ಗದಗ: ಬೆಣ್ಣೆಹಳ್ಳ ಹಾಗೂ ಮಲಪ್ರಭಾ ನದಿಯಿಂದ ಉಂಟಾದ ಪ್ರವಾಹದಿಂದ ಜನರು ಬದುಕು ಕೊಚ್ಚಿಕೊಂಡು ಹೋಗಿದೆ. ಜೊತೆಗೆ ಅವರು ತಿನ್ನುವ ಅನ್ನವನ್ನೂ ಕಸಿದುಕೊಂಡಿದೆ. ಪ್ರವಾಹದ ಅಲೆಗಳ ಅಬ್ಬರಕ್ಕೆ 11 ಸಾವಿರ ಹೆಕ್ಟೇರ್ ಪ್ರದೇಶದಷ್ಟು ಬೆಳೆಗಳು ತೇಲಿ ಹೋಗಿವೆ. ಬೆಳೆಯೊಂದಿಗೆ ಅಲ್ಲಲ್ಲಿ ಜಮೀನುಗಳ ಮಣ್ಣು ಕೊರೆತಗೊಂಡಿದೆ. ಹೀಗಾಗಿ ಕೊರೆತಕ್ಕೊಳಗಾದ ಜಮೀನುಗಳನ್ನು ಸರಿಪಡಿಸಿಕೊಳ್ಳುವುದೇ ರೈತರ ಮುಂದಿರುವ ಸವಾಲು.
ಹೌದು, ಈ ಬಾರಿ ಜಿಲ್ಲೆಯಲ್ಲಿ ಮಲಪ್ರಭೆ ಮತ್ತು ಬೆಣ್ಣೆಹಳ್ಳ ಸೃಷ್ಟಿಸಿದ ಅನಾಹುತ ಅಷ್ಟಿಷ್ಟಲ್ಲ. ನರಗುಂದ ತಾಲೂಕಿನ 8 ಹಾಗೂ ರೋಣ ತಾಲೂಕಿನ 16 ಗ್ರಾಮಗಳ ಜನರ ಜೀವನವನ್ನೇ ಹಿಂಡಿದೆ. ಈ ಬಾರಿ ಮುಂಗಾರು ಮಳೆ ವಿಳಂಬವಾಗಿ ಚುರುಕುಗೊಂಡಿದ್ದರೂ, ಅಲ್ಪಸ್ವಲ್ಪ ಬೆಳೆ ಕೈಹಿಡಿಯುವ ನಿರೀಕ್ಷೆ ಇತ್ತು. ಆದರೆ, ನರಗುಂದ ಮತ್ತು ರೋಣ ತಾಲೂಕಿನಲ್ಲಿ ಹರಿಯುವ ಉಭಯ ಜಲಮೂಲಗಳು ಸೃಷ್ಟಿಸಿದ ನೆರೆ, ಜನರ ಹೊಟ್ಟೆ ತುಂಬಿಸುವ ಜಮೀನುಗಳನ್ನೂ ಹಾಳು ಮಾಡಿದೆ.
ಕೊಚ್ಚಿ ಹೋಯ್ತು ಅಕ್ಷಯ ಪಾತ್ರೆ: ಜಿಲ್ಲೆಯ ನರಗುಂದ ತಾಲೂಕಿನಲ್ಲಿ ಪ್ರವೇಶ ಪಡೆಯುವ ಮಲಪ್ರಭಾ ನದಿ, ರೋಣ ತಾಲೂಕಿನ ಮೆಣಸಗಿ, ಹೊಳೆಆಲೂರು ಮಾರ್ಗವಾಗಿ ಬಾಗಲಕೋಟೆ ಜಿಲ್ಲೆ ಬದಾಮಿ ತಾಲೂಕಿಗೆ ಸೇರ್ಪಡೆಯಾಗುತ್ತದೆ. ಈ ನಡುವೆ ಜಿಲ್ಲೆಯಲ್ಲಿ ಸುಮಾರು 50 ಕಿಮೀ ದೂರದಷ್ಟು ನದಿ ಕ್ರಮಿಸುತ್ತ ದೆ.
ಅದರಂತೆ ಧಾರವಾಡ ಜಿಲ್ಲೆಯಿಂದ ರೋಣ ತಾಲೂಕಿನ ಯಾವಗಲ್ ಬಳಿ ಜಿಲ್ಲೆಗೆ ಆಗಮಿಸುವ ಬೆಣ್ಣೆಹಳ್ಳ, ಯಾ.ಸ.ಹಡಗಲಿ, ಬೋಪಲಾಪುರ, ಮಾಳವಾಡ, ಮೆಣಸಗಿ, ಅಸೂಟಿ ಕರಮುಡಿ ಮಾರ್ಗವಾಗಿ ಹೊಳೆಆಲೂರು ಬಳಿ ಮಲಪ್ರಭೆಯಲ್ಲಿ ಸಂಗಮವಾಗುತ್ತದೆ. ಈ ನಡುವೆ ಸುಮಾರು 15 ರಿಂದ 20 ಕಿಮೀ ಜಿಲ್ಲೆಯಲ್ಲಿ ಹರಿಯುತ್ತದೆ. ಮಲಪ್ರಭೆ ಹಾಗೂ ಬೆಣ್ಣೆಹಳ್ಳ ಭೋರ್ಗರೆತದಿಂದ ಎರಡೂ ಬದಿಯಲ್ಲಿ ಬೆಳೆದಿದ್ದ ಅಪಾರ ಪ್ರಮಾಣದ ಬೆಳೆಹಾನಿಯಾಗಿದೆ. ಅದರೊಂದಿಗೆ ಹಳ್ಳ, ನದಿಯುದ್ದಕ್ಕೂ ಕಿನಾರೆಯಲ್ಲಿರುವ ಜಮೀನುಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿವೆ.
ಸರಕಾರ ಅಲ್ಪಸ್ವಲ್ಪ ಬೆಳೆ ಪರಿಹಾರ ನೀಡುತ್ತದೆ. ಜಮೀನುಗಳು ಸುಸ್ಥಿತಿಯಲ್ಲಿದ್ದರೆ, ಮುಂದಿನ ಹಂಗಾಮಿನಲ್ಲಿ ಬೆಳೆ ತೆಗೆಯಬಹುದು. ಆದರೆ, ಹಳ್ಳದುದ್ದಕ್ಕೂ ಹಲವೆಡೆ ನಾಲ್ಕೈದು ಅಡಿಗಳಷ್ಟು ಜಮೀನುಗಳು ಕೊರೆದಿದೆ. ಅದನ್ನು ತುಂಬಿಕೊಳ್ಳುವುದು ಎಂಬುದು ಬಡ ರೈತರ ಪಾಲಿಗೆ ಕಷ್ಟಸಾಧ್ಯ. ಕೊಚ್ಚಿ ಹೋಗಿರುವ ಜಮೀನುಗಳಲ್ಲಿ ಮತ್ತೆ ಮಣ್ಣು ತುಂಬಿಕೊಳ್ಳಲು ಲಕ್ಷಾಂತರ ರೂ. ವೆಚ್ಚವಾಗುತ್ತದೆ. ಅದಕ್ಕೆ ಸರಕಾರದಿಂದಲೂ ಯಾವುದೇ ನೆರವು ಕೂಡಾ ಸಿಗದು ಎಂಬುದು ರೈತರ ಗೋಳು.
10 ಸಾವಿರ ಹೆಕ್ಟೇರ್ ಬೆಳೆಹಾನಿ: ಇತ್ತೀಚೆಗೆ ಪ್ರವಾಹದಿಂದ ನರಗುಂದ ತಾಲೂಕಿನಲ್ಲಿ 3,400 ಹೆಕ್ಟೇರ್, ರೋಣ ತಾಲೂಕಿನ 7,400 ಹೆಕ್ಟೇರ್ ಹಾಗೂ ತುಂಗಭದ್ರ ನದಿಯಿಂದ ಶಿರಹಟ್ಟಿ ತಾಲೂಕಿನ 800 ಹೆಕ್ಟೇರ್ ಸೇರಿದಂತೆ ಒಟ್ಟು 10,809 ಹೆಕ್ಟೇರ್ ಪ್ರದೇಶದಷ್ಟು ಬೆಳೆಹಾನಿಯಾಗಿದೆ ಎಂಬುದು ಕೃಷಿ ಇಲಾಖೆ ಸಮೀಕ್ಷೆಯಿಂದ ಗೊತ್ತಾಗಿದೆ. ಈ ಪೈಕಿ ರೋಣ ಮತ್ತು ನರಗುಂದ ತಾಲೂಕಿನ ನೀರಾವರಿ ಬೆಳೆಗಳೇ ಹೆಚ್ಚು ಹಾನಿಗೊಳಗಾಗಿವೆ. ಕಬ್ಬು, ಹತ್ತಿ, ಹೆಸರು, ಮೆಕ್ಕೆಜೋಳ, ತೊಗರಿ, ಶೇಂಗಾ, ಸೂರ್ಯಕಾಂತಿ ಬೆಳೆಗಳು ಸಂಪೂರ್ಣ ಕೊಚ್ಚಿ ಹೋಗಿವೆ. ಅಳಿದುಳಿದ ಬೆಳೆಗಳೂ ಪ್ರವಾಹದ ನೀರಿನಿಂದ ಕೊಳೆಯುತ್ತಿವೆ.
•ವೀರೇಂದ್ರ ನಾಗಲದಿನ್ನಿ