Advertisement

ಪುತ್ತೂರಿನಿಂದ 1,100 ಮಂದಿ ಊರಿಗೆ

11:35 PM May 11, 2020 | Sriram |

ಪುತ್ತೂರು: ಪುತ್ತೂರು ಉಪವಿಭಾಗ ವ್ಯಾಪ್ತಿಯ ತಾಲೂಕುಗಳಲ್ಲಿರುವ 1,100 ಮಂದಿ ವಲಸೆ ಕಾರ್ಮಿಕರನ್ನು ಮೇ 12ರಂದು ವಿಶೇಷ ರೈಲಿನ ಮೂಲಕ ಪುತ್ತೂರು ರೈಲು ನಿಲ್ದಾಣದಿಂದ ಬಿಹಾರಕ್ಕೆ ಕಳುಹಿಸಿಕೊಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

Advertisement

ರವಿವಾರ ಸಂಜೆ ದ.ಕ. ಜಿಲ್ಲಾ ಡಿಶನಲ್‌ ಎಸ್ಪಿ ಡಾ| ವಿಕ್ರಂ ಆಮ್ಟೆ ಪುತ್ತೂರು ರೈಲ್ವೇ ನಿಲ್ದಾಣ ಪರಿಶೀಲಿಸಿದ ಬಳಿಕ ಡಿವೈಎಸ್ಪಿ ದಿನಕರ್‌ ಶೆಟ್ಟಿ, ಸಹಾಯಕ ಕಮಿಷನರ್‌ ಡಾ| ಯತೀಶ್‌ ಉಳ್ಳಾಲ್‌ ಜತೆ ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ವ್ಯವಸ್ಥೆಯ ಕುರಿತು ಚರ್ಚೆ ನಡೆಸಿದರು.

ಪುತ್ತೂರು ನಗರ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ತಿಮ್ಮಪ್ಪ ನಾಯ್ಕ, ಮಹಿಳಾ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಕುಸುಮಾಧರ್‌, ಸುಳ್ಯ, ಬೆಳ್ತಂಗಡಿ, ಬಂಟ್ವಾಳ ಠಾಣೆಗಳ ಇನ್‌ಸ್ಪೆಕ್ಟರ್‌ಗಳು ಪಾಲ್ಗೊಂಡಿದ್ದರು. ರೈಲು ನಿಲ್ದಾಣದಲ್ಲಿ ಜನಜಂಗುಳಿಯಾಗದಂತೆ, ಸೂಕ್ತ ಬಂದೋಬಸ್ತ್, ಟಿಕೆಟ್‌ ಪರಿಶೀಲನೆ, ಮೆಡಿಕಲ್‌ ಚೆಕ್‌ಅಪ್‌ಗೆ ವ್ಯವಸ್ಥೆ ಮಾಡಲಾಗಿದೆ.

ಗದ್ದೆಯಲ್ಲಿ ತಪಾಸಣೆ
ಪುತ್ತೂರು, ಸುಳ್ಯ, ಬೆಳ್ತಂಗಡಿ, ಕಡಬ ತಾಲೂಕುಗಳಿಂದ ಸುಮಾರು 1,100 ಮಂದಿ ಬಿಹಾರದ ವಲಸೆ ಕಾರ್ಮಿಕರನ್ನು ತವರಿಗೆ ಕಳುಹಿಸುವ ನಿಟ್ಟಿನಲ್ಲಿ ಆಯಾ ತಾಲೂಕುಗಳಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕರೆದುಕೊಂಡು ಬಂದು ಮಧ್ಯಾಹ್ನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿ, ಬಳಿಕ ರೈಲು ನಿಲ್ದಾಣಕ್ಕೆ ಕರೆದುಕೊಂಡು ಹೋಗಲಾಗುತ್ತದೆ. ಅಲ್ಲಿ ಅವರ ಆಧಾರ್‌ ಕಾರ್ಡ್‌ ಪರಿಶೀಲಿಸಿ ಊರಿಗೆ ಕಳುಹಿಸಲಾಗುತ್ತದೆ. ಪ್ರಯಾಣಿಕರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಕ್ವಾರಂಟೈನ್‌ ವ್ಯವಸ್ಥೆ
ಹೊರ ರಾಜ್ಯ ಮತ್ತು ವಿದೇಶದಿಂದ ಬರುವವರಿಗೆ ಪುತ್ತೂರಿನಲ್ಲಿ ಕ್ವಾರಂಟೈನ್‌ ಮಾಡಲು ನಗರ ವ್ಯಾಪ್ತಿಯಲ್ಲಿ 7 ಬಿಸಿಎಂ ಮತ್ತು 4 ಸಮಾಜ ಕಲ್ಯಾಣ ಹಾಸ್ಟೆಲ್‌ಗ‌ಳ ವ್ಯವಸ್ಥೆ ಮಾಡಲಾಗಿದೆ. 22 ಗ್ರಾ.ಪಂ. ವ್ಯಾಪ್ತಿಯಲ್ಲಿ ಗ್ರಾ.ಪಂ.ಗೆ ಒಂದರಂತೆ ಉತ್ತಮ ಮೂಲ ಸೌಕರ್ಯ ಇರುವ 22 ಶಾಲೆಗಳನ್ನು ಗುರುತಿಸಲಾಗಿದೆ. ಪುತ್ತೂರು ನಗರ ವ್ಯಾಪ್ತಿಯ ಹಾಸ್ಟೇಲ್‌ನಲ್ಲಿ 300 ಮಂದಿಯನ್ನು ಕ್ವಾರಂಟೈನ್‌ ಮಾಡಲು ಅವಕಾಶವಿದ್ದು, ಭರ್ತಿ ಆದ ಬಳಿಕ ಗ್ರಾಮ ಮಟ್ಟದಲ್ಲಿ ಗುರುತಿಸಿದ ಶಾಲೆಗಳಿಗೆ ಕಳುಹಿಸಲಾಗುತ್ತದೆ. ಊಟದ ಜತೆಗೆ ಮೂಲ ಸೌಕರ್ಯ ಇರುತ್ತದೆ. ಪ್ರತಿ ಕ್ವಾರಂಟೈನ್‌ ಸಂಸ್ಥೆಗೂ ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುತ್ತದೆ.
-ರಮೇಶ್‌ ಬಾಬು
ತಹಶೀಲ್ದಾರ್‌, ಪುತ್ತೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next