Advertisement

ಮೂಲಸೌಕರ್ಯಕ್ಕೆ 11 ಕೋ.ರೂ.: ಬೊಮ್ಮಾಯಿ

10:36 AM Jan 09, 2020 | mahesh |

ಉಡುಪಿ: ಪರ್ಯಾಯ ಮಹೋತ್ಸವದ ಸಮಯದಲ್ಲಿ ಉಡುಪಿ ನಗರ ಪ್ರದೇಶಗಳಲ್ಲಿ ನಡೆಯಬೇಕಾದ ಅಭಿವೃದ್ಧಿ ಕಾಮಗಾರಿ, ಸ್ವಚ್ಛತೆ ಮೊದಲಾದವುಗಳ ಸೂಕ್ತ ನಿರ್ವಹಣೆಗೆ ವಿವಿಧ ಇಲಾಖೆಗಳ ಅನುದಾನದ ಮೂಲಕ ಸರಕಾರ ಹಂತಹಂತವಾಗಿ 11 ಕೋಟಿ ರೂ. ವ್ಯಯಿಸಿದೆ ಎಂದು ಗೃಹ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಪರ್ಯಾಯದ ಪೂರ್ವಭಾವಿಯಾಗಿ ಮಠದ ಕಾರ್ಯಾಲಯದಲ್ಲಿ ಕೃಷ್ಣ ಸೇವಾ ಬಳಗದ ಸಹಕಾರದಲ್ಲಿ ಮಂಗಳವಾರ ನಡೆದ ವಿವಿಧ ಇಲಾಖೆಗಳ ಅಧಿಕಾರಿಗಳ ಜತೆಗಿನ ಸಭೆಯಲ್ಲಿ ಅವರು ಮಾತನಾಡಿದರು.
ರಸ್ತೆಗಳ ಅಭಿವೃದ್ಧಿ ಮತ್ತು ರಸ್ತೆ ಗುಂಡಿಗಳನ್ನು ಮುಚ್ಚಿ ನಗರವನ್ನು ಸುಂದರಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಪರ್ಯಾಯದ ಯಶಸ್ಸಿಗಾಗಿ ಜಿಲ್ಲಾಡಳಿತಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲು ಸೂಚಿಸಲಾಗಿದೆ. ಪರ್ಯಾಯ ಮಹೋತ್ಸವಕ್ಕೆ ಆಗಮಿಸುವ ಗಣ್ಯರಿಗೆ, ಭಕ್ತರಿಗೆ, ಪ್ರವಾಸಿಗರಿಗೆ ಹಾಗೂ ಸ್ಥಳೀಯರಿಗೆ ಯಾವುದೇ ಕೊರತೆಯಾಗದಂತೆ ಎಲ್ಲ ವ್ಯವಸ್ಥೆಗಳನ್ನು ಜೋಡಿಸಿಕೊಳ್ಳಲಾಗಿದೆ. ವಸತಿ, ಕುಡಿಯುವ ನೀರು, ಸಂಚಾರ ನಿರ್ವಹಣೆ ಇತ್ಯಾದಿ ವಿಚಾರಗಳ ಕಡೆ ಅಧಿಕಾರಿಗಳು ಹೆಚ್ಚಿನ ಗಮನಹರಿಸಬೇಕು ಎಂದರು. ಪರ್ಯಾಯದ ಸಂದರ್ಭ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಆಗಮಿಸುತ್ತಿದ್ದು ಸಮಸ್ಯೆಗಳಾಗದಂತೆ ಎಲ್ಲ ಇಲಾಖೆಗಳು ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ಸಚಿವರು ಸೂಚಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ರಘುಪತಿ ಭಟ್‌ ಮಾತನಾಡಿ, ಜ. 8ರಂದು ಸ್ವಾಮೀಜಿಯವರ ಪುರಪ್ರವೇಶದ ಮೂಲಕ ಪರ್ಯಾಯ ಮಹೋತ್ಸವಕ್ಕೆ ಚಾಲನೆ ದೊರಕಲಿದೆ. ಜ. 17ರ ರಾತ್ರಿ ಪರ್ಯಾಯ ಮೆರವಣಿಗೆ ನಡೆಯಲಿದೆ. ಜ. 18ರಂದು ಕೃಷ್ಣ ಮಠದಲ್ಲಿ ಅನ್ನಸಂತರ್ಪಣೆ ನಡೆಯಲಿದೆ. ಪ್ರಸ್ತುತ ಪರ್ಯಾಯ ಪೀಠಾಧಿಪತಿ ಪಲಿಮಾರು ಶ್ರೀಗಳಿಗೆ ಜ. 17ರಂದು ಪೌರ ಸಮ್ಮಾನ ನೆರವೇರಲಿದೆ ಎಂದರು.
ಶಾಸಕರಾದ ರಘುಪತಿ ಭಟ್‌, ಸುನಿಲ್‌ ಕುಮಾರ್‌, ಎಡಿಸಿ ಸದಾಶಿವ ಪ್ರಭು, ಎಸ್ಪಿ ವಿಷ್ಣುವರ್ಧನ, ಜಿ.ಪಂ. ಸಿಇಒ ಪ್ರೀತಿ ಗೆಹಲೋಟ್, ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ವೇದಿಕೆಯಲ್ಲಿದ್ದರು. ಕೃಷ್ಣ ಸೇವಾ ಬಳಗದ ಗೋವಿಂದರಾಜ್‌ ಪರ್ಯಾಯದ ಧಾರ್ಮಿಕ ವಿಚಾರಗಳ ಕುರಿತು ಮಾಹಿತಿ ನೀಡಿದರು. ಸಂತೋಷ್‌ ಕುಮಾರ್‌ ವಂದಿಸಿದರು.

ಪ್ರವಾಸ ಪ್ಯಾಕೇಜ್‌
ಜಿಲ್ಲಾಧಿಕಾರಿ ಜಿ. ಜಗದೀಶ್‌ ಮಾತನಾಡಿ, ಪರ್ಯಾಯವನ್ನು ಯಶಸ್ವಿಯಾಗಿಸಲು 3 ತಿಂಗಳ ಹಿಂದೆಯೇ ಸಿದ್ಧತೆಗಳನ್ನು ನಡೆಸಿದ್ದೇವೆ. ನಗರದ 12 ಸ್ಥಳಗಳಲ್ಲಿ 30ಕ್ಕೂ ಅಧಿಕ ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗಿದೆ. ಪರ್ಯಾಯ ಸಂದರ್ಭ ತೀರ್ಥಕ್ಷೇತ್ರ ಸಂದರ್ಶಿಸಲು ಅನುಕೂಲವಾಗುವಂತೆ ಪ್ರವಾಸೋದ್ಯಮ ಮತ್ತು ಸಾರಿಗೆ ಸಂಸ್ಥೆಗಳ ಸಹಕಾರದಲ್ಲಿ ವಿಶೇಷ ಬಸ್‌ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಿರುವುದಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next