Advertisement

ಹವಾಲಾ ದಂಧೆ: ಚೀನಾ, ಟಿಬೆಟ್‌ ಪ್ರಜೆಗಳು ಸೇರಿ 11 ಮಂದಿ ಬಂಧನ

09:06 PM Jun 12, 2021 | Team Udayavani |

ಬೆಂಗಳೂರು: ಪರ್ವ ಬ್ಯಾಂಕ್‌ ಅಪ್‌ ಮೂಲಕ ಜನರಿಂದ ನೂರಾರು ಕೋಟಿ ರೂ. ಸಂಗ್ರಹಿಸಿ ವಂಚಿಸಿದ ಪ್ರಕರಣದಲ್ಲಿ ಚೀನಾ ಮತ್ತು ಟೆಬೆಟ್‌ನ ನಾಲ್ವರು ಪ್ರಜೆಗಳು ಸೇರಿ 11 ಮಂದಿಯನ್ನ ಸಿಐಡಿಯ ಸೈಬರ್‌ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಇದೇ ವೇಳೆ ಆರೋಪಿಗಳು ಹವಾಲಾ ದಂಧೆ ಮೂಲಕ ವ್ಯವಹಾರ ನಡೆಸುತ್ತಿದ್ದರು ಎಂಬುದು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

ರೇಜೋರ್‌ ಪೇ ಕಂಪನಿಯ ಅಧಿಕಾರಿಗಳು ವಂಚಕ 13 ಕಂಪನಿಗಳ ವಿರುದ್ಧ ದೂರು ನೀಡಿದ ಮೇರೆಗೆ ತನಿಖೆ ನಡೆಸಿ ಚೀನಾದ ಇಬ್ಬರು ಪ್ರಜೆಗಳು, ಟಿಬೆಟ್ನ ಇಬ್ಬರು ಪ್ರಜೆಗಳು, ಸ್ಥಳೀಯ ಐವರು ನಿರ್ದೇಶಕರು ಸೇರಿ 11 ಮಂದಿಯನ್ನು ಬಂಧಿಸಲಾಗಿದೆ. ಪ್ರಕರಣದ ಕಿಂಗ್‌ ಪಿನ್‌ ಕೇರಳ ಮೂಲದ ಅನಸ್‌ ಅಹ್ಮದ್‌ ತಲೆಮರೆಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ನಡೆಯುತ್ತಿದೆ. ಈತನ ಪತ್ನಿ ಹು ಕ್ಸಿಯೋಲಿನ್‌ ಚೀನಾ ಪ್ರಜೆಯಾಗಿದ್ದು, ಆಕೆಯೂ ಕೃತ್ಯದಲ್ಲಿ ಭಾಗಿಯಾಗಿದ್ದಾಳೆ. ಆಕೆಗೂ ವಿಚಾರಣೆಗೆ ಬರುವಂತೆ ನೋಟಿಸ್‌ ನೀಡಲಾಗಿದೆ.

ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿಗಳು ಇದುವರೆಗೂ ಸುಮಾರು 2,000 ಜನರಿಂದ ಹಣ ಹೂಡಿಕೆ ಮಾಡಿಸಿಕೊಂಡು, ಸುಮಾರು 290 ಕೋಟಿ ವಂಚನೆಯಾಗಿರುವುದು ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದರು.

ಚೀನಾ ಪ್ರಜೆಗಳ ನಿರ್ವಹಣೆ: ಅನಸ್‌ ಅಹ್ಮದ್‌ ಹೋಸ್ಟ್‌ ಮಾಡಿರುವ ಆನ್‌ ಲೈನ್‌ ರಮ್ಮಿ ಅಪ್ಲಿಕೇಷನ್‌ ಅನ್ನು ಪರ್ವ ಬ್ಯಾಂಕ್‌ ಮತ್ತು ಸನ್‌ ಫ್ಯಾಕ್ಟರಿ ಅಪ್‌ಗ್ಳನ್ನಾಗಿ ಬದಲಾಯಿಸಿ ಸಾರ್ವಜನಿಕರಿಂದ ಹಣ ಹೂಡಿಕೆ ಮಾಡಿಸುತ್ತಿದ್ದ ಆರೋಪಿಗಳು ದಿನ ಮತ್ತು ವಾರದ ಲೆಕ್ಕದಲ್ಲಿ ಬಡ್ಡಿ ಸಮೇತ ಹೆಚ್ಚುವರಿ ಹಣ ಕೊಡುವುದಾಗಿ ನಂಬಿಸುತ್ತಿದ್ದರು. ವಿಶೇಷವೆಂದರೆ ಈ ಆಪ್‌ ಗಳ ನಿರ್ವಹಣೆಯನ್ನು ಚೀನಾ ಪ್ರಜೆಗಳು ನೋಡಿಕೊಳ್ಳುತ್ತಿದ್ದರು. ಇದರೊಂದಿಗೆ ಟಿಬೆಟಿನ್‌ ಮತ್ತು ಭಾರತೀಯರನ್ನು ಮಧ್ಯವರ್ತಿಗಳನ್ನಾಗಿ ಮಾಡಿಕೊಂಡು ಚೀನಾ ಪ್ರಜೆಗಳು ದಂಧೆ ನಡೆಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಹವಾಲಾ ದಂಧೆ:
ಕೇರಳದ ಮೂಲದ ವ್ಯಾಪಾರಿ ಅನಸ್‌ ಅಹ್ಮದ್‌ ಹವಾಲಾ ಹಾಗೂ ಅಕ್ರಮ ಹಣ ವರ್ಗಾವಣೆ ದಂಧೆ ಮೂಲಕ ವ್ಯವಹಾರ ನಡೆಸುತ್ತಿದ್ದು, ಚೀನಾ ದೇಶದ ಹವಾಲಾ ಏಜೆಂಟರ ಜತೆ ಸಂಪರ್ಕವಿಟ್ಟುಕೊಂಡಿದ್ದಾನೆ. ಅಕ್ರಮ ಹಣ ವರ್ಗಾವಣೆಗಾಗಿ ಬುಲ್‌ಫಿಂಚ್‌ ಟೆಕ್ನಾಲಜೀಸ್‌, ಎಚ್‌ ಆ್ಯಂಡ್‌ ಎಸ್‌ ವೆಂಚರ್ಸ್‌, ಕ್ಲಿಪ್ಪೊರ್ಡ್‌ ವೆಂಚರ್ಸ್‌ ಹಾಗೂ ಬಯೋಸಾಪ್ಟ್ ವೆಂಚರ್ಸ್‌ ಕಂಪನಿ ತೆರೆದಿದ್ದ ಎಂಬುದು ಗೊತ್ತಾಗಿದೆ.

Advertisement

2400 ಖಾತೆ ಜಪ್ತಿ
ಸಾರ್ವಜನಿಕರಿಂದ ಆರೋಪಿಗಳು ಕೋಟ್ಯಂತರ ರೂ. ಸಂಗ್ರಹಿಸಿದ್ದ ದೇಶದ ವಿವಿಧ ಬ್ಯಾಂಕ್‌ ಗಳ ಸುಮಾರು 2400 ರೂ. ಬ್ಯಾಂಕ್‌ ಖಾತೆಗಳನ್ನು ಜಪ್ತಿ ಮಾಡಲಾಗಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.

ಕೇರಳದ ವಕೀಲನ ಸಹಕಾರ
ಆರೋಪಿಗಳ ಕೋಟ್ಯಂತರ ರೂ. ವ್ಯವಹಾರಕ್ಕೆ ಬೆಂಗಳೂರಿನಲ್ಲಿರುವ ಕೇರಳ ಮೂಲದ ವಕೀಲರ ಸಹಕಾರವಿದೆ ಎಂದು ಗೊತ್ತಾಗಿದೆ. ನಕಲಿ ಕಂಪನಿಗಳು ಸ್ಥಾಪಿಸಲು, ಹವಾಲಾ ಹಾಗೂ ಅಕ್ರಮ ಹಣ ವರ್ಗಾವಣೆ ಮಾಡಲು ವಕೀಲರು ಆರೋಪಿಗಳಿಗೆ ಸಹಾಯ ಮಾಡಿದ್ದಾರೆ. ಅವರ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಆ ವ್ಯಕ್ತಿಯೂ ಚೀನಾ ಪ್ರಜೆಯನ್ನೇ ಮದುವೆಯಾಗಿದ್ದಾರೆ ಎಂದು ಸಿಐಡಿ ಪೊಲೀಸರು ತಿಳಿಸಿದ್ದಾರೆ.

ಸಿಐಡಿ ಮನವಿ
ಪರ್ವ ಬ್ಯಾಂಕ್‌ ಮತ್ತು ಸನ್‌ ಫ್ಯಾಕ್ಟರಿ ಆಪ್‌ ಮೂಲಕ ಹಣ ಹೂಡಿಕೆ ಮಾಡಿ ವಂಚನೆಗೊಳಗಾಗಿದ್ದರೆ ಅಂತಹ ಸಾರ್ವಜನಿಕರು ಕೂಡಲೇ ಸಿಐಡಿ ಸೈಬರ್‌ ಕ್ರೈಂ ಠಾಣೆಗೆ ದೂರು ನೀಡಬಹುದು. ಜತೆಗೆ ಹೆಚ್ಚಿನ ಬಡ್ಡಿ ಹಾಗೂ ಆಕರ್ಷಕ ಕೊಡುಗೆ ನೀಡುವ ಆಪ್‌ ಮತ್ತು ವೆಬ್‌ ಸೈಟ್‌ ಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಸಿಐಡಿ ಸೈಬರ್‌ ಕ್ರೈಂ ಪೊಲೀಸರು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next