19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.
ಹೆದ್ದಾರಿ ವಿಸ್ತರಣೆಯಿಂದ ಶಾಲೆ ತೆರವಾಗದಿರಲಿ
1903 ಶಾಲೆ ಆರಂಭ
ಪಡುಪಣಂಬೂರು: ಸ್ವಾತಂತ್ರ್ಯ ಪೂರ್ವದಲ್ಲಿ ಮೂಲ್ಕಿ ಸೀಮೆಯ ಅರಸರ ಆಳ್ವಿಕೆಯ ವೇಳೆ ಅರಮನೆಯ ಅಂಗಣದಲ್ಲಿ ಆರಂಭಗೊಂಡ ಶಾಲೆಯೊಂದು ತಾಲೂಕಿನ ಬೋರ್ಡ್ ಶಾಲೆಯಾಗಿ ಗುರುತಿಸಿಕೊಂಡಿತ್ತು.ಇದೀಗ ಶತಮಾನೋತ್ಸವವನ್ನು ದಾಟಿ ಜ್ಞಾನ ದಾಹವನ್ನು ನೀಗಿಸುತ್ತಿರುವ ವಿದ್ಯಾಲಯವಿದು. ಪಡುಪಣಂಬೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಇದೀಗ 116 ವರ್ಷ. ಸ್ಪಷ್ಟವಾದ ದಾಖಲೆ ಇಲ್ಲದಿದ್ದರೂ 1903ರಲ್ಲಿ ಈ ಶಾಲೆ ಆರಂಭಗೊಂಡಿದೆ ಎಂಬ ಮಾಹಿತಿ ಇದೆ.
1964ರಲ್ಲಿ ಪ್ರೌಢಶಾಲೆ 2003ರಲ್ಲಿ ಶತಮಾನೋತ್ಸವವನ್ನು ಆಚರಿಸಿದ ಈ ಶಾಲೆ ಆರಂಭವಾದ ಕಾಲದಲ್ಲಿ ಮಹಾಬಲ ಶೆಟ್ಟಿ ಬರ್ಕೆ ಮುಖ್ಯ ಶಿಕ್ಷಕರಾಗಿದ್ದರು ಎಂದು ಹಳೆ ವಿದ್ಯಾರ್ಥಿಗಳು ನೆನಪಿಸುತ್ತಾರೆ. ಸುತ್ತಮುತ್ತ ಸುಮಾರು 15 ಕಿ.ಮೀ. ವ್ಯಾಪ್ತಿಯಲ್ಲಿ ಶಾಲೆಯ ಅವಶ್ಯಕತೆಯನ್ನು ಗಮನಿಸಿ ಜೈನ ಮನೆತನದ ಅರಸರೇ ವಿಶೇಷ ಆಸಕ್ತಿ ವಹಿಸಿ ಅರಮನೆಯ ಆವರಣದಲ್ಲಿ ಆರಂಭಿಸಿದ್ದರು. ಅನಂತರ ಪ್ರತ್ಯೇಕವಾಗಿ ಹೆದ್ದಾರಿ ಬದಿಯಲ್ಲಿ ಅರಸರೇ ದಾನವಾಗಿ ನೀಡಿದ ಜಮೀನಿನಲ್ಲಿ ಅಧಿ ಕೃತವಾಗಿ ಶಾಲೆ ಆರಂಭಗೊಂಡಿತ್ತು. ಸರಕಾರದಿಂದ 26 ಮಂದಿ ಶಿಕ್ಷಕರು ನಿಯಕ್ತಿಗೊಂಡು ಅಂದಿನ ನಿಯಮದಂತೆ 1ರಿಂದ 7ನೇ ತರಗತಿಯವರೆಗೆ ನಾಲ್ಕು ವಿಭಾಗದಲ್ಲಿ ಒಟ್ಟು ಸುಮಾರು 1,200 ಮಕ್ಕಳು ಏಕ ಕಾಲದಲ್ಲಿ ವಿದ್ಯಾಭ್ಯಾಸ ನಡೆಸಿದ್ದಾರೆ ಎಂಬ ದಾಖಲೆ ಇದೆ. ಸುಮಾರು 15 ಕಿ.ಮೀ.ಸುತ್ತಮುತ್ತಲಿನ ವ್ಯಾಪ್ತಿಯ ಕೆಮ್ರಾಲ್, ಹಳೆಯಂಗಡಿ, ಕಾರ್ನಾಡು, ಪುನರೂರುನಿಂದಲೂ ವಿದ್ಯಾರ್ಥಿಗಳು ಶಿಕ್ಷಣ ಪಡೆದಿದ್ದಾರೆ.
ಈ ಶಾಲೆಯ ಮಹತ್ವವೆಂದರೇ ಮೂಲ್ಕಿ ಸೀಮೆಯ ಅರಸು ಮನೆತನದ ಎಲ್ಲ ಪೀಳಿಗೆಯವರು ಇಲ್ಲಿನ ವಿದ್ಯಾರ್ಥಿಗಳಾಗಿದ್ದಾರೆ. ಮುಂಬಯಿಯ ಬಂಟರ ಸಂಘದ ಅಧ್ಯಕ್ಷ ಎಂ. ಭುಜಂಗ ಶೆಟ್ಟಿ, ಕಾರ್ನಾಡಿನ ಸಾಮಾಜಿಕ ಕ್ಷೇತ್ರದ ಹರಿಕಾರ ಎಂ.ಆರ್.ಎಚ್. ಪೂಂಜ, ಶಿವಮೊಗ್ಗದ ಹೊಂಬುಜ ಜೈನ ಮಠದ ಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ, ಮುಂಬಯಿಯ ಪ್ರಸಿದ್ಧ ಉದ್ಯಮಿಗಳಾದ ಪಾದೆಮನೆ ಜಯಂತ ರೈ, ಸಹಿತ ಇಲ್ಲಿ ಶಿಕ್ಷಣ ಪಡೆದ ಅನೇಕ ವಿದ್ಯಾರ್ಥಿಗಳು ದೇಶ, ವಿದೇಶದಲ್ಲಿ ನೆಲೆಸಿದಾರೆ. ಹಾಗೂ ಹಲವು ಮಂದಿ ಸಾಧಕರಾಗಿ ಗುರುತಿಸಿಕೊಂಡಿದ್ದಾರೆ.
ಮೂಲ್ಕಿ ಮೂಡುಬಿದಿರೆ ಕ್ಷೇತ್ರದ ಮಾಜಿ ಶಾಸಕ ಕೆ.ಸೋಮಪ್ಪ ಸುವರ್ಣ ಅವರು ಇಲ್ಲಿನ ವಿದ್ಯಾರ್ಥಿಯಾಗಿ ಅನಂತರ ಇದೇ ಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿ ದುಡಿದಿದ್ದಾರೆ. ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ನಿವೃತ್ತಿ ಪಡೆದಿರುವ ರತಿ ಎಕ್ಕಾರು ಅವರಿಗೆ ಜನ ಮೆಚ್ಚಿದ ಶಿಕ್ಷಕಿ ಪ್ರಶಸ್ತಿಯ ಗೌರವ ಪಡೆದುಕೊಂಡಿದ್ದಾರೆ.
ಮಕ್ಕಳಿಗೆ ಪರಿಸರ ಜಾಗೃತಿ
ಶಾಲೆಯಲ್ಲಿ ಹಳೆ ವಿದ್ಯಾರ್ಥಿ ಸಂಘವಿದೆ. ಶಾಲೆಯಲ್ಲಿನ ಕೈತೋಟ, ಸ್ವತ್ಛತೆ, ಮಕ್ಕಳಿಗೆ ಆಂಗ್ಲ ಭಾಷೆಯ ಅರಿವು, ಅನ್ನ ದಾಸೋಹ, ಕ್ಷೀರ ಭಾಗ್ಯ ಉತ್ತಮವಾಗಿ ನಡೆಯುತ್ತಿದೆ. ಹಳೆ ವಿದ್ಯಾರ್ಥಿ ಭುಜಂಗ ಶೆಟ್ಟಿ ಅವರು ಪ್ರತೀ ವರ್ಷವು ಮಕ್ಕಳಿಗೆ ಉಚಿತ ಪುಸ್ತಕಗಳ ಸಹಿತ ಶಿಕ್ಷಣಕ್ಕೆ ಸಂಬಂ ಧಿಸಿದ ವಸ್ತುಗಳಿಗೆ, ಗೌರವ ಶಿಕ್ಷಕರಿಗೆ ನೆರವವನ್ನು ನಿರಂತರವಾಗಿ ನೀಡುತ್ತಿದ್ದಾರೆ. ಇದೀಗ ಈ ಶಾಲೆಯು ಹೆದ್ದಾರಿ ವಿಸ್ತರಣೆಗೆ ತೆರವು ಮಾಡಲು ಸೂಚನೆ ಇರುವುದರಿಂದ ನೂತನ ಕಟ್ಟಡವನ್ನು ಕಟ್ಟುವ ಬಗ್ಗೆ ಚಿಂತನೆ ನಡೆದು ಸಮಿತಿಯು ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಾ ಶಾಲೆಯನ್ನು ಉಳಿಸಿಕೊಳ್ಳಲು ಸರ್ವ ಪ್ರಯತ್ನ ನಡೆಸುತ್ತಿದೆ.
ಅಂದು ಸ್ವಾತಂತ್ರ್ಯ ಚಳುವಳಿಗೆ ಪರೋಕ್ಷವಾಗಿ ಶಾಲಾ ಶಿಕ್ಷಣ ಇತ್ತು. ಅನಂತರ ಕಾಲಕ್ಕೆ ತಕ್ಕಂತೆ ಪರಿವರ್ತನೆ ಯಾಗಿದ್ದರಿಂದ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿರುವ ವಿದ್ಯಾರ್ಥಿಗಳನ್ನು ಕಾಣಬಹುದು. ಇದು ಈ ಶಾಲೆಯ ವೈಶಿಷ್ಟé. ಜೀವನ ಮೌಲ್ಯದ ಶಿಕ್ಷಣ ಪಡೆದುದರಿಂದ ನಮ್ಮಲ್ಲಿನ ಸಂಸ್ಕಾರ ಜಾಗೃತಿಗೊಂಡಿದೆ.
-ಎಂ. ದುಗ್ಗಣ್ಣ ಸಾವಂತರು,
(ಶಾಲಾ ಹಳೇ ವಿದ್ಯಾರ್ಥಿ) ಮೂಲ್ಕಿ ಸೀಮೆಯ ಅರಸರು.
ನೂರು ವರ್ಷ ದಾಟಿದರೂ ಸಹ ಸ್ಥಳೀಯರಿಗೆ ಶಾಲೆಯ ಬಗ್ಗೆ ಇರುವ ಗೌರವ ಕಡಿಮೆಯಾಗಿಲ್ಲ. ಶಾಲೆಯಲ್ಲಿ ಮಕ್ಕಳ ಸಂಖ್ಯೆ ಮುಖ್ಯವಲ್ಲ ಅವರಿಗೆ ನೀಡುವ ಶಿಕ್ಷಣಕ್ಕೆ ನಮ್ಮ ಪ್ರಾಮುಖ್ಯತೆ ಇದೆ. ಇದು ಸಹ ಶಾಲೆ ಉಳಿವಿಗೆ ಪರೋಕ್ಷ ಕಾರಣವಾಗಿದೆ.
ಸುಮತಾ, ಪ್ರಭಾರ ಮುಖ್ಯ ಶಿಕ್ಷಕಿ
- ನರೇಂದ್ರ ಕೆರೆಕಾಡು