ಬಂಟ್ವಾಳ: ಕರ್ನಾಟಕ ಅಲ್ಪಸಂಖ್ಯಾಕರ ಅಭಿವೃದ್ಧಿ ನಿಗಮದಿಂದ 2018-19ನೇ ಸಾಲಿಗೆ ಬಂಟ್ವಾಳ ವಿಧಾನ ಸಭಾ ಕ್ಷೇತ್ರಕ್ಕೆ ವಿವಿಧ ಯೋಜನೆಯಡಿ 192 ಫಲಾನುಭವಿಗಳಿಗೆ 114.60 ಲಕ್ಷ ರೂ. ಸಹಾಯಧನ ಬಿಡುಗಡೆಯಾಗಿದೆ ಎಂದು ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ತಿಳಿಸಿದರು.
ಅವರು ಶನಿವಾರ ತಮ್ಮ ಕಚೇರಿ ಸಭಾಂಗಣದಲ್ಲಿ ಶ್ರಮಶಕ್ತಿ ಯೋಜನೆಯಲ್ಲಿ ಬಿಡುಗಡೆಯಾದ 74 ಮಂದಿ ಫಲಾನುಭವಿಗಳಿಗೆ ಚೆಕ್ ವಿತರಿಸಿ ಮಾತನಾಡಿದರು.
ಶ್ರಮಶಕ್ತಿ ಯೋಜನೆಯಲ್ಲಿ 74 ಮಂದಿ ಫಲಾನುಭವಿಗಳಿಗೆ 19.50 ಲಕ್ಷ ರೂ., ಸ್ವಯಂ ಉದ್ಯೋಗದಡಿ 20 ಮಂದಿ ಫಲಾನುಭವಿಗಳಿಗೆ 24.50 ಲಕ್ಷ ರೂ., 66 ಮಂದಿ ಫಲಾನುಭವಿಗಳಿಗೆ 6.60 ಲಕ್ಷ ರೂ. ಕಿರುಸಾಲ ಹಾಗೂ ಗಂಗಾಕಲ್ಯಾಣದಡಿ 32 ಮಂದಿ ಫಲಾನುಭವಿಗಳಿಗೆ 64 ಲಕ್ಷ ರೂ.ಮಂಜೂರಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಕಮಾಲಾಕ್ಷಿ ಪೂಜಾರಿ ಉಪಸ್ಥಿತರಿದ್ದರು. ನಿಗಮದ ಜಿಲ್ಲಾ ವ್ಯವಸ್ಥಾಪಕ ನಿರ್ದೇಶಕ ಮಹಮ್ಮದ್ ಸಫ್ವಾನ್ ಸ್ವಾಗತಿಸಿ, ವಂದಿಸಿದರು.
ಸರಕಾರದ ಸವಲತ್ತು, ಯೋಜನೆಗಳ ಮಾಹಿತಿ
ಕ್ಷೇತ್ರದ ಜನತೆಯ ಯಾವುದೇ ಮಾಹಿತಿಗಾಗಿ ಶಾಸಕರ ಕಚೇರಿ ಸದಾ ತೆರೆದಿದ್ದು, ಸರಕಾರದ ಸವಲತ್ತು, ಯೋಜನೆಗಳ ಕುರಿತ ಅಗತ್ಯ ಮಾಹಿತಿ ನೀಡಲಾಗುತ್ತದೆ. ಕೇಂದ್ರ ಸರಕಾರವು ಈ ಬಾರಿ ಬಜೆಟ್‌ನಲ್ಲಿ ಮಹಿಳೆಯರಿಗೆ ಸಣ್ಣಪುಟ್ಟ ಉದ್ಯಮ ನಡೆಸುವುದಕ್ಕೆ 1 ಲಕ್ಷ ರೂ.ವರೆಗೆ ಮುದ್ರಾ ಯೋಜನೆ ಸಾಲ, ಜತೆಗೆ ಜನಧನ ಖಾತೆಗೆ 5 ಸಾವಿರ ರೂ. ಒಡಿ ನೀಡುವ ಸೌಲಭ್ಯ ಪ್ರಕಟಿಸಿದೆ ಎಂದು ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ತಿಳಿಸಿದರು.