Advertisement

ಎಸಿಬಿ ಬಲೆಗೆ ಬಿದ್ದ 11 ಭ್ರಷ್ಟ ಅಧಿಕಾರಿಗಳು

12:00 PM Dec 14, 2017 | |

ಬೆಂಗಳೂರು: ಆದಾಯ ಮೀರಿ ಆಸ್ತಿ ಸಂಪಾದಿಸಿದ ಮಾಹಿತಿ ಸಂಬಂಧ ಬೆಂಗಳೂರು,ತುಮಕೂರು, ಚಿಕ್ಕಬಳ್ಳಾಪುರ ಸೇರಿ 
ದಂತೆ ರಾಜ್ಯದ 8 ಜಿಲ್ಲೆಗಳ ವ್ಯಾಪ್ತಿಯಲ್ಲಿ 11 ಅಧಿಕಾರಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಬುಧವಾರ ಏಕಕಾಲಕ್ಕೆ ದಾಳಿ ನಡೆಸಿದ್ದು, ಕೋಟ್ಯಂತರ ರೂ.ಮೌಲ್ಯದ ಅಕ್ರಮ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

Advertisement

ವಿಧಾನಸೌಧದ ಪಕ್ಕದಲ್ಲೇ ಇರುವ ಎಂ.ಎಸ್‌. ಬಿಲ್ಡಿಂಗ್‌ನ ಡೈರೆಕ್ಟರ್‌ ಆಫ್ ಟೌನ್‌ ಆ್ಯಂಡ್‌ ಕಂಟ್ರಿ ಪ್ಲಾನಿಂಗ್‌ ಜಂಟಿ ನಿರ್ದೇಶಕ ಎಂ.ಸಿ. ಶಶಿಕುಮಾರ್‌, ಬೆಂಗಳೂರಿನ ಕಾರ್ಮಿಕ ಭವನದ ಫ್ಯಾಕ್ಟರಿ ಮತ್ತು ಬಾಯ್ಲರ್ಸ್‌ ವಿಭಾಗದ ಜಂಟಿ ನಿರ್ದೇಶಕ ಎಸ್‌.ಎಂ.ವಾಸಣ್ಣ, ಬಸವನಗುಡಿ ಬಿಬಿಎಂಪಿ ಉಪವಿಭಾಗದ ಸಹಾಯಕ ಎಂಜಿನಿಯರ್‌ ಜಿ.ವಿ.ತ್ಯಾಗರಾಜ್‌, ಚಿಕ್ಕಬಳ್ಳಾಪುರದ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಡಿ.ಹೇಮಂತ್‌,ಕೊರಟಗೆರೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಜಿ.ಸಿ.ಜಗದೀಶ್‌, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೃಷಿ ಸಹಾಯಕ ನಿರ್ದೇಶಕ ಫ್ರಾನಿಸ್‌ ಫೌಲ್‌ ಮಿರಾಂಡಾ, ಉತ್ತರ ಕನ್ನಡದ ಅಂಕೋಲಾ ಅರಣ್ಯ ಸಂರಕ್ಷಿತ ವಲಯ ಅರಣ್ಯಾಧಿಕಾರಿ ಪಾಂಡುರಂಗ ಕೇಶವ ಪೈ, ಕಲಬುರಗಿಯ ಸಣ್ಣ ನೀರಾವರಿ ಇಲಾಖೆಯ ಕಾರ್ಯ ನಿರ್ವಾಹಕ ಅಭಿಯಂತರ ಎಚ್‌.ಬಿ. ಮಲ್ಲಪ್ಪ, ಬಳ್ಳಾರಿ ವಿಜಯನಗರ ಪ್ರದೇಶ ಅಭಿವೃದ್ದಿ ಪ್ರಾಧಿಕಾರ ಆಯುಕ್ತ ಎಸ್‌. ಪಾಷಾ ವಲಿ, ಮಂಡ್ಯ ಜಿಲ್ಲಾ ಪಂಚಾಯತಿ ಕಾರ್ಯ ನಿರ್ವಾಹಕ ಎಂಜಿನಿಯರ್‌ ಚಂದ್ರಹಾಸ್‌, ಬೆಳಗಾವಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಣಾಧಿಕಾರಿ ಸುರೇಶ ಭೀಮಾ ನಾಯ್ಕ ಅವರ ಮನೆ ಮತ್ತು ಕಚೇರಿಗಳ ಮೇಲೆ 60ಕ್ಕೂ ಹೆಚ್ಚಿನ ಅಧಿಕಾರಿಗಳ ತಂಡ ಏಕಕಾಲಕ್ಕೆ ದಾಳಿ ನಡೆಸಿ, ಅಕ್ರಮ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದೆ.

ಬೆಳ್ಳಂಬೆಳಗ್ಗೆ ದಾಳಿ: ಬೆಂಗಳೂರಿನ ಮೂವರು ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ಇಬ್ಬರು ಡಿವೈಎಸ್‌ಪಿ
ನೇತೃತ್ವದಲ್ಲಿ ಬೆಳಗ್ಗೆ 7 ಗಂಟೆ ಸುಮಾರಿಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ರಾತ್ರಿ 8 ಗಂಟೆವರೆಗೆ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ, ಅಪಾರ ಪ್ರಮಾಣದ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಬಸವನಗುಡಿ ಬಿಬಿಎಂಪಿ ಉಪವಿಭಾಗದ ಸಹಾಯಕ ಎಂಜಿನಿಯರ್‌ ಜಿ.ವಿ.ತ್ಯಾಗರಾಜ್‌ ಅವರ ಕಾಮಾಕ್ಯ ಲೇ  ಔಟ್‌ನಲ್ಲಿರುವ ಮನೆ ಮತ್ತು ಬಸವನ ಗುಡಿಯಲ್ಲಿರುವ ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಕಾರ್ಮಿಕ ಇಲಾಖೆ ಜಂಟಿ ನಿರ್ದೇಶಕ ವಾಸಣ್ಣ ನೆಲೆಸಿರುವ ಜೆ.ಪಿ.ನಗರದಲ್ಲಿರುವ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಎಸಿಬಿ ಐಜಿಪಿ ಶರತ್‌ಚಂದ್ರ ತಿಳಿಸಿದ್ದಾರೆ.

ಪರಿಶೀಲನೆ ಬಳಿಕ ಪೂರ್ಣ ಮಾಹಿತಿ ಭ್ರಷ್ಟ ಅಧಿಕಾರಿಗಳ ಆದಾಯ ಮೀರಿ ಸಂಪಾದಿಸಿದ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಎಷ್ಟು ಪ್ರಮಾಣದಲ್ಲಿ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂಬುದರ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ದಾಖಲೆಗಳ ಪರಿಶೀಲನೆ ಬಳಿಕವಷ್ಟೇ ಸಂಪೂರ್ಣ ಮಾಹಿತಿ ಸಿಗಲಿದೆ ಎಂದು ಎಸಿಬಿ ಐಜಿಪಿ ಶರತ್‌ ಚಂದ್ರ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next