Advertisement

11 ಅಭ್ಯರ್ಥಿಗಳ ಅವಿರೋಧ ಆಯ್ಕೆ ಖಚಿತ 

06:00 AM Jun 01, 2018 | Team Udayavani |

ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ವಿಧಾನಪರಿಷತ್‌ನ 11 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಗುರುವಾರ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ನಿಂದ 11 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

Advertisement

ಬಿಜೆಪಿಯಿಂದ ತೇಜಸ್ವಿನಿ ಗೌಡ, ಎನ್‌.ರವಿಕುಮಾರ್‌, ರುದ್ರೇಗೌಡ, ರಘುನಾಥ್‌ರಾವ್‌ ಮಲ್ಕಾಪುರೆ, ಕೆ.ಪಿ.  ನಂಜುಂಡಿ, ಕಾಂಗ್ರೆಸ್‌ನಿಂದ ಸಿ.ಎಂ.
ಇಬ್ರಾಹಿಂ, ಕೆ.ಗೋವಿಂದರಾಜು, ಹರೀಶ್‌ ಕುಮಾರ್‌, ಅರವಿಂದಕುಮಾರ್‌ ಅರಳಿ ಹಾಗೂ ಜೆಡಿಎಸ್‌ನಿಂದ ಬಿ.ಎ. ಫ‌ರೂಕ್‌, ಧರ್ಮೇಗೌಡ ಅವರು ವಿಧಾನಸೌಧದಲ್ಲಿ ಚುನಾವಣಾಧಿಕಾರಿ ಕುಮಾರಸ್ವಾಮಿ ಅವರಿಗೆ ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್‌ ಸದಸ್ಯರು ನಾಮಪತ್ರ ಸಲ್ಲಿಸುವಾಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹಾಗೂ ಕೇಂದ್ರದ ಮಾಜಿ ಸಚಿವ ಕೆ.ಎಚ್‌. ಮುನಿಯಪ್ಪ ಉಪಸ್ಥಿತರಿದ್ದರು.

ಬಿಜೆಪಿ ಸದಸ್ಯರು ನಾಮಪತ್ರ ಸಲ್ಲಿಸುವಾಗ ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ, ಉಪ ನಾಯಕ ಗೋವಿಂದ ಕಾರಜೋಳ, ಕೇಂದ್ರ ಸಚಿವ ಅನಂತಕುಮಾರ್‌ ಪಾಲ್ಗೊಂಡಿದ್ದರು. ಜೆಡಿಎಸ್‌ ಸದಸ್ಯರು ನಾಮಪತ್ರ ಸಲ್ಲಿಸುವಾಗ ಮಾಜಿ ಸಚಿವರಾದ ಎಚ್‌.ಡಿ.ರೇವಣ್ಣ, ಬಂಡೆಪ್ಪ ಕಾಶಂಪೂರ್‌ ಉಪಸ್ಥಿತರಿದ್ದರು. ಶುಕ್ರವಾರ ನಾಮ ಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಮಪತ್ರ ವಾಪಸ್‌ ಪಡೆಯಲು ಶನಿವಾರ ಕಡೆಯ ದಿನವಾಗಿದೆ. ಯಾರೂ ವಾಪಸ್‌ ಪಡೆಯದಿದ್ದರೆ ಅವಿರೋಧ ಆಯ್ಕೆ ಘೋಷಣೆಯಾಗಲಿದೆ.

ಜೆಡಿಎಸ್‌ನಿಂದ ಮೊದಲ ಅಭ್ಯರ್ಥಿ ಬಿ.ಎ.ಫ‌ರೂಕ್‌ ಬಹುತೇಕ ತೀರ್ಮಾನ ಆಗಿತ್ತಾದರೂ ಎರಡನೇ ಅಭ್ಯರ್ಥಿ ಕೊನೇ ಕ್ಷಣದಲ್ಲಿ ನಿರ್ಧರಿಸಲಾಯಿತು. ಪಾಲಿಕೆಯ ಮಾಜಿ ಆಯುಕ್ತ ಡಾ.ಸುಬ್ರಹ್ಮಣ್ಯ, ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಗೋನಾಳ್‌ ಭೀಮಪ್ಪ ಅವರ ಹೆಸರು ಕೇಳಿ ಬಂದಿತ್ತಾದರೂ ಅಂತಿಮ
ಕ್ಷಣದಲ್ಲಿ ಚಿಕ್ಕಮಗಳೂರಿನ ಧರ್ಮೇಗೌಡರನ್ನು ಕಣಕ್ಕಿಳಿಸಲು ನಿರ್ಧರಿಸಲಾಯಿತು.

ಮತದಾನದ ಅವಧಿ ವಿಸ್ತರಣೆ
ಬೆಂಗಳೂರು: ರಾಜ್ಯ ವಿಧಾನಪರಿಷತ್ತಿನ ಮೂರು ಪದವೀಧರ ಹಾಗೂ ಮೂರು ಶಿಕ್ಷಕರ ಕ್ಷೇತ್ರಗಳ ಚುನಾವಣೆಯ ಮತದಾನದ ಅವಧಿಯನ್ನು 2 ಗಂಟೆ ವಿಸ್ತರಿಸಿ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ. ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಚುನಾವಣೆಗೆ ಜೂ.8ರಂದು ಮತದಾನ
ನಡೆಯಲಿದೆ. ಈ ಹಿಂದೆ ಮತದಾನದ ಅವಧಿಯಲ್ಲಿ ಬೆಳಗ್ಗೆ 8ರಿಂದ ಸಂಜೆ 4 ಗಂಟೆವರೆಗೆ ನಿಗದಿಪಡಿಸಲಾಗಿತ್ತು. ಆದರೆ, ರಾಜಕೀಯ ಪಕ್ಷಗಳ ಕೋರಿಕೆಯಂತೆ ಈಗ ಬೆಳಗ್ಗೆ 7ರಿಂದ ಸಂಜೆ 5 ಗಂಟೆವರೆಗೆ ಮತದಾನಕ್ಕೆ ಅವಕಾಶ ನೀಡಲಾಗಿದ್ದು, ಒಟ್ಟು ಮತದಾನದ ಅವಧಿಯನ್ನು 2 ಗಂಟೆ ವಿಸ್ತರಿಸಲಾಗಿದೆ. ಈಶಾನ್ಯ ಪದವೀಧರ ಕ್ಷೇತ್ರದಲ್ಲಿ 10, ನೈಋತ್ಯ ಪದವೀಧರ ಕ್ಷೇತ್ರದಲ್ಲಿ 8, ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ 12, ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ 9, ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ 14 ಹಾಗೂ ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ 22 ಸೇರಿ ಒಟ್ಟು 75 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಜೂ. 8ರಂದು ಮತದಾನ ನಡೆಯಲಿದ್ದು, ಜೂ. 12ಕ್ಕೆ ಫ‌ಲಿತಾಂಶ ಹೊರ ಬೀಳಲಿದೆ. 

Advertisement

ಬಿಜೆಪಿಯಲ್ಲಿ ಅಸಮಾಧಾನ 
ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಅಸಮಾಧಾನ ಭುಗಿಲೆದ್ದಿದೆ. ಟಿಕೆಟ್‌ ವಂಚಿತ ಡಿ.ಎಸ್‌.ವೀರಯ್ಯ ಹಾಗೂ ಬಿ.ಜೆ.ಪುಟ್ಟಸ್ವಾಮಿ ಬಹಿರಂಗವಾಗಿಯೇ ಅಸಮಾಧಾನ ತೋಡಿಕೊಂಡಿದ್ದಾರೆ. ವಿಧಾನಸಭೆ ಚುನಾವಣೆ ಹೋರಾಟ ಸೇರಿ ಸಂಕಷ್ಟ ಸಮಯದಲ್ಲಿ ಪಕ್ಷದ ಜತೆಗಿದ್ದರೂ ನಮಗೆ ಅವಕಾಶ ಕಲ್ಪಿಸಿಲ್ಲ ಎಂದು ಇಬ್ಬರೂ ನಾಯಕರು ಬೇಸರಗೊಂಡಿದ್ದಾರೆ. ಹಿಂದುಳಿದ ವರ್ಗದ ಕೋಟಾದಡಿ ನನಗೆ ಪರಿಷತ್‌ನಲ್ಲಿ ಮತ್ತೂಂದು ಅವಕಾಶ ನೀಡಿ ಪ್ರತಿಪಕ್ಷ ನಾಯಕ ಮಾಡುವ ಭರವಸೆ ನೀಡಲಾಗಿತ್ತು. ಆದರೆ, ಕೊನೆಯಲ್ಲಿ ಟಿಕೆಟ್‌ ಕೊಡದೆ ಅನ್ಯಾಯ ಮಾಡಲಾಗಿದೆ ಎಂದು ಬಿ.ಜೆ.ಪುಟ್ಟಸ್ವಾಮಿ ಆರೋಪಿಸಿದ್ದಾರೆ.

ಇನ್ನು, ಡಿ.ಎಸ್‌.ವೀರಯ್ಯ ಅವರು ಎಸ್‌ಸಿ ಸಮುದಾಯದ ಕೋಟಾದಡಿ ಅವಕಾಶ ಸಿಗುವ ನಿರೀಕ್ಷೆಯಲ್ಲಿದ್ದರು. ಟಿಕೆಟ್‌ ಸಿಗದಿದ್ದರಿಂದ ಬೇಸರಗೊಂಡಿದ್ದು ಆಪ್ತರ ಮುಂದೆ ನನ್ನ ಹಿರಿತನಕ್ಕೆ ಬೆಲೆ ಕೊಡಲಿಲ್ಲ ಎಂದು ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಅಲ್ಪಸಂಖ್ಯಾತರ ಕೋಟಾದಡಿ ಅಬ್ದುಲ್‌ ಅಜೀಂ ಸಹ ಪರಿಷತ್‌ಗೆ ಅವಕಾಶ ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ, ಅವಕಾಶ ಸಿಕ್ಕಿಲ್ಲ. ಚುನಾವಣೆಯಲ್ಲಿ ಬಿಜೆಪಿಗೆ ಐದು ಸ್ಥಾನ  ಗೆಲ್ಲಲು ಅವಕಾಶವಿದ್ದು, 128 ಆಕಾಂಕ್ಷಿಗಳಿದ್ದರು. ರಾಜ್ಯ ಸಮಿತಿಯು ಪಟ್ಟಿ ಅಂತಿಮಗೊಳಿಸಲು ಸಾಧ್ಯವಾಗದೆ ಕೇಂದ್ರ ಸಮಿತಿಗೆ ಕಳುಹಿಸಿತ್ತು. ಅಲ್ಲಿ, ತೇಜಸ್ವಿನಿ ಗೌಡ, ಎನ್‌.ರವಿಕುಮಾರ್‌, ರುದ್ರೇಗೌಡ, ರಘುನಾಥ್‌ರಾವ್‌ ಮಲ್ಕಾಪುರೆ, ಕೆ.ಪಿ.ನಂಜುಂಡಿ ಹೆಸರು ಅಂತಿಮಗೊಳಿಸಿ ಪ್ರಕಟಿಸಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next