Advertisement

ವನ್ಯಜೀವಿ ದಾಳಿಯಿಂದ ಸಾವನ್ನಪ್ಪಿದವರ ಕುಟುಂಬಗಳಿಗೆ 10 ಲ. ರೂ. ಪರಿಹಾರ

09:08 AM Sep 28, 2019 | sudhir |

ಬೆಂಗಳೂರು: ವನ್ಯಜೀವಿ ಮತ್ತು ಮಾನವ ಸಂಘರ್ಷದಲ್ಲಿ ಮೃತಪಟ್ಟವರ ಕುಟುಂಬದವರಿಗೆ ನೀಡುವ ಪರಿಹಾರ ಮೊತ್ತವನ್ನು 10 ಲ. ರೂ. ಗಳಿಗೆ ಏರಿಕೆ ಮಾಡುವ ಪ್ರಸ್ತಾವಕ್ಕೆ ರಾಜ್ಯ ವನ್ಯಜೀವಿ ಮಂಡಳಿ ಅಧ್ಯಕ್ಷರಾದ ಸಿಎಂ ಯಡಿಯೂರಪ್ಪ ಒಪ್ಪಿಗೆ ನೀಡಿದ್ದಾರೆ.

Advertisement

ಗೃಹ ಕಚೇರಿ “ಕೃಷ್ಣಾ’ದಲ್ಲಿ ಗುರುವಾರ ನಡೆದ 12ನೇ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯಿತು. ಸಭೆಯಲ್ಲಿದ್ದ ವನ್ಯಜೀವಿ ಮಂಡಳಿ ಸದಸ್ಯರಾದ ಸಂಜಯ್‌ ಗುಬ್ಬಿ, ಡಾ|ಎನ್‌.ಸಿ. ಶಿವಪ್ರಕಾಶ್‌ ಅವರು ಈ ವಿಷಯ ಪ್ರಸ್ತಾವಿಸಿ ವನ್ಯಜೀವಿ- ಮಾನವ ಸಂಘರ್ಷದಿಂದ ಪ್ರತಿ ವರ್ಷ ಹಲವರು ಮೃತಪಡುತ್ತಿದ್ದು, ಅವರಿಗೆ ನೀಡುತ್ತಿರುವ ಪರಿಹಾರ ಮೊತ್ತ ಕಡಿಮೆ ಇದೆ. ಹಾಗಾಗಿ ಪರಿಹಾರ ಮೊತ್ತ ಹೆಚ್ಚಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಪರಿಹಾರ ಮೊತ್ತವನ್ನು 10 ಲಕ್ಷ ರೂ.ಗೆ ಹೆಚ್ಚಳಕ್ಕೆ ಸೂಚನೆ ನೀಡಿದರು ಎಂದು ಮೂಲಗಳು ಹೇಳಿವೆ.

ಕರಡಿ ವನ್ಯಧಾಮ ಘೋಷಣೆ
ಹಾಸನ ವಿಭಾಗದ ಅರಸೀಕೆರೆ ವಲಯದ ಹಿರೇಕಲ್ಲುಗುಡ್ಡ, ರಾಮೇನಹಳ್ಳಿ, ಚಾಕನಕಟ್ಟೆ, ಗರುಡನಗಿರಿ ಅರಣ್ಯ ವ್ಯಾಪ್ತಿಯ ಸುಮಾರು 10,088.37 ಹೆಕ್ಟೇರ್‌ ಪ್ರದೇಶವನ್ನು “ಕರಡಿ ವನ್ಯಧಾಮ’ವನ್ನಾಗಿ ಘೋಷಿಸುವ ಪ್ರಸ್ತಾವಕ್ಕೆ ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದಾರೆ.

ಭೂಗರ್ಭ ಸ್ಥಾವರ: ಅಧ್ಯಯನ
ಶರಾವತಿ ಜಲಾನಯನ ಪ್ರದೇಶದಲ್ಲಿರುವ ತಲಕಲಲೆ ಮತ್ತು ಗೇರುಸೊಪ್ಪ ಜಲಾಶಯದ ಮಧ್ಯದಲ್ಲಿ 2000 ಮೆ.ವ್ಯಾ. ವಿದ್ಯುತ್‌ ಉತ್ಪಾದನೆಗೆ ಭೂಗರ್ಭ ಸ್ಥಾವರ ಸ್ಥಾಪನೆಗೆ ಸರ್ವೆ ಮತ್ತು ಭೂಗರ್ಭ ಶಿಲಾ ರಚನೆ ಅಧ್ಯಯನ ಕೈಗೊಳ್ಳಲು ಮಂಡಳಿ ಸಭೆ ಅನುಮತಿ ನೀಡಿದೆ.

ಮಡಿಕೇರಿ ಬ್ರಹ್ಮಗಿರಿ ವನ್ಯಜೀವಿ ವಿಭಾಗದ ಬ್ರಹ್ಮಗಿರಿ ವನ್ಯಧಾಮದ ಉರಟಿ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಕೇರಳ ಸರಕಾರದಿಂದ ಕೂಟುಹೊಳೆ ಸೇತುವೆ ನಿರ್ಮಾಣಕ್ಕಾಗಿ 0.177 ಹೆಕ್ಟೇರ್‌ ಅರಣ್ಯ ಪ್ರದೇಶ ನೀಡಲು ಒಪ್ಪಿಗೆ ನೀಡಲಾಗಿದೆ. ಆದರೆ ಮರ ಕಡಿಯದಂತೆ ಷರತ್ತು ವಿಧಿಸಲಾಗಿದೆ. ಕಾರ್ಕಳ ತಾಲೂಕಿನ ನೆಲ್ಲಿಗುಡ್ಡ ಕ್ರಾಸ್‌ನಿಂದ ಕೂಡ್ಲುವರೆಗೆ ಸಂಪರ್ಕಿಸುವ ರಸ್ತೆಯು ಸೋಮೇಶ್ವರ ವನ್ಯ ಜೀವಿಧಾಮದಲ್ಲಿ 9 ಕಿ.ಮೀ. ಡಾಮರು ರಸ್ತೆಯನ್ನು ಕಾಂಕ್ರೀಟ್‌ ರಸ್ತೆಯನ್ನಾಗಿ ಪರಿವರ್ತಿಸಲು ಸಹ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಮೂಲಗಳು ಹೇಳಿವೆ. ಆನೆಗಳನ್ನು ಹಿಮ್ಮೆಟ್ಟಿಸುವ ಗಾರ್ಡ್‌ಗಳ ವೇತನ ಹೆಚ್ಚಳ ಮಾಡಬೇಕೆಂಬ ಅರಣ್ಯ ಇಲಾಖೆ ಅಧಿಕಾರಿಗಳ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ವೇತನ ಹೆಚ್ಚಳಕ್ಕೆ ಒಪ್ಪಿಗೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next