ಹಾವೇರಿ: ಮಕ್ಕಳು ಸೀರೆಯಿಂದ ಕಟ್ಟಿದ ಜೋಕಾಲಿಯಲ್ಲಿ ಕುಳಿತು ಆಡಿ ಸಂಭ್ರಮಿಸುವುದುನ್ನು ನಾವು ನೋಡಿರುತ್ತೇವೆ.
ಆದರೆ ಕೆಲವು ಸಂದರ್ಭಗಳಲ್ಲಿ ಇಂತಹ ಸೀರೆ ಜೋಕಾಲಿಗಳೇ ಮಕ್ಕಳ ಪಾಲಿಗೆ ಉರುಳಾಗಿಬಿಡುತ್ತವೆ.
ಇಂತಹುದೇ ಒಂದು ದಾರುಣ ಘಟನೆ ಹಾವೇರಿ ಜಿಲ್ಲೆಯ ಸಂಗನೂರಿನಲ್ಲಿ ನಡೆದಿದೆ.
11 ವರ್ಷದ ಭಾಗ್ಯ ಮಾಲತೇಶ ದ್ಯಾವಣ್ಣನವರ ಎಂಬ ಬಾಲಕಿಯೇ ಹೀಗೆ ಸೀರೆಯ ಜೋಕಾಲಿ ಉರುಳಾಗಿ ಪರಿಣಮಿಸಿ ಮೃತಪಟ್ಟವಳಾಗಿದ್ದಾಳೆ.
ಭಾಗ್ಯ ತನ್ನ ಮನೆಯ ಮುಂಭಾಗದಲ್ಲಿ ಕಟ್ಟಿದ್ದ ಸೀರೆಯ ಜೋಕಾಲಿಯಲ್ಲಿ ಕುಳಿತು ಆಟವಾಡುತ್ತಿದ್ದ ಸಂದರ್ಭದಲ್ಲಿ ಆಕೆಯ ಕುತ್ತಿಗೆಗೆ ಆಕಸ್ಮಿಕವಾಗಿ ಸೀರೆ ಸುತ್ತಿಕೊಂಡಿದೆ. ಇದರಿಂದಾಗಿ ಬಾಲಕಿಯ ಉಸಿರಾಟಕ್ಕೆ ತೊಂದರೆಯಾಗಿ ನೇಣು ಬಿಗಿದಂತಾಗಿ ಈಕೆ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದೀಗ ಮಕ್ಕಳಿಗೆ ಕೋವಿಡ್ ರಜಾ ಕಾಲವಾಗಿದ್ದು ಮಕ್ಕಳ ಚಟುವಟಿಕೆಗಳ ಕುರಿತು ಹೆತ್ತವರು ಹಾಗೂ ಮನೆಯಲ್ಲಿರುವವರು ಗಮನಹರಿಸುವುದು ಅತೀ ಅಗತ್ಯವಾಗಿದೆ.