Advertisement

ರಾಜ್ಯದಲ್ಲಿ ಇಂದಿನಿಂದ 12-14 ವರ್ಷದ 24.52 ಲಕ್ಷ ಮಕ್ಕಳಿಗೆ ಲಸಿಕೆ

12:37 AM Mar 16, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ 12ರಿಂದ 14ವರ್ಷದೊಳಗಿನ 24.52 ಲಕ್ಷ ಮಕ್ಕಳಿಗೆ ಕೋರ್ಬಿವ್ಯಾಕ್ಸ್‌ ಲಸಿಕೆ ಹಾಗೂ 60ವರ್ಷ ಮೇಲ್ಪಟ್ಟ 76ಲಕ್ಷ ಹಿರಿಯ ನಾಗರಿಕರಿಗೆ ಮುನ್ನೆಚ್ಚರಿಕೆ ಡೋಸ್‌ ವಿತರಣೆಗೆ ಆರೋಗ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.

Advertisement

12ರಿಂದ 14ವರ್ಷದೊಳಗಿನ ಮಕ್ಕಳಿಗೆ ಪ್ರಾರಂಭಿಕ ಹಂತವಾಗಿ ಲಸಿಕಾಕರಣ ರಾಜ್ಯದ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಮಾಡಲಾಗುತ್ತದೆ. ತುರ್ತು ಲಸಿಕಾಕರಣ ಘೋಷಿಸಿದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಸ್ಥಿರಗೊಂಡ ಬಳಿಕವಷ್ಟೇ ಶಾಲೆಗಳಲ್ಲಿ ಲಸಿಕೆ ಹಾಕಿಸಲು ಅಗತ್ಯವಿರುವ ಸೌಲಭ್ಯ ಹಾಗೂ ಸಿಬಂದಿಗಳನ್ನು ಆರೋಗ್ಯ ಇಲಾಖೆ ನೀಡಲಿದೆ. ಲಸಿಕಾಕರಣವನ್ನು ಆನ್‌ಲೈನ್‌ ಹಾಗೂ ಆನ್‌ಸೈಟ್‌ ನೊಂದಣಿಗೆ ಅವಕಾಶ ಕಲ್ಪಿಸಲಾಗಿದೆ.

ಅರ್ಹತೆಗಳೇನು?
ಕೇಂದ್ರದ ಮಾರ್ಗಸೂಚಿ ಅನ್ವಯ 2010 ಮಾ.15ರ ಮುನ್ನ ಜನಿಸಿದ ಮಕ್ಕಳು ಲಸಿಕೆ ಪಡೆಯುವ ಅರ್ಹತೆ ಹೊಂದಿದ್ದಾರೆ. ಕೋರ್ಬಿವ್ಯಾಕ್ಸ್‌ ಮೊದಲ ಡೋಸ್‌ ಲಸಿಕೆ ಪಡೆದ 28 ದಿನಗಳ ಬಳಿಕ ಎರಡನೇ ಲಸಿಕೆ ನೀಡಲಾಗುತ್ತದೆ. ಇನ್ನು 60ವರ್ಷ ಮೇಲ್ಪಟ್ಟವರಲ್ಲಿ 2ನೇ ಡೋಸ್‌ ಪಡೆದು 9 ತಿಂಗಳು ಪೂರ್ಣಗೊಂಡರು ಮುನ್ನೆಚ್ಚರಿಕೆ ಲಸಿಕೆ ಪಡೆಯುವ ಅರ್ಹತೆಯನ್ನು ಹೊಂದಿದ್ದಾರೆ.

ಮಕ್ಕಳ ವೈದ್ಯರ ಸಹಕಾರ
ಆರೋಗ್ಯ ಲಸಿಕಾಕರಣ ಕುರಿತು ಮಕ್ಕಳಿರುವ ಆತಂಕ ಹೋಗಲಾಡಿಸಲು ಭಾರತೀಯ ಮಕ್ಕಳ ತಜ್ಞರ ಸಂಘ ಮತ್ತು ಖಾಸಗಿ ಮಕ್ಕಳ ವೈದ್ಯರ ಸಹಕಾರ‌ ಪಡೆದುಕೊಂಡಿದೆ. ಆರೋಗ್ಯ ಇಲಾಖೆಯ ವಿಶೇಷ ತರಬೇತಿ ಪಡೆದುಕೊಂಡ ಸಿಬಂದಿಗಳು ತಂಡ ಭಾಗವಹಿಸಲಿದ್ದಾರೆ. ಇವರು ಮಕ್ಕಳ ಲಸಿಕಾಕರಣದಲ್ಲಿ ವೈದ್ಯಕೀಯ ಅರ್ಹತೆ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ. ಜತೆಗೆ ಲಸಿಕಾಕರಣದ ಸಮಯ ಯಾವುದೇ ಅಡ್ಡಪರಿಣಾಮಗಳ ನಿರ್ವಹಣೆಗಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಲಸಿಕಾಕರಣದ ದಿನ ಲಸಿಕೆ ಪಡೆಯಲು ಸಾಧ್ಯವಾಗದ ಮಕ್ಕಳಿಗೆ ಸಮೀಪದ ಆರೊಗ್ಯ ಕೇಂದ್ರದಲ್ಲಿ ಲಸಿಕೆ ವಿತರಿಸಲಾಗುತ್ತದೆ. ಆನ್‌ಲೈನ್‌ ತರಗತಿಯಲ್ಲಿರುವವರಿಗೆ ಶಾಲೆಗಳಲ್ಲಿ ನಿಗದಿ ಪಡಿಸಿದ ದಿನಾಂಕದಲ್ಲಿ ಮಕ್ಕಳು ಬಂದು ಲಸಿಕೆ ಪಡೆಯಲು ಅವಕಾಶ ಕಲ್ಪಿಸಲಾಗುತ್ತದೆ. ಕಾರ್ಮಿಕ ಇಲಾಖೆ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ , ಪಂಚಾಯಿತ್‌ ರಾಜ್‌ ಇಲಾಖೆಗಳು ಶಾಲೆಯಿಂದ ಹೊರಗುಳಿದ ಅಥವಾ ಶಾಲೆ ಬಿಟ್ಟ ಮಕ್ಕಳ ಲಸಿಕಾಕರಣಕ್ಕೆ ವಿಶೇಷ ಸಹಕಾರ ನೀಡಲಿದೆ. ಈ ಮಕ್ಕಳನ್ನು ಗುರುತಿಸಿ ಸಮೀಪದ ಆರೋಗ್ಯ ಇಲಾಖೆ ಹತ್ತಿರದ ಸರ್ಕಾರಿ ಲಸಿಕಾಕರಣ ಕೇಂದ್ರದಲ್ಲಿ ಲಸಿಕೆ ನೀಡಲಾಗುತ್ತದೆ.

Advertisement

20 ಲಕ್ಷ ಕೋರ್ಬಿವ್ಯಾಕ್ಸ್‌ ಡೋಸ್‌
ರಾಜ್ಯದಲ್ಲಿ ಒಟ್ಟು 20 ಲಕ್ಷ ಕೋರ್ಬಿವ್ಯಾಕ್ಸ್‌ ಡೋಸ್‌ ಲಭ್ಯವಿದೆ. ರಾಜ್ಯದಲ್ಲಿ 12-14 ವರ್ಷದೊಳಗಿನ ಅತ್ಯಧಿಕ ವಿದ್ಯಾರ್ಥಿಗಳನ್ನು ಹೊಂದಿರುವ ಪಟ್ಟಿಯಲ್ಲಿ ಬಿಬಿಪಿಎಂಪಿ ಮೊದಲ ಸ್ಥಾನದಲ್ಲಿದ್ದು 3.40ಲಕ್ಷ ವಿದ್ಯಾರ್ಥಿಗಳನ್ನು ಹೊಂದಿದೆ.

ಬೆಳಗಾವಿ 1.95 ಲಕ್ಷ, ಬಳ್ಳಾರಿ 1.12ಲಕ್ಷ, ಕಲಬುರಗಿ 1.26 ಲಕ್ಷ, ಮೈಸೂರು 1.12 ಲಕ್ಷ, ವಿಜಯಪುರ 1.2ಲಕ್ಷ ಅರ್ಹ ವಿದ್ಯಾರ್ಥಿಗಳಿದ್ದಾರೆ. ಉಳಿದಂತೆ ದಾವಣಗೆರೆ, ಹಾಸನ, ಉಡುಪಿ, ಉ.ಕ., ಗದಗ, ಹಾವೇರಿ, ಮಂಡ್ಯ, ರಾಮನಗರ, ಶಿವಮೊಗ್ಗ, ತುಮಕೂರು, ಯಾದಗಿರಿ, ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ಬೀದರ್‌, ಚಾಮರಾಜ ನಗರ, ದಕ್ಷಿಣ ಕನ್ನಡ, ಧಾರವಾಡ ಜಿಲ್ಲೆಯಲ್ಲಿ 30,000ದಿಂದ 92,000 ಫ‌ಲಾನುಭವಿಗಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next