Advertisement

ಲೋಕೋಪಯೋಗಿ ಇಲಾಖೆಗೆ 11 ಸಾವಿರ ಕೋಟಿ ಮೀಸಲು

12:57 PM Mar 13, 2022 | Team Udayavani |

ಮಹಾಲಿಂಗಪುರ: ರಾಜ್ಯ ಸರ್ಕಾರದ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಲೋಕೋಪಯೋಗಿ ಇಲಾಖೆಗೆ 11 ಸಾವಿರ ಕೋಟಿ ಅನುದಾನವನ್ನು ಮೀಸಲಿಡಲಾಗಿದೆ ಎಂದು ಲೋಕೋಪಯೋಗಿ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಹೇಳಿದರು.

Advertisement

ಶನಿವಾರ ಪಟ್ಟಣದ ಪುರಸಭೆ ಉದ್ಯಮ ನಿಧಿಯ ಅನುದಾನದಲ್ಲಿ ಗುಂಡದ ಭಾಂವಿ ಹತ್ತಿರ ನಿರ್ಮಿಸಿರುವ ಮಹಾಲಿಂಗೇಶ್ವರ ತಿನಿಸು ಕಟ್ಟೆ ವಾಣಿಜ್ಯ ಮಳಿಗೆ ಹಾಗೂ ಎಸ್‌ಎಫ್‌ಸಿ ಯೋಜನೆಯಲ್ಲಿನ ಹಿಂದೂ ರುದ್ರಭೂಮಿ ರಸ್ತೆಯ ಅಲಂಕಾರಿಕ ವಿದ್ಯುತ್‌ ದೀಪ, 15ನೇ ಹಣಕಾಸು ಯೋಜನೆಯಡಿಯಲ್ಲಿ ಮಹಾಲಿಂಗೇಶ್ವರ ದೇವಸ್ಥಾನ ರಸ್ತೆಯ ಅಲಂಕಾರಿಕ ವಿದ್ಯುತ್‌ ದೀಪಗಳ ಉದ್ಘಾಟನೆ, ಪದವಿ ಪೂರ್ವಕಾಲೇಜಿನ ನೂತನ ಕಟ್ಟಡ ಹಾಗೂ ಕೌಜಲಗಿ ನಿಂಗಮ್ಮ ರಂಗಮಂದಿರ ಉದ್ಘಾಟಿಸಿ ಅವರು ಮಾತನಾಡಿದರು.

ಬಿಜೆಪಿ ಸರ್ಕಾರದಲ್ಲಿ 7 ತಿಂಗಳಲ್ಲಿ ಲೋಕೋಪಯೋಗಿ ಇಲಾಖೆಯಿಂದ ರಾಜ್ಯ ಹೆದ್ದಾರಿ ಎಚ್‌ಎಸ್‌ಡಿಪಿಯಿಂದ 3500 ಕೋಟಿ, 1500 ಕೋಟಿ, ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಎಸ್‌ಸಿಪಿ ಟಿಎಸ್‌ಪಿ ಯೋಜನೆಯಲ್ಲಿ 1410 ಕೋಟಿ ಅನುದಾನ, ಪ್ರವಾಹ ಪೀಡಿತ ರಸ್ತೆಗಳ ಅಭಿವೃದ್ಧಿಗೆ 900 ಕೋಟಿ ಸೇರಿದಂತೆ 7310 ಕೋಟಿ ರೂ. ಅನುದಾನವನ್ನು ಲೋಕೋಪಯೋಗಿ ಇಲಾಖೆಯಿಂದ ಬಿಡುಗಡೆ ಮಾಡಲಾಗಿದೆ ಎಂದರು.

ಬಿಜೆಪಿ ಸರ್ಕಾರ ರಚನೆಯಾದಾಗ ರಾಜ್ಯದಲ್ಲಿ ವಿಪರೀತ ಪ್ರವಾಹ ನಂತರ ಎರಡು ವರ್ಷ ಕೋವಿಡ್‌-19 ಕಾಡಿದರೂ ಸಹ, ಪ್ರಧಾನಿ ಮೋದಿ ಕೋವಿಡ್‌ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಿ.ಎಸ್‌.ಯಡಿಯೂರಪ್ಪನವರು ಹಾಗೂ ಸಿಎಂ ಬೊಮ್ಮಾಯಿ ಅವರು ಸಹ ರಾಜ್ಯದಲ್ಲಿ ಕೋವಿಡ್‌ ಹಿಮ್ಮೆಟ್ಟಿಸುವ ಕೆಲಸ ಮಾಡಿದ್ದಾರೆ ಎಂದರು.

ಕಲೆ ಮತ್ತು ಕಲಾವಿದರನ್ನು ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಸುಮಾರು 3 ಕೋಟಿ ವೆಚ್ಚದಲ್ಲಿ ಕೌಜಲಗಿ ನಿಂಗಮ್ಮ ರಂಗಮಂದಿರ ನಿರ್ಮಿಸಿದ್ದು ಸ್ವಾಗತಾರ್ಹ ಬೆಳವಣಿಗೆ. ಕೋವಿಡ್‌ ಸಂಕಷ್ಟದ ನಡುವೆಯೂ ತೇರದಾಳ ಶಾಸಕ ಸಿದ್ದು ಸವದಿಯವರು ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ. ಲೋಕೋಪಯೋಗಿ ಇಲಾಖೆಯಿಂದ ಸವದಿಯವರು 100 ಕೋಟಿಗೂ ಅಧಿ ಕ ಅನುದಾನವನ್ನು ತಂದು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ ಎಂದರು.

Advertisement

ಕಲಾವಿದ ರವಿ ಸೋರಗಾಂವಿ ಮಾತನಾಡಿ, ಕಲಾವಿದರ ಬಳಗದ ಬಹುದಿನಗಳ ಕನಸು ಇಂದು ನನಸಾಗಿದೆ. ಕೌಜಲಗಿ ನಿಂಗಮ್ಮ ಭವನವು ಜಿಲ್ಲೆಯಲ್ಲಿಯೇ ಮಾದರಿ ಭವನವಾಗಿದೆ. ದಕ್ಷಿಣ ಕನ್ನಡದಲ್ಲಿ ಯಕ್ಷಗಾನ ಕಲೆಯು ಬೆಳೆದಂತೆ ಬಾಗಲಕೋಟೆ ಜಿಲ್ಲೆಯಲ್ಲಿ ಶ್ರೀಕೃಷ್ಣ ಪಾರಿಜಾತ ಕಲೆಯ ಉಳಿಸಿ-ಬೆಳೆಸುವಂತಹ ಕೆಲಸ ಆಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಸಿದ್ದು ಸವದಿ ಮಾತನಾಡಿ, ಜಾನಪದ ಕಲೆಗಳ ಉಳಿಗಾಗಿ ಈ ಭವನವು ಉಯಯೋಗವಾಗಲಿ. ತೇರದಾಳ ಮತಕ್ಷೇತ್ರದಲ್ಲಿ ಅತಿ ಹೆಚ್ಚು ಕಲಾವಿದರು ಕಲಾಸೇವೆ ಮಾಡುತ್ತಿದ್ದಾರೆ. ಕಲಾವಿದರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಪಿಂಚಣಿ ಕೊಡಿಸುವ ಕೆಲಸವನ್ನು ಮಾಡಲಾಗಿದೆ. ಸರ್ಕಾರದಿಂದ 3 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಭವನವು ಕಲಾವಿದರಿಗೆ ಕಡಿಮೆ ವೆಚ್ಚದಲ್ಲಿ ಕಾರ್ಯಕ್ರಮಕ್ಕೆ ಸಿಗುವಂತಹ ವ್ಯವಸ್ಥೆ ಮಾಡಲಾಗುವುದು. ಕಲಾ ಸೇವೆ ಮಾಡುವ ಸಂಘ ಸಂಸ್ಥೆಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಧನಸಹಾಯ ನೀಡಲಾಗುತ್ತಿದೆ. ಅರ್ಹ ಸಂಸ್ಥೆಗಳು ಅರ್ಜಿ ಸಲ್ಲಿಸಿ ಧನ ಸಹಾಯ ಪಡೆದುಕೊಳ್ಳಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next