣನಂತೆ ನಿಂತು ನನಗೆ ಆಸರೆಯಾದರು. ಪುಟ್ಟ ಮಕ್ಕಳ ಬದುಕನ್ನು ಕಟ್ಟುವ ಜವಾಬ್ದಾರಿ ನನ್ನ ಮೇಲಿದೆ ಎಂಬುದನ್ನು ನೆನಪಿಸಿಕೊಟ್ಟರು. ಬಹಳ ದಿನದಿಂದ ನಿಂತಿದ್ದ ಆ್ಯಂಬುಲೆನ್ಸ್‌ ಹೊರತೆಗೆದೆ. ಡ್ರೈವಿಂಗ್‌ ಕಲಿತದ್ದು ಎಷ್ಟು ಉಪಕಾರ ಆಯಿತು ! ಹಾಗೆ ಶುರುವಾದ ಬದುಕು ಇಲ್ಲಿಯವರೆಗೆ ನಡೆಸಿಕೊಂಡು ಬಂದಿದೆ.

ಮೊತ್ತಮೊದಲು ಆ್ಯಂಬುಲೆನ್ಸ್‌ ನಲ್ಲಿ ಚಿತ್ರಾಪುರದ ಬಳಿ ಒಬ್ಬರು ಗರ್ಭಿಣಿಯನ್ನು ಕರೆದುಕೊಂಡು ಹೋಗಬೇಕಾಯಿತು. ಅವರು ತುಂಬ ಬಡವರಾಗಿದ್ದರು. ಮನೆಯಿಂದ ತುಸು ದೂರ ಹೋಗುವಷ್ಟರಲ್ಲಿ, ಮನೆಯವರೇ ಹಣಕಾಸಿನ ತೊಂದರೆ ಬಗ್ಗೆ ಮಾತನಾಡಿಕೊಳ್ಳುತ್ತಿದ್ದುದು ನನ್ನ ಕಿವಿಗೆ ಬಿತ್ತು. ನಾನು ನರ್ಸಿಂಗ್‌ ಕಲಿತಿದ್ದೆನಲ್ಲ. ಹಾಗಾಗಿ, ಧೈರ್ಯ ತಂದುಕೊಂಡು ಕೇಳಿದೆ. “ಎರಡನೇ ಹೆರಿಗೆ ಆದ್ದರಿಂದ ನಾನು ಸಹಾಯ ಮಾಡಲಾ?’ ಅಂತ. ಅವರೂ ಒಪ್ಪಿದರು. ಮನೆಗೆ ವಾಪಸ್‌ ಹೋಗಿ, ಹೆರಿಗೆ ಮಾಡಿಸಿದೆ.

ಆದರೆ, ಎಲ್ಲ ಪ್ರಕರಣಗಳೂ ಹೀಗೆಯೇ ಇರುವುದಿಲ್ಲವಲ್ಲ. ಪಣಂಬೂರಿನಲ್ಲಿ ವೃದ್ಧರೊಬ್ಬರು ಅಪಘಾತವಾಗಿ ರಸ್ತೆಯಲ್ಲಿ ಬಿದ್ದಿದ್ದರು. ಅಪಘಾತ ಮಾಡಿದ ಗಾಡಿ ಹೊರಟು ಹೋಗಿತ್ತು. ಜನರೆಲ್ಲ ನಿಂತು ನೋಡುತ್ತಿದ್ದರೇ ವಿನಃ ಅವರಿಗೆ ಸಹಾಯ ಮಾಡುತ್ತಿರಲಿಲ್ಲ. ಆಗ ನಾನು ಧೈರ್ಯ ಮಾಡಿ ಅವರನ್ನು ಕರೆದೊಯ್ದೆ. ಹಾಗೆ ಚಾಲನೆ ಮಾಡುವಾಗ ಎಷ್ಟೊಂದು ಆತಂಕವಾಗುತ್ತಿತ್ತು !

Advertisement

ಮತ್ತೂಂದು ಕತೆ ಹೇಳಲೇಬೇಕು. ಒಮ್ಮೆ ಬಳ್ಳಾರಿಯ ಮಹಿಳೆಯೊಬ್ಬರ ಮಗು ತೀರಿಕೊಂಡಿತ್ತು. ಶವವನ್ನು ಬಳ್ಳಾರಿಗೆ ಕೊಂಡೊಯ್ಯಲು ಅವರ ಬಳಿ ಹಣವೇ ಇರಲಿಲ್ಲ. ಊರು ತಲುಪಿದ ಮೇಲೆ ಕೊಡುತ್ತೇನೆ ಎಂದಾಗ, ನಾನು ಒಪ್ಪಿ ಆ್ಯಂಬುಲೆನ್ಸ್‌ ನಲ್ಲಿ ಹೊರಟೆ. ಆದರೆ, ಬಳ್ಳಾರಿ ತಲುಪಿದಾಗ ಊರಿನವರೆಲ್ಲ ಸೇರಿ, ಆ್ಯಂಬುಲೆನ್ಸ್‌ನ್ನು ತಡೆದರು. ಮಹಿಳೆಯ ಮೇಲಿನ ಅಸಮಾಧಾನಕ್ಕೆ ಗಾಡಿಯನ್ನು ಅಡ್ಡಗಟ್ಟಿದರು. ಭಾರೀ ಜನ ಸೇರಿದ್ದರು. ನಾನು ಏಕಾಂಗಿಯಾಗಿ ಅವರೊಡನೆ ಮಾತನಾಡಬೇಕಾಯಿತು.

ಕೊನೆಗೆ ಅಲ್ಲಿನ ಪೊಲೀಸ್‌ ಠಾಣೆಗೆ ಹೋದಾಗ, “ಸುಮ್ಮನೇ ಗಲಾಟೆ ಏಕೆ, ಮಗುವಿನ ಶವ ಕೊಡಿ, ಮಹಿಳೆಯನ್ನು ವಾಪಸ್‌ ಕರೆದುಕೊಂಡು ಹೋಗಿ’ ಎಂದುಬಿಟ್ಟರು. “ಅದು ಸಾಧ್ಯವಿಲ್ಲ’ ಎಂದ ನಾನು ಮುಚ್ಚಳಿಕೆ ಬರೆದುಕೊಟ್ಟೆ.

ಮಹಿಳೆ ಮತ್ತು ಮಗುವಿನ ಶವದೊಂದಿಗೆ ವಾಪಸ್‌ ಬಂದೆ. ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಮಾತುಕತೆ ನಡೆಸಿ, ನಾನೇ ಆಕೆಯನ್ನು ಮಂಗಳೂರಿನ ನಂದಿಗುಡ್ಡೆ ರುದ್ರಭೂಮಿಗೆ ಕರೆದುಕೊಂಡು ಹೋಗಿ, ಪೊಲೀಸರು ಮತ್ತು ಇತರ ಆ್ಯಂಬುಲೆನ್ಸ್‌ನ ಚಾಲಕರ ಸಮ್ಮುಖದಲ್ಲಿ ಶವಸಂಸ್ಕಾರ ಮಾಡಿದೆ. ಆ ಮಹಿಳೆ ನಮ್ಮ ಮನೆಯಲ್ಲಿಯೇ ಕೆಲಕಾಲ ಇದ್ದು, ಸುಧಾರಿಸಿಕೊಂಡಳು. ಅವಳಿಗೊಂದು ಕೆಲಸ ಕೊಡಿಸಿದ ಬಳಿಕ ಆಕೆ ತನ್ನ ಬದುಕು ಕಟ್ಟಿಕೊಂಡಳು.

ಇಂತಹ ಅನೇಕ ಘಟನೆಗಳು ನಡೆದಿವೆ. ವೃತ್ತಿಕ್ಷೇತ್ರದ ವೈಮನಸ್ಯಗಳು, ಮಹಿಳೆ ಎಂಬ ಕಾರಣಕ್ಕೇ ಉಂಟಾದ ಜಗಳಗಳು ನನ್ನನ್ನು ಕೆಲವೊಮ್ಮೆ ಕಂಗೆಡಿಸಿವೆ. ಆದರೆ, ನಾನು ಅವುಗಳಿಗೆ ಬೆದರಲಿಲ್ಲ. ನನ್ನ ನಂಬಿಕೆ ಒಂದೇ. ಹೆಚ್ಚೆಂದರೆ ನನಗೆ ಸಾವು ಬರಬಹುದು. ಅದು ಹೇಗೆ ಬರಬೇಕೆಂದು ದೇವರು ನಿಶ್ಚಯಿಸಿದ್ದಾರೋ ಹಾಗೆಯೇ ಸಂಭವಿಸುವುದು. ಅಂದಮೇಲೆ ಭಯವೇಕೆ ಎಂಬ ಧೊರಣೆ ನನ್ನದು. ಹಾಗಾಗಿ ಧೈರ್ಯದಿಂದ ಬಿಹಾರ, ರಾಜಸ್ಥಾನ, ಪಾಟ್ನಾ ಮುಂತಾದ ಕಡೆಗಳಿಗೆ ಆ್ಯಂಬುಲೆನ್ಸ್‌ ನಲ್ಲಿ ಸಾಗಿದ್ದೇನೆ.

ಇದು ಹೊತ್ತುಗೊತ್ತಿಲ್ಲದ ವೃತ್ತಿ. ದೊಡ್ಡ ಮಗಳು ಒಂಬತ್ತನೆಯ ತರಗತಿಯಲ್ಲಿದ್ದಾಗ ಹುಟ್ಟುಹಬ್ಬ ಆಚರಣೆಗೆ ಸಿದ್ಧತೆ ಮಾಡಿಕೊಂಡಿದ್ದೆವು. ಆ್ಯಂಬುಲೆನ್ಸ್‌ಗಾಗಿ ಕರೆ ಬಂದಾಗ ಹೊರಟು ಬಿಟ್ಟೆ. ಅಷ್ಟೇ ಏಕೆ, ಅವಳ ಮದುವೆ ನಿಶ್ಚಯವಾದ ಸಂದರ್ಭದಲ್ಲಿ ಗಂಡಿನ ಕಡೆಯವರು ಮನೆಗೆ ಬಂದಿದ್ದರು. ಆದರೇನು ಮಾಡಲಿ, ಅಷ್ಟರಲ್ಲೇ ಕರೆ ಬಂದಿತ್ತು. ವೃತ್ತಿಗೆ ನಿಷ್ಠೆಯಿಂದ ಇರಬೇಕಲ್ಲವೇ. ಹಾಗಾಗಿ ಹೊರಟು ಬಿಟ್ಟೆ. ಪುಣ್ಯವಶಾತ್‌ ನನ್ನ ಮಕ್ಕಳೂ, ಮಗಳ ಪತಿಯ ಕಡೆಯವರೂ ನನ್ನ ವೃತ್ತಿಯ ಸ್ವರೂಪವನ್ನು ಅರ್ಥಮಾಡಿಕೊಂಡಿದ್ದಾರೆ.

ಇಷ್ಟೆಲ್ಲ ಹೋರಾಡುವಾಗ ನನ್ನ ಜೊತೆಗೆ ಹೆಗಲಿಗೆ ಹೆಗಲು ಕೊಟ್ಟು ನಿಂತವರು ಅಮ್ಮ ದೇವಮ್ಮ. ಪುಟ್ಟ ಮಕ್ಕಳನ್ನು ಬಿಟ್ಟು ಎಲ್ಲೆಂದರಲ್ಲಿ ಆ್ಯಂಬುಲೆನ್ಸ್‌ ಕೊಂಡೊಯ್ಯುವಾಗ, ಅಮ್ಮ ಹೇಳುತ್ತಿದ್ದರು: “ಇಲ್ಲಿ ನಾನೆಲ್ಲ ನೋಡಿಕೊಳ್ಳುತ್ತೇನೆ. ನೀನು ನಿನ್ನ ಕೆಲಸ ಮುಗಿಸಿ ಬಾ.’ ಅವರ ಈ ಮಾತೇ ನನಗೆ ದುಡಿಯುವ ಶಕ್ತಿಯನ್ನು ಕೊಡುತ್ತಿತ್ತು. ಅವರು ಇತ್ತೀಚೆಗಷ್ಟೇ ತೀರಿಕೊಂಡರು.

ಪ್ರತೀ ವರ್ಷ ಆಯುಧಪೂಜೆಯೇ ನಮ್ಮ ದೊಡ್ಡ ಹಬ್ಬ. ಎಲ್ಲ ಆ್ಯಂಬುಲೆನ್ಸ್‌ ಚಾಲಕರ ಮನೆಯವರು, ನಾವು ಸೇರಿ ಪೂಜೆ ಮಾಡಿ, ಸಂಭ್ರಮಿಸುತ್ತೇವೆ. ಆ್ಯಂಬುಲೆನ್ಸ್‌ ಚಾಲಕರಿಗೆ ಇಡೀ ವರ್ಷದಲ್ಲಿ ಅವತ್ತೂಂದೇ ದಿವಸ ರಜೆ.

ದೇವರು ತೋರಿದ ದಾರಿಯಲ್ಲಿ ಬದುಕು ಸಾಗಿಸುತ್ತ ಇಲ್ಲಿಯವರೆಗೆ ಬಂದಿದ್ದೇನೆ. ಏರಿಳಿತಗಳ ನಡುವೆ ಬದುಕು ಹಲವು ಖುಷಿಗಳನ್ನು ಕಿತ್ತುಕೊಂಡಿದೆ. ಮತ್ತೆ ಹಲವು ಖುಷಿಗಳನ್ನು ಕೊಟ್ಟಿದೆ.

ರಾಧಿಕಾ ಸಿ.ಎಸ್‌.
ಚಿತ್ರ: ಲಕ್ಷ್ಮೀನಾರಾಯಣ್‌

Advertisement

Udayavani is now on Telegram. Click here to join our channel and stay updated with the latest news.

Next