ಕೋಲಾರ ; ಕಳೆದ ಹತ್ತು ದಿನಗಳಿಂದಲೂ ನಿತ್ಯವೂ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಲೇ ಇದ್ದು, ಶನಿವಾರ 118 ದಾಖಲೆ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಪತ್ತೆಯಾಗಿವೆ. ಕಳೆದ ಹತ್ತು ದಿನಗಳ ಹಿಂದೆ ಕೇವಲ ಒಂದಂಕಿಯ ಸೋಂಕು ಪ್ರಕರಣಗಳು ಪತ್ತೆಯಾಗುತ್ತಿದ್ದು, ಹತ್ತು ದಿನಗಳಿಂದಲೂ ಸರಾಸರಿ 50 ಪ್ರಕರಣಗಳು ಪತ್ತೆಯಾಗುತ್ತಿದ್ದವು. ಶನಿವಾರ ದಿಢೀರ್ ಎಂದು 118 ಪ್ರಕರಣಗಳು ಪತ್ತೆಯಾಗುವ ಮೂಲಕ ಜಿಲ್ಲೆಯ ಜನರಿಗೆ ಆತಂಕ ಹೆಚ್ಚಿಸಿದೆ.
ಶನಿವಾರ ಒಂದೇ ದಿನ ಕೋಲಾರ ತಾಲೂಕಿನಲ್ಲಿ 53, ಮಾಲೂರಿನಲ್ಲಿ 15, ಬಂಗಾರಪೇಟೆಯಲ್ಲಿ 11, ಕೆಜಿಎಫ್-ನಲ್ಲಿ 17, ಮುಳಬಾಗಿಲಿನಲ್ಲಿ 6 ಮತ್ತು ಶ್ರೀನಿವಾಸಪುರದಲ್ಲಿ 16 ಪ್ರಕರಣಗಳು ದೃಢಪಟ್ಟಿವೆ. ಇದೇ ಅವದಿಯಲ್ಲಿ ಕೋಲಾರ ತಾಲೂಕಿನಿಂದ 24, ಮಾಲೂರಿನಿಂದ 0, ಬಂಗಾರಪೇಟೆಯಿಂದ 12, ಕೆಜಿಎಫ್ ನಿಂದ 7, ಮುಳಬಾಗಿಲಿನಿಂದ 6 ಮಂದಿ ಸೇರಿದಂತೆ ಒಟ್ಟು 49 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗದ್ದಾರೆ.
ಹತ್ತು ದಿನಗಳ ಹಿಂದೆ ಕೇವಲ ಒಂದಂಕಿ ಇದ್ದ ಸಕ್ರಿಯ ಪ್ರಕರಣಗಳು ಇದೀಗ ಹತ್ತೇ ದಿನಗಳಲ್ಲಿ 352 ಸಂಖ್ಯೆಯನ್ನು ತಲುಪಿಬಿಟ್ಟಿದೆ. ಕೊರೊನಾ ಸೋಂಕಿನಿಂದ ಸಾವನ್ನಪ್ಪಿದರ ಸಂಖ್ಯೆ 186ಕ್ಕೇರುವಂತಾಗಿದೆ.
ಇನ್ನು ಶಂಕಿತ 2299 ಮಂದಿಯ ಗಂಟಲು, ಮೂಗಿನ ದ್ರವವನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಕೋಲಾರ ಜಿಲ್ಲೆಯಲ್ಲಿ ಪ್ರಸ್ತುತ ಸೋಂಕಿತರ ಪ್ರಥಮ ಸಂಪರ್ಕಿತ 1825 ಮಂದಿ ಮತ್ತು ದ್ವಿತೀಯ ಸಂಪರ್ಕಿತ 872 ಮಂದಿ ಸೇರಿದಂತೆ ಒಟ್ಟು 2747 ಮಂದಿಯ ಮೇಲೆ ನಿಗಾ ಇಡಲಾಗಿದೆ. ಈವರೆವಿಗೂ 4.26 ಲಕ್ಷ ಮಂದಿಯನ್ನು ತಪಾಸಣೆಗೊಳಪಡಿಸಿದ್ದು, 4.15 ಲಕ್ಷ ಮಂದಿ ವರದಿ ನೆಗೆಟಿವ್ ಬಂದಿದೆ. ಉಳಿದಂತೆ ಪಾಸಿಟಿವ್ ಬಂದವರಿಗೆ ಚಿಕಿತ್ಸೆ ನೀಡಿ ಗುಣಪಡಿಸಲಾಗಿದೆ.
ಇದರಿಂದ ಮುಂದಿನ ದಿನಗಳು ಕೊರೊನಾ ಸೋಂಕಿತರ ಪ್ರಕರಣಗಳು ಮತ್ತಷ್ಟು ಹೆಚ್ಚಳವಾಗುವ ಲಕ್ಷಣಗಳು ಕಂಡು ಬರುತ್ತಿವೆ. ಇಷ್ಟಾದರೂ, ಕೋಲಾರ ಜಿಲ್ಲೆಯಲ್ಲಿ ಸಭೆ ಸಮಾರಂಭಗಳು ಧಾರ್ಮಿಕ ಕಾರ್ಯಕ್ರಮಗಳು, ಕೂಟಗಳು ಕೋವಿಡ್ ಮಾರ್ಗಸೂಚಿಯನ್ನು ಲೆಕ್ಕಿಸದೆ ನಡೆಯುತ್ತಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗುತ್ತಿದೆ.