ಬೆಂಗಳೂರು: ಮಹಾನಗರ ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ 11,133 ಪೌರಕಾರ್ಮಿಕರನ್ನು ಸರಕಾರಿ ನೌಕರರೆಂದು ಪರಿಗಣಿಸಲು ಸಚಿವ ಸಂಪುಟ ಒಪ್ಪಿದೆ.
ಇದರಿಂದಾಗಿ ಮಹಾನಗರ ಪಾಲಿಕೆಗಳ 1,927, ನಗರಸಭೆಯ 5,533, ಪುರಸಭೆಗಳ 3,673 ಪೌರ ಕಾರ್ಮಿಕರ ಸೇವೆ ಖಾಯಂಗೊಳ್ಳಲಿದೆ. ವಿಶೇಷ ನೇಮಕಾತಿ ನಿಯಮಗಳಡಿ ಸರಕಾರಿ ನೌಕರ ರೆಂದು ನೇಮಿಸಿಕೊಳ್ಳಲು ತೀರ್ಮಾನಿಸಲಾಗಿದೆ.
ಈ ನೌಕರರು ಈಗ 17,000-28,980 ರೂ. ವೇತನ ಶ್ರೇಣಿ ಅಡಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸ ಲಾಗಿದೆ. 11,133 ಪೌರ ಕಾರ್ಮಿಕರ ಕಾಯಂ ಆಗುತ್ತಿರುವುದು ಇದೇ ಮೊದಲು.
ಸಂಪುಟದಲ್ಲಿ ಮುಖ್ಯಮಂತ್ರಿ ವಿದ್ಯಾನಿಧಿ ಯೋಜನೆ ಮೀನುಗಾರರು ಹಾಗೂ ಕೃಷಿ ಕಾರ್ಮಿಕರ ಮಕ್ಕಳಿಗೂ 2022-23ನೇ ಸಾಲಿ ನಿಂದ ವಿಸ್ತರಣೆಯಾಗಲಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಬಿಪಿಎಲ್ ಕುಟುಂಬಗಳಿಗೆ 75 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವ ಸಂಬಂಧ ಆದೇಶ ಹೊರಡಿಸಲು ಸಂಪುಟ ಒಪ್ಪಿಗೆ ನೀಡಿದೆ. ಸಣ್ಣ ಮತ್ತು ಮಧ್ಯಮ ಕಾಫಿ ಬೆಳೆಗಾರರ 10 ಎಚ್‌ಪಿವರೆಗಿನ ನೀರಾವರಿ ವಿದ್ಯುತ್ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಶುಲ್ಕ ಮರುಪಾವತಿಸುವ ಬಗೆಗಿನ ಆದೇಶಕ್ಕೂ ಸಂಪುಟ ಒಪ್ಪಿಗೆ ನೀಡಿದೆ.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಹಾಗೂ ಎಸ್‌ಎಸ್‌ಎಲ್‌ಸಿ ಮಂಡಳಿ ವಿಲೀನಕ್ಕೂ ಸಂಪುಟ ಒಪ್ಪಿಗೆ ನೀಡಿದ್ದು, ಈ ಸಂಬಂಧ ಮಸೂದೆ ಮಂಗಳವಾರ ವಿಧಾನಸಭೆಯಲ್ಲಿ ಮಂಡನೆಯಾಗಲಿದೆ. ಶಿಕ್ಷಕರ ಪರಸ್ಪರ ವರ್ಗಾವಣೆ ಕುರಿತು ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ (ತಿದ್ದುಪಡಿ) ಮಸೂದೆ, ಬೆಂಗಳೂರು ಮೆಟ್ರೋಪಾಲಿಟನ್ ಭೂಸಾರಿಗೆ ಪ್ರಾಧಿಕಾರ ಮಸೂದೆ, ಕರ್ನಾಟಕ ಭೂ ಕಂದಾಯ ತಿದ್ದುಪಡಿ ಮಸೂದೆ ಮಂಡನೆಗೂ ಸಂಪುಟ ಅನುಮೋದನೆ ನೀಡಿದೆ.
ಕೇಸ್ ವಾಪಸ್
ಪ್ರತಿಭಟನೆ, ಧರಣಿ, ಚಳವಳಿ ಸೇರಿದಂತೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖ ಲಾದ 35 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆ ಯಲು ಸಂಪುಟ ತೀರ್ಮಾನಿಸಿದೆ. ಈ ಪೈಕಿ ಬಿಜೆಪಿ ನಾಯಕರ ಮೇಲಿನ ಪ್ರಕರಣಗಳೇ ಹೆಚ್ಚಾಗಿವೆ ಎಂದು ಹೇಳಲಾಗಿದೆ.