ಬೇತಮಂಗಲ: ಸಸಿ ನೆಟ್ಟರೆ ಸಾಲದು, ಪೋಷಿಸಿ, ಮರಗಳಾಗಿ ಬೆಳೆಸಿದರೆ ಮಾತ್ರ ಪರಿಸರ ಬೆಳೆಸಿ ನಾಡನ್ನು ಉಳಿಸಿ ಎಂಬ ಧ್ಯೇಯೋದ್ದೇಶ ಈಡೇರಲು ಸಾಧ್ಯ ಎಂದು ಗ್ರಾಪಂ ಸದಸ್ಯ ಗೋಪಾಲರೆಡ್ಡಿ ಅಭಿಪ್ರಾಯಪಟ್ಟರು.
ಪಟ್ಟಣದ ಬಳಿಯ ಕಳ್ಳಾವಿ ಹೊಸಹಳ್ಳಿ ಕೆರೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿಗಳನ್ನು ನೆಟ್ಟು, ಟ್ಯಾಂಕರ್ ಮೂಲಕ ನೀರು ಹಾಕಿಸಿ ಮಾತನಾಡಿದ ಅವರು, ಸುಂದರಪಾಳ್ಯ ಗ್ರಾಪಂ ವ್ಯಾಪ್ತಿಯ ಗ್ರಾಮದ ಬಳಿಯ 60 ಎಕರೆ ವಿಸ್ತೀರ್ಣಹೊಂದಿರುವ ಕೆರೆಯಲ್ಲಿ 1100 ಸಸಿ ನೆಟ್ಟಿದ್ದು, ಈ ಸಸಿಗಳು ಮರಗಳಾಗಿ ಬೆಳೆಸಲು ಪಣತೊಟ್ಟಿರುವುದಾಗಿ ತಿಳಿಸಿದರು.
ಹೊಣೆಗಾರಿಕೆ ಇರಲಿ: ಜಿಪಂ ಅಧಿಕಾರಿಗಳ ಆದೇಶದ ಮೇರೆಗೆ ವಿಶ್ವ ಪರಿಸರ ದಿನಾಚರಣೆ, ಕೋಟಿ ನಾಟಿ, ಸ್ವಚ್ಛಮೇವ ಜಯತೆ ಆಂದೋಲನ ಕಾರ್ಯಕ್ರಮದಡಿ ಸರ್ಕಾರಿ ಶಾಲಾ ಆವರಣ, ಮುಖ್ಯರಸ್ತೆಯ ಬದಿ, ಆಸ್ಪತ್ರೆ ಆವರಣದಲ್ಲಿ ಸಸಿಗಳನ್ನು ನಾಟಿ ಮಾಡಲಾಗುತ್ತಿದೆ. ಇದು ಅ ದಿನಕ್ಕೆ ಸೀಮಿತವಾಗದೆ, ಭವಿಷ್ಯದ ದೃಷ್ಟಿಯಿಂದ ಪೋಷಣೆ ಮಾಡುವ ಹೊಣೆಗಾರಿಕೆ ಪ್ರದರ್ಶಿಸಬೇಕು ಎಂದು ಮನವಿ ಮಾಡಿದರು.
ಟ್ಯಾಂಕರ್ ನೀರು: ಅರಣ್ಯ ಇಲಾಖೆಯಿಂದ ಗ್ರಾಪಂ ಮೂಲಕ ಉಚಿತ ಸಸಿ ವಿತರಣೆ ಮಾಡಲಾಗಿದ್ದು, 60 ಎಕರೆಯಲ್ಲಿ ಹೊಂಗೆ, ಜಂಬು ನೇರಳೆ, ಬೇವಿನ ಸಸಿ, ಸೀತಾಫಲ, ಹಲವು ಸಸಿಗಳನ್ನು ನಾಟಿ ಮಾಡಿದ್ದು, ಇವುಗಳ ಬೆಳವಣಿಗೆ ಆಗುವವರೆಗೂ ಟ್ಯಾಂಕರ್ ಮೂಲಕ ನೀರು ಹರಿಸಿ ಪೋಷಣೆ ಮಾಡುತ್ತೇನೆ ಎಂದು ತಿಳಿಸಿದರು.
ಸರಿಯಾಗಿ ಮಳೆ ಸುರಿದರೆ ಸಸಿಗಳು ವಾರದೊಳಗೆ ಚೇತರಿಸಿಕೊಳ್ಳುತ್ತವೆ. 2 ದಿನಗಳಿಗೊಮ್ಮೆ ಟ್ಯಾಂಕರ್ ಮೂಲಕ ನೀರು ಹರಿಸಲಾಗುತ್ತಿದೆ. ಕುರಿ, ಮೇಕೆ ಇತರೆ ಪ್ರಾಣಿಗಳಿಂದ ಸಸಿಗಳನ್ನು ರಕ್ಷಿಸಲು ಮುಳ್ಳಿನ ಕೊಂಬೆಗಳನ್ನು ಸುತ್ತಲಾಗಿದೆ. ದಿನಕ್ಕೆ 4 ರಿಂದ 5 ಬಾರಿ ವೀಕ್ಷಣೆ ಮಾಡುತ್ತೇನೆ. 1100 ಸಸಿ ನಾಟಿ ಮಾಡಲು 5 ದಿನ ಸಮಯ ಬೇಕಾಯಿತು ಎಂದು ತಿಳಿಸಿದರು.
ಟ್ಯಾಂಕರ್ ನೀರಿಗೆ 250 ರಿಂದ 300 ರೂ. ತೆತ್ತು ಸಸಿಗೆ ಹರಿಸುತ್ತಿದ್ದು, 2 ತಿಂಗಳಲ್ಲಿ ಸಸಿಗಳು ಸಂಪೂರ್ಣವಾಗಿ ಅಂಟಿಕೊಂಡು ಚಿಗುರು ಬಿಡುತ್ತವೆ ಎಂದರು. ಈ ಸಂದರ್ಭದಲ್ಲಿ ಕೃಷ್ಣಾಪುರ ನಾರಾಯಣ ರೆಡ್ಡಿ, ಬೆಟ್ಕೂರು ಮುನಿಯಪ್ಪ, ಸುಬ್ರಮಣಿ, ಟ್ರ್ಯಾಕ್ಟರ್ ಚಾಲಕ ಅಂಬರೀಶ್ ಉಪಸ್ಥಿತರಿದ್ದು, ಗ್ರಾಪಂ ಸದಸ್ಯರಿಗೆ ಸಾಥ್ ನೀಡಿದ್ದಾರೆ. ಪಿಡಿಒ ಶ್ರೀನಿವಾಸರೆಡ್ಡಿ ಸಹಕಾರ ದಿಂದ ಹೆಚ್ಚು ಸಸಿಗಳನ್ನು ನೀಡಿದ್ದು, ಹೆಚ್ಚು ಸಸಿಗಳನ್ನು ನಾಟಿ ಮಾಡಲು ಸಹ ಕಾರವಾಯ್ತು. ಗ್ರಾಪಂನಲ್ಲಿ ಯಾರೂ ಇಷ್ಟೊಂದು ಸಸಿಗಳನ್ನು ಬೆಳೆಸಲು ಮುಂದಾಗಿಲ್ಲ ಎಂದು ಗ್ರಾಮಸ್ಥರು ತಿಳಿಸಿದರು.