ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆಯಡಿ(ಆರ್‌ಟಿಇ) ಖಾಸಗಿ ಶಾಲೆಗಳಲ್ಲಿ ಮೀಸಲಿಟ್ಟಿರುವ ಶೇ.25ರಷ್ಟು ಸೀಟುಗಳಿಗೆ ಶುಕ್ರವಾರ ನಡೆದ ಆನ್‌ಲೈನ್ ಲಾಟರಿ ಪ್ರಕ್ರಿಯೆಯಲ್ಲಿ 1,11,548 ಮಕ್ಕಳು ಸೀಟು ಪಡೆದಿದ್ದಾರೆ. ಆನ್‌ಲೈನ್ ಲಾಟರಿ ಮೂಲಕ ಸೀಟು ಆಯ್ಕೆಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಚಾಲನೆ ನೀಡಿದರು.
2018-19ನೇ ಸಾಲಿಗೆ 14,107 ಖಾಸಗಿ ಶಾಲೆಗಳಿಂದ ಎಲ್‌ಕೆಜಿಗೆ 79,685 ಮತ್ತು 1ನೇ ತರಗತಿಗೆ 72,432 ಸೇರಿ ಒಟ್ಟು 1,52,117 ಸೀಟುಗಳು ಲಭ್ಯವಿದೆ.
ಈ ಸೀಟುಗಳಿಗಾಗಿ 2,33,242 ಅರ್ಜಿಗಳನ್ನು ಸ್ವೀಕರಿಸಲಾಗಿತ್ತು.ಅದರಲ್ಲಿ ಪೂರಕ ದಾಖಲೆ ಹಾಗೂ ತಪ್ಪು ಮಾಹಿತಿ ನೀಡಿದ್ದ 5,482 ಅರ್ಜಿಗಳು ರದ್ದಾಗಿದೆ. ಮೊದಲ ಹಂತದ ಆನ್‌ಲೈನ್ ಲಾಟರಿ ಪ್ರಕ್ರಿಯೆಯಲ್ಲಿ 1,11,548 ಮಕ್ಕಳು ಸೀಟು ಪಡೆದಿದ್ದಾರೆ. ಸೀಟು ಪಡೆದ ಎಲ್ಲ ಮಕ್ಕಳ ಪಾಲರಿಗೆ ಎಸ್ ಎಂಎಸ್ ಮೂಲಕ ಮಾಹಿತಿ ನೀಡಲಾಗುತ್ತದೆ. ನಿಗದಿತ ದಿನಾಂಕದೊಳಗೆ ಶಾಲೆಗೆ ಸೇರಿಸುವ ಬಗ್ಗೆಯೂ ಎಸ್ ಎಂಎಸ್‌ನಲ್ಲೇ ಉಲ್ಲೇಖೀಸಲಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಸಿ.ಜಾಫರ್ ತಿಳಿಸಿದರು.
ಆರ್‌ಟಿಇ ಅಡಿ ಬಂದಿರುವ ಅರ್ಜಿಗಳಲ್ಲಿ ವಿಶೇಷ ಪ್ರವರ್ಗಗಳ ವ್ಯಾಪ್ತಿಗೆ 1,095 ಅರ್ಜಿಗಳು ಬಂದಿದ್ದು, ಪರಿಶೀಲಿನೆ ನಂತರ 553 ಅರ್ಜಿಗಳು ಸೀಟು ಪಡೆಯಲು ಅರ್ಹವಾಗಿದೆ. ವಿಶೇಷ ಪ್ರಕರಣದ ವ್ಯಾಪ್ತಿಯಲ್ಲಿ ಬಾರದಿದ್ದರೂ ಅರ್ಜಿ ಸಲ್ಲಿಸಿದ 418 ಅರ್ಜಿಗಳನ್ನು ಇತರೆ ವಿಭಾಗಕ್ಕೆ ವರ್ಗಾಯಿಸಲಾಗಿದೆ. ಸೀಟು ಹಂಚಿಕೆಯ ಮಾಹಿತಿಯನ್ನು
chooleducation.kar.nic.in ನಲ್ಲಿ ಪಡೆಯಬಹುದು ಎಂದರು.
ಖಾಸಗಿ ಶಾಲೆಗೆ ಶುಲ್ಕ ನಿಗದಿ:2018-19ನೇ ಸಾಲಿಗೆ ಅನ್ವಯಿಸುವಂತೆ ಖಾಸಗಿ ಶಾಲೆಗಳ ಪ್ರವೇಶ ಶುಲ್ಕ ನಿಗದಿ ಮಾಡಿದ್ದು, ಶುಲ್ಕ ನಿಗದಿ ಕರಡು ಪ್ರತಿ ರೂಪಿಸಿ ಕಾನೂನು ಇಲಾಖೆಯ ಒಪ್ಪಿಗೆ ಪಡೆದಿದ್ದೇವೆ.
ಚುನಾವಣಾ ನೀತಿ ಸಂಹಿತೆ ಇರುವುದರಿಂದ ಆದೇಶ ಹೊರಡಿಸಲು ಸಾಧ್ಯವಾಗಿಲ್ಲ. 2018-19ನೇ ಶೈಕ್ಷಣಿಕ ವರ್ಷ ಆರಂಭವಾಗುವುದರೊಳಗೆ ಅನುಷ್ಠಾನಿಗೊಳಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಹೇಳಿದರು.
ಆರ್‌ಟಿಇ ಅಡಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ಮತ್ತು ಸಮವಸ್ತ್ರ ನೀಡುವುದು ಖಾಸಗಿ ಶಾಲಾ ಆಡಳಿತ ಮಂಡಳಿಯ ಜವಾಬ್ದಾರಿ. ಇದಕ್ಕಾಗಿ ಪಾಲಕರಿಂದ ಹೆಚ್ಚುವರಿ ಶುಲ್ಕ ಪಡೆಯುವಂತಿಲ್ಲ. ರಾಜ್ಯ ಪಠ್ಯಕ್ರಮ ಬೋಧಿಸುವ ಶಾಲೆಗಳಿಗೆ ರಾಜ್ಯ ಸರ್ಕಾರವೇ ಉಚಿತವಾಗಿ ಪಠ್ಯಪುಸ್ತಕ ನೀಡಲಿದೆ.
ಕೇಂದ್ರ ಪಠ್ಯಕ್ರಮ ಬೋಧಿಸುವ ಶಾಲೆಗಳಿಗೆ ಆಯಾ ಶಿಕ್ಷಣ ಸಂಸ್ಥೆಗಳೇ ಉಚಿತವಾಗಿ ಪಠ್ಯಪುಸ್ತಕ ಮತ್ತು ಸಮವಸ್ತ್ರ ನೀಡಬೇಕು ಎಂದು ಸೂಚಿಸಿದರು. ಈ ಸಂಬಂಧ ಶೀಘ್ರವೇ ಸುತ್ತೋಲೆ ಹೊರಡಿಸಲಾಗುತ್ತಿದ್ದು, ಎಲ್ಲಾ ಶಾಲೆಗಳು ಕಡ್ಡಾಯವಾಗಿ ಪಾಲಿಸಬೇಕು. ಇಲ್ಲವಾದಲ್ಲಿ ಜಿಲ್ಲಾಧಿಕಾರಿ ನೇತೃತ್ವದ ಡೇರಾ ಸಮಿತಿಗೆ ದೂರು ನೀಡುವ ಹಕ್ಕು ಪಾಲಕ-ಪೋಷಕರಿಗೆ ಇದೆ ಎಂದರು.