ಕೊಪ್ಪಳ: ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ದುಡಿಮೆ ಮಾಡಿದ ಕೂಲಿಕಾರರಿಗೆ ಸರ್ಕಾರದಿಂದ ಕಳೆದ ಎರಡು ತಿಂಗಳಿಂದ ಕೂಲಿ ಹಣವೇ ಬಂದಿಲ್ಲ. ಈ ವರೆಗೂ 11 ಕೋಟಿ ಬರುವುದು ಬಾಕಿಯಿದೆ. ಕೂಲಿಗಾಗಿ ಜನರು ಕಾಯುವಂತ ಸ್ಥಿತಿ ಎದರಾಗಿದೆ.
ಜಿಲ್ಲೆ ಪದೇ ಪದೆ ಬರಕ್ಕೆ ತುತ್ತಾಗುತ್ತಿದೆ. ಒಂದು ವರ್ಷ ಮಳೆಯಾದರೆ ಮತ್ತೂಂದು ವರ್ಷ ಮಳೆಯ ಅಭಾವಎದುರಾಗುತ್ತಿದೆ. ಇದರಿಂದ ಬೇಸತ್ತ ಇಲ್ಲಿನ ಜನತೆ ದುಡಿಮೆ ಅರಸಿ ದೂರದ ಊರುಗಳಿಗೆ ಗುಳೆ ಹೋಗುತ್ತಾರೆ. ಇದು ಕೊಪ್ಪಳ ಜಿಲ್ಲೆಯೊಂದರ ಕಥೆಯಲ್ಲ. ಅನ್ಯ ಜಿಲ್ಲೆ ಸ್ಥಿತಿಯೂ ಹೀಗೆ ಇವೆ. ಇದೆಲ್ಲವನ್ನು ಅರಿತು ಕೇಂದ್ರ ಸರ್ಕಾರವು ಈ ಹಿಂದೆಯೇ ರಾಷ್ಟ್ರೀಯ ಮಹಾತ್ಮ ಗಾಂದಿ ಉದ್ಯೋಗ ಖಾತ್ರಿ ಯೋಜನೆ ಜಾರಿ ಮಾಡಿದೆ. ಆದರೆ ಈ ಯೋಜನೆಯಲ್ಲಿ ಸಕಾಲಕ್ಕೆ ವೇತನ ಪಾವತಿ ಮಾಡಲ್ಲ ಎನ್ನುವ ವೇದನೆ ಕಾರ್ಮಿಕರಲ್ಲಿ ಈಗಲೂ ಕಾಡುತ್ತಿದೆ.
ಗುಳೆ ಹೋಗಬೇಡಿ ಎನ್ನುವ ಜಿಪಂ: ಜಿಲ್ಲೆಯಲ್ಲಿ ಜನರಿಗೆ ಉದ್ಯೋಗ ಖಾತ್ರಿ ಕೆಲಸ ಕೊಡುತ್ತೇವೆ. ಎಲ್ಲಿಯೂ ಗುಳೆ ಹೋಗಬೇಡಿ ಎಂದು ಜಿಪಂ, ತಾಪಂ ಹಾಗೂ ಗ್ರಾಪಂಗಳು ಡಂಗೂರ ಸಾರಿಸುತ್ತಿವೆ. ಕೆಲಸ ಮಾಡಿಸಿಕೊಂಡು ಕೂಲಿಹಣ ಕೊಡಲು ಗೋಳಾಡಿಸುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಜಿಲ್ಲೆಯಲ್ಲಿ ಎರಡು ತಿಂಗಳಿಂದ 11 ಕೋಟಿ ರೂ. ಕೂಲಿ ಹಣ ಬರುವುದು ಬಾಕಿಯಿದೆ. ಇದರಿಂದ ಜನರು ಕೂಲಿ ಕೆಲಸ ಮಾಡಲು ಹಿಂದೂ-ಮುಂದೂ ವಿಚಾರ ಮಾಡುವಂತಾಗಿದೆ.
ಪ್ರಸ್ತುತ ಜನತೆ ಸಕಾಲಕ್ಕೆ ಕೂಲಿ ಹಣ ಕೊಟ್ಟರೆ ಅವರ ಜೀವನ ನಡೆಯುತ್ತದೆ. ಸರ್ಕಾರ ಹಣ ಕೊಡದೇ ಇದ್ದರೆ ಅವರು ಹೇಗೆ ತಾನೆ ಜೀವನ ನಡೆಸಲು ಸಾಧ್ಯ. ಅನಿವಾರ್ಯವಾಗಿ ತುತ್ತಿನ ಜೀವನಕ್ಕಾಗಿ ಮತ್ತೆ ಗುಳೆ ಹೋಗುವುದು ಮಾತ್ರ ತಪ್ಪುತ್ತಿಲ್ಲ. ಕೆಲಸ ಮಾಡಿ ಎಂದು ಅಧಿಕಾರಿ ವರ್ಗ ಹೇಳುತ್ತದೆ. ಆದರೆ ದುಡಿಮೆ ಮಾಡಿಸಿಕೊಂಡು ತಿಂಗಳು ಕಳೆದರೂ ಕೂಲಿ ಹಣ ಬರದಂತಾಗಿದೆ.
ನಿಯಮದಂತೆ ನಡೆಯುತ್ತಿಲ್ಲ: ಕೂಲಿಕಾರರಿಂದ ಕೆಲಸ ಮಾಡಿಸಿಕೊಂಡು ಏಳು ದಿನದೊಳಗೆ ಕೂಲಿ ಹಣ ಬಿಡುಗಡೆ ಮಾಡಬೇಕು ಎಂದು ನಿಯಮವೇ ಹೇಳುತ್ತದೆ. ನೇರ ಜನರ ಖಾತೆಗೆ ಜಮೆ ಮಾಡಬೇಕು. ಒಂದು ವೇಳೆ ಸಕಾಲಕ್ಕೆ ಕೊಡದೇ ಇದ್ದರೆ ಅದಕ್ಕೆ ಬಡ್ಡಿ ಸಮೇತ ಪಾವತಿ ಮಾಡಬೇಕು ಎಂಬ ನಿಯಮವಿದೆ. ಎರಡು ತಿಂಗಳಿಂದ 11 ಕೋಟಿ ಬಿಡುಗಡೆ ಮಾಡಿಲ್ಲ. ಇದಕ್ಕೆ ಯಾರು ಹೊಣೆ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ. ಗಂಗಾವತಿ ತಾಲೂಕಿನಲ್ಲಿ 4,75,39,810 ಬಾಕಿಯಿದ್ದರೆ, ಕೊಪ್ಪಳ ತಾಲೂಕಿನಲ್ಲಿ 1,37,48,651, ಕುಷ್ಟಗಿ ತಾಲೂಕಿನಲ್ಲಿ 4,41,21,191, ಯಲಬುರ್ಗಾ ತಾಲೂಕಿನಲ್ಲಿ 1,23,51,860 ಸೇರಿದಂತೆ ಒಟ್ಟು 11,77,61,512 ನರೇಗಾ ಹಣ ಬಿಡುಗಡೆ ಮಾಡುವುದು ಬಾಕಿಯಿದೆ. ಇದರಿಂದ ಕೂಲಿ ಕಾರ್ಮಿಕರು ಕೆಲಸದ ಹಣಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
-ದತ್ತು ಕಮ್ಮಾರ