19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.
1901 ಶಾಲೆ ಸ್ಥಾಪನೆ
ಯಕ್ಷಗಾನ ಪ್ರಸಂಗಗಳೇ ಪಠ್ಯ
ಕೋಟ: ಊರಿನ ಪ್ರತಿಷ್ಠಿತ ವ್ಯಾಪಾರಿಗಳು, ಶ್ರೀಮಂತವರ್ಗದವರ ಕೆಲಸಗಾರರಿಗೆ ಲೆಕ್ಕಾಚಾರದ ತರಬೇತಿ ನೀಡಲೋಸುಗ ಶೇಟ್‌ಮನೆಯ ಹುಲ್ಲಿನ ಕೋಣೆಯೊಂದರಲ್ಲಿ ಆರಂಭಗೊಂಡ ಗುರುಮನೆ ಈಗ ಹಂಗಾರಕಟ್ಟೆ ಧೂಳಂಗಡಿ ಸ.ಹಿ.ಪ್ರಾ.ಶಾಲೆಯಾಗಿ ಬೆಳೆದು ನಿಂತಿದೆ. ಗುರುಮನೆ ಯಾವಾಗ ಆರಂಭವಾಯಿತು ಎನ್ನುವ ಸ್ಪಷ್ಟ ದಾಖಲೆ ಇಲ್ಲ. ಆದರೆ 1901-02ರಲ್ಲಿ 1ರಿಂದ 4ನೇ ತರಗತಿ ತನಕದ ಬೋರ್ಡ್‌ಶಾಲೆಯಾಗಿ ಬದಲಾಗಿತ್ತು ಮತ್ತು 1930ರ ಆಸುಪಾಸಿನಲ್ಲಿ 4ರಿಂದ 8ನೇ ತರಗತಿಗೆ ಮೇಲ್ದರ್ಜೆಗೇರಿತ್ತು. ಅನಂತರ ಸಮೀಪದಲ್ಲೇ ಚೇತನಾ ಪ್ರೌಢಶಾಲೆ ಆರಂಭಗೊಂಡ ಮೇಲೆ 7 ತರಗತಿಗೆ ಸೀಮಿತಗೊಳಿಸಲಾಯಿತು.ದಂಡೆಬೆಟ್ಟು ಶೇಷ ಹೆಬ್ಟಾರರು ಗುರುಮನೆಯ ಶಿಕ್ಷಕರಾಗಿದ್ದರು. ಅನಂತರ ರಂಗ ಮಾಸ್ತರ್, ಮಧ್ವರಾಯರು, ದಿ| ಎ.ಎನ್.ಹೆಬ್ಟಾರ್, ವಾಮನ ಮಾಸ್ತರ್, ಹಾವಂಜೆ ಸುಬ್ಬಣ್ಣ ಶೆಟ್ಟಿ, ರಾಮಣ್ಣ ಶೆಟ್ಟಿ, ಪಾಂಡೇಶ್ವರ ಮಂಜುನಾಥ ಹೊಳ್ಳ, ವೆಂಕಪ್ಪ ಮೊಗವೀರ, ಚಂದ್ರಶೇಖರ್ ಹೇಳೆì, ದಿ| ಜೋನಿವಾಸ್, ದಿ| ಆಣ್ಣಪ್ಪ ಚಡಗ ಅವರು ಮುಖ್ಯ ಶಿಕ್ಷಕರು, ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಇಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ ದಿ| ಐರೋಡಿ ಸದಾನಂದ ಹೆಬ್ಟಾರರು ರಾಷ್ಟ್ರಪ್ರಶಸ್ತಿಗೆ ಭಾಜನರಾಗಿದ್ದರು.
ಆರೇಳು ದಶಕದ ಹಿಂದೆ ಅಕ್ಷರದ ಜತೆ ದಾಸೋಹ
ಇದೀಗ ಇಲ್ಲಿ 5ಶಿಕ್ಷಕರು, 2ಗೌರವ ಶಿಕ್ಷಕರು ಮತ್ತು 84ವಿದ್ಯಾರ್ಥಿಗಳಿದ್ದಾರೆ. ಕಂಪ್ಯೂಟರ್ ಕ್ಲಾಸ್, ವ್ಯಕ್ತಿತ್ವ ವಿಕಸನ ತರಬೇತಿ ನೀಡಲಾಗುತ್ತದೆ. ಮಾಬುಕಳ ಗಣೇಶೋತ್ಸವ ಸಮಿತಿ ವತಿಯಿಂದ ಶಾಲೆಗೆ ಸಭಾಂಗಣವನ್ನು ಕೊಡುಗೆಯಾಗಿ ನೀಡಲಾಗಿದೆ.
ಆರೇಳು ದಶಕದ ಹಿಂದೆ ಶಾಲೆಯ ಅಕ್ಕ-ಪಕ್ಕದಲ್ಲಿನ ಮಕ್ಕಳು ಅಪರಾಹ್ನ ಮನೆಯಲ್ಲಿ ಊಟ ಮಾಡಿ ಬಂದರೆ, ದೂರದ ಮಕ್ಕಳು ಊಟ ಮಾಡದೆ ಹಸಿವೆಯಲ್ಲೇ ತರಗತಿಯಲ್ಲಿ ಕುಳಿತುಕೊಳ್ಳುತ್ತಿದ್ದರು. ಇದನ್ನು ನೋಡಿ ಮರಗಿದ ಅಂದಿನ ಮುಖ್ಯಶಿಕ್ಷಕ ದಿ|ಸುಂದರರಾಯರು ಊರಿನವರಿಂದ ಅಕ್ಕಿ ಸಂಗ್ರಹಿಸಿ ಅನ್ನತಯಾರಿಸಿ, ಮನೆಯಿಂದ ತೆಂಗಿನಕಾಯಿ ಚಟ್ನಿ ಮಾಡಿ ತಂದು ಇಂದಿನ ಅಕ್ಷರದಾಸೋಹ ಮಾದರಿಯಲ್ಲೇ ಪ್ರತಿದಿನ ಊಟ ಬಡಿಸುತ್ತಿದ್ದರು.
ಮಾಜಿ ಶಾಸಕರು, ವಿಜ್ಞಾನಿಗಳು ಹಳೆ ವಿದ್ಯಾರ್ಥಿ
ಮಾಜಿ ಶಾಸಕ ದಿ| ಆನಂದ ಕುಂದ್ ಹೆಗ್ಡೆ, ಪ್ರಸಿದ್ಧ ವಿಜ್ಞಾನಿ ದಿ| ಎಚ್.ವಿ. ಉಡುಪ, ದಿ| ಜಿ.ಭಾಸ್ಕರ ಮಯ್ಯ, ಸಾಹಿತಿ ದಿ| ವೆಂಕಟಕೃಷ್ಣರಾಯ, ಮುಖ್ಯ ನ್ಯಾಯಾಧೀಶ ದಿ| ಕೆ.ಚಂದ್ರಶೇಖರ್ ಹೆಗ್ಡೆ, ಶ್ರೀರಾಮಕೃಷ್ಣ ಮಿಶನ್‌ನ ಸ್ವಾಮಿ ಜಗತ್ಮಾನಂದ, ಬಿ.ಲಕ್ಷ್ಮೀನಾರಾಯಣ ಕೆದ್ಲಾಯ, ಖ್ಯಾತ ಮನೋವೈದ್ಯ ಸೀತಾರಾಮ್ ಕಾರಂತ, ರಾಜ್ಯ ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಎ.ರಾಜಶೇಖರ್ ಹೆಬ್ಟಾರ್, ಮುಂತಾದ ಖ್ಯಾತನಾಮರು ಹಳೆ ವಿದ್ಯಾರ್ಥಿಗಳಾಗಿದ್ದಾರೆ.
ಹೇಗಿತ್ತು ಅಂದಿನ ಶಾಲಾ ಚಟುವಟಿಕೆ ?
ಬ್ರಿಟೀಷ್ ಮಹಾರಾಜನನ್ನು ಹೊಗಳುವ “ಗ್ವಾಡ್ ಸೇವ್ ದಿ ಕಿಂಗ್’ ಎನ್ನುವ ಪ್ರಾರ್ಥನೆ ಮೂಲಕ ಬೆಳಗ್ಗೆಯ ತರಗತಿ ಆರಂಭವಾಗುತಿತ್ತು. ಮಕ್ಕಳು ಪಾಣಿಪಂಚೆಯನ್ನುಟ್ಟು ನೆಲದ ಮೇಲೆ ಕುಳಿತುಕೊಂಡು, ಮರಳಿನ ಮೇಲೆ ಅಭ್ಯಾಸ ನಡೆಸುತ್ತಿದ್ದರು. ಯಕ್ಷಗಾನಕ್ಕೆ ಸಂಬಂಧಿಸಿದ ರಾಮಾಯಾಣ, ಮಹಾಭಾರತದ ಪ್ರಸಂಗ, ಸಾಮಾನ್ಯ ಲೆಕ್ಕ ಹಾಗೂ ಓಲೆಗರಿ ಓದುವುದಕ್ಕೆ ಹೇಳಿಕೊಡಲಾಗುತಿತ್ತು.ತಿಂಗಳಿಗೆ ಒಂದಾನೆ, ಎರಡಾನೆಯನ್ನು ಒಟ್ಟುಮಾಡಿ ಶಿಕ್ಷಕರಿಗೆ ಸಂಭಾವನೆ ನೀಡುತ್ತಿದ್ದರು. ಕೆಲವು ಶಿಕ್ಷಕರು ಮಾಬುಕಳ, ಕಲ್ಯಾಣಪುರ ಹೊಳೆಯನ್ನು ದೋಣಿಯಲ್ಲಿ ದಾಟಿ ಬರುತ್ತಿದ್ದರು. ಅನಂತರ ಮಕ್ಕಳಿಗೆ ಮಗ್ಗದಲ್ಲಿ ನೋಲುವುದು, ನೇಯುವುದನ್ನು ಹೇಳಿಕೊಡಲಾಗುತಿತ್ತು. ಯಕ್ಷಗಾನ, ಸಂಗೀತ, ನೃತ್ಯ, ನಾಟಕ ತರಬೇತಿ ನೀಡಲಾಗುತಿತ್ತು ಎಂದು ಶಾಲೆಯ ಶತಮಾನೋತ್ಸವ ಸ್ಮರಣ ಸಂಚಿಕೆಯಲ್ಲಿ ಉಲ್ಲೇಖೀಸಲಾಗಿದೆ.
- ರಾಜೇಶ್ ಗಾಣಿಗ ಅಚ್ಲಾಡಿ