Advertisement

ಕೊಲೆ ಪ್ರಕರಣ ದಾಖಲಿಸಿದ ಪೊಲೀಸರು

11:24 AM Jul 02, 2018 | |

ಹೊಸದಿಲ್ಲಿ: ಆಘಾತಕಾರಿ ಬೆಳವಣಿಗೆಯಲ್ಲಿ ಹೊಸದಿಲ್ಲಿಯ ಒಂದೇ ಕುಟುಂಬದ 11 ಮಂದಿಯ ಶವಗಳು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಎಲ್ಲರ ಕೈಗಳನ್ನೂ ಹಿಂದಕ್ಕೆ ಕಟ್ಟಿರುವುದಲ್ಲದೇ, ಕಣ್ಣಿಗೂ ಬಟ್ಟೆ ಕಟ್ಟಲಾಗಿದೆ. ಮೊದಲಿಗೆ ಆತ್ಮಹತ್ಯೆ ಎಂದು ಹೇಳಿದ್ದ ದಿಲ್ಲಿ ಪೊಲೀಸರು, ಇದೀಗ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Advertisement

ಮೃತರಲ್ಲಿ ನಾಲ್ವರು ಪುರುಷರು, ಮೂವರು ಮಹಿಳೆಯರು, ನಾಲ್ವರು ಬಾಲಕಿಯರು ಸೇರಿದ್ದಾರೆ. ಒಂಬತ್ತು ಮಂದಿ ಕಿಟಕಿ ಸರಳಿಗೆ ನೇಣು ಹಾಕಿ ಕೊಂಡಿರುವ ಸ್ಥಿತಿಯಲ್ಲಿ, ಒಬ್ಬ ಮಹಿಳೆ ಬಾಗಿಲಿನ ಚಿಲಕಕ್ಕೆ ನೇಣು ಬಿಗಿದು ಕೊಂಡಂತೆ ಹಾಗೂ ಒಬ್ಬ ಮಹಿಳೆಯ ಶವ ನೆಲದ ಮೇಲೆ ಪತ್ತೆಯಾಗಿದೆ. 

ಇದು ಉತ್ತರ ದಿಲ್ಲಿಯ ಸಂತ್‌ ನಗರದಲ್ಲಿನ ರಾಜಸ್ಥಾನಿ ಕುಟುಂಬವಾಗಿದ್ದು, ಕಿರಾಣಿ ಮತ್ತು ಪ್ಲೆವುಡ್‌ ಅಂಗಡಿ ನಡೆಸುತ್ತಿದೆ. ಜತೆಗೆ ಮನೆಯಲ್ಲಿ ಸದ್ಯದಲ್ಲೇ ವಿವಾಹ ಕಾರ್ಯಕ್ರಮವೊಂದನ್ನು ಆಯೋಜಿಸಲು ತಯಾರಿ ನಡೆದಿತ್ತು ಎಂದೂ ಮೂಲಗಳು ತಿಳಿಸಿವೆ.

ರವಿವಾರ ಬೆಳಗ್ಗೆ 7.30ರ ವೇಳೆಗೆ ಈ ಘಟನೆ ಬೆಳಕಿಗೆ ಬಂದಿದೆ. ಬೆಳಗ್ಗೆ ಯಾರೂ ಮನೆಯಿಂದ ಹೊರಗೆ ಬರದ ಕಾರಣ ನೆರೆಮನೆಯವರು ಕಿಟಕಿ ಮೂಲಕ ನೋಡಿದಾಗ ವಿಚಾರ ಗೊತ್ತಾಗಿದೆ. ಸದ್ಯಕ್ಕೆ ಇದು ಆತ್ಮಹತ್ಯೆಯೇ ಅಥವಾ ಕೊಲೆಯೇ ಎಂಬ ಬಗ್ಗೆ ನಿರ್ಧಾರಕ್ಕೆ ಬರಲಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಸಿಎಂಅರವಿಂದ್‌ ಕೇಜ್ರಿವಾಲ್‌, ಬಿಜೆಪಿ ನಾಯಕ ಮನೋಜ್‌ ತಿವಾರಿ ಸೇರಿದಂತೆ ಹಲವರು ಭೇಟಿ ನೀಡಿದ್ದಾರೆ.
 

ಮಾಟ-ಮಂತ್ರದ ನೆರಳು
ಮೃತರ ಮನೆಯಲ್ಲಿ ಕೆಲವೊಂದು ಪತ್ರಗಳು ಸಿಕ್ಕಿದ್ದು, ಅವುಗಳಲ್ಲಿರುವ ಅಂಶಗಳನ್ನು ನೋಡಿದರೆ, ಈ ಪ್ರಕರಣಕ್ಕೆ ಮಾಟ-ಮಂತ್ರದ ನಂಟಿದೆಯೇ ಎಂಬ ಶಂಕೆ ಮೂಡುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪತ್ರಗಳಲ್ಲಿ ಬರೆದಿರುವ ಅಂಶಗಳಿಗೂ, ಮೃತದೇಹಗಳ ಕಣ್ಣು, ಬಾಯಿಗಳನ್ನು ಕಟ್ಟಿರುವ ರೀತಿಗೂ ಸಾಮ್ಯತೆ ಇದೆ. ಮೃತರಲ್ಲೇ ಒಬ್ಬ ಉಳಿದ 10 ಮಂದಿಯನ್ನು ಕೊಂದು, ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಮೊದಲಿಗೆ ಆಹಾರದಲ್ಲಿ ಮತ್ತು ಬರಿಸುವ ವಸ್ತು ಬೆರೆಸಿ, ಎಲ್ಲರ ಪ್ರಜ್ಞೆ ತಪ್ಪಿಸಲಾಗಿದೆ. ಈ ವೇಳೆ ಒಬ್ಟಾಕೆಗೆ ಎಚ್ಚರವಾಗಿದ್ದು, ಆಕೆ ಬೊಬ್ಬಿಡಬಾರದು ಎಂಬ ಕಾರಣಕ್ಕೆ ಅವಳ ಕತ್ತು ಸೀಳಿ ಕೊಲೆಗೈದಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next